ವಿಜಯಪುರ: ರಷ್ಯಾ ಸಮರ ಸಾರಿದ ಹಿನ್ನೆಲೆಯಲ್ಲಿ ಉಕ್ರೇನಿನಲ್ಲಿ ಅಧ್ಯಯನ ಮಾಡುತ್ತಿದ್ದ ಭಾರತೀಯ ವೈದ್ಯ ವಿದ್ಯಾರ್ಥಿಗಳು ಈಗಾಗಾಲೇ ತಾಯ್ನಾಡಿಗೆ ಮರಳಿದ್ದಾರೆ. ಇವದನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಸರಕಾರ ನಡೆಸಿದ ಪ್ರಯತ್ನ ತಮಗೆಲ್ಲ ಗೊತ್ತೆ ಇದೆ.
ಅಂದು ಅತಂತ್ರರಾಗಿ ಭಾರತಕ್ಕೆ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ ಬಸವ ನಾಡು ವಿಜಯಪುರದ ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನೆ ಕೇಂದ್ರ ಅಧ್ಯಯನ ಮಾಡಿಕೊಡುವ ಮೂಲಕ ಈ ರೀತಿ ಸ್ಪಂದಿಸಿದ ಮೊದಲ ಮೆಡಿಕಲ್ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲ, ದೇಶಾದ್ಯಂದ ಇತರ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಿಗೂ ಮಾದರಿಯಾಗಿತ್ತು. ವಿಜಯಪುರ ಜಿಲ್ಲೆಗೆ ವಾಪಸ್ಸಾಗಿರುವ ಉಕ್ರೇನಿನ 17 ವಿದ್ಯಾರ್ಥಿಗಳು ಈಗಲೂ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ಸಾರೆ.
ಆದರೆ, ಈಗ ಈ ವಿದ್ಯಾರ್ಥಿಗಳಿಗೆ ಹೊಸದೊಂದು ಸಮಸ್ಯೆ ಎದುರಾಗಿದ್ದು, ಇದರ ಪರಿಣಾಮವನ್ನು ಪೋಷಕರೂ ಎದುರಿಸುವಂತಾಗಿದೆ. ಉಕ್ರೇನ್ ನಿಂದ ತಮ್ಮ ಮಕ್ಕಳು ವಾಪಸ್ಸಾಗಿ ಐದು ತಿಂಗಳು ಕಳೆದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ತಮ್ಮ ಮಕ್ಕಳು ಈಗ ಅತಂತ್ರ ಮತ್ತು ಆತಂಕ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಉಭಯ ಸರಕಾರಗಳು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಿರ್ಲಿಪ್ತವಾಗಿವೆ. ನಮ್ಮ ಮಕ್ಕಳು ಮಾನಸಿಕ ಖಿನ್ನತೆಗೊಳಗಾಗಿದ್ದಾರೆ. ವೈದ್ಯರಾಗುವ ಕನಸು ನೂಚ್ಚು ನೂರಾಗುತ್ತಿದೆ. ರಾಜ್ಯ ವೈದ್ಯಕೀಯ ಸಚಿವ ಸುಧಾಕರ್ ನೀಡಿದ್ದ ಭರವಸೆಯೂ ಹುಸಿಯಾಗುತ್ತಿದೆ. ಉಕ್ರೇನ್ ನಿಂದ ವಾಪಸ್ಸಾಗಿರುವ ವೈದ್ಯಕೀಯ ಸ್ಟೂಡೆಂಟ್ ಗಳ ಶಿಕ್ಷಣಕ್ಕೆ ನೆರವು ಸಿಗುತ್ತಿಲ್ಲ ಎಂದು ವಿಜಯಪುರದ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಶಿಕ್ಷಣ ಮುಂದುವರಿಕೆಗೆ ಅವಕಾಶ ಕೊಡಿ. ಸ್ಯಾಂಡ್ ವಿಚ್ ಪ್ರೋಗ್ರಾಂ ಮಾದರಿಯಲ್ಲಿಯೇ ರಾಜ್ಯದ ವೈದ್ಯಕೀಯ ಕಾಲೇಜಿನಲ್ಲಿ ಕಲಿಕೆಗೆ ಅವಕಾಶ ಕೊಡಿ. ವಿಜಯಪುರ ಜಿಲ್ಲೆಯಲ್ಲಿ 17 ವಿದ್ಯಾರ್ಥಿಗಳು ಸೇರಿ ರಾಜ್ಯದಲ್ಲಿ 690 ಕ್ಕೂ ಅಧಿಕ ವೈದ್ಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಉಕ್ರೇನ್ ಆನ್ ಲೈನ್ ಶಿಕ್ಷಣವೂ ಸದ್ಯ ಸ್ಥಗಿತಗೊಳಿಸಿದೆ. ಅಲ್ಲಿನ ಕಾಲೇಜುಗಳ ಸಿಬ್ಬಂದಿ ಬಾಕಿ ಫೀಸ್ ತುಂಬುವಂತೆ ಪೀಡಿಸುತ್ತಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ನಮ್ಮ ಮಕ್ಕಳ ಎಲ್ಲ ಶೈಕ್ಷಣಿಕ ಮೂಲ ದಾಖಲಾತಿಗಳು ಉಕ್ರೇನಿನ ಕಾಲೇಜಿನಲ್ಲಿಯೇ ಉಳಿದಿವೆ. ಫೀಸು ಕಟ್ಟದಿದ್ದರೆ ಕೊರ್ಸು ಮುಗಿಸಿದ ಸರ್ಟಿಫಿಕೇಟ್ ಕೂಡ ಸಿಗಲು ಸಾಧ್ಯವಿಲ್ಲ. ಅಲ್ಲಿ ಕಾಲೇಜುಗಳು ಪುನಾರಂಭದ ಬಗ್ಗೆ ಯಾವುದೇ ಖಾತ್ರಿಯಿಲ್ಲ. ಕಾಲೇಜುಗಳು ಆರಂಭವಾದರೂ ಅಲ್ಲಿನ ಸುರಕ್ಷತೆ ಬಗ್ಗೆ ಆತಂಕವಿದೆ. ಉಕ್ರೇನಿನ ಕಾಲೇಜುಗಳಿಗೆ ನಾವು ಭರಿಸಬೇಕಿರುವ ಶುಲ್ಕಕ್ಕಿಂತಲೂ ಬೇಕಿದ್ದರೆ ಹೆಚ್ಚಿನ ಫೀ ಪಡೆದು ಇಲ್ಲಿ ಭಾರತದಲ್ಲಿ ಭರಿಸಿ ಅಧ್ಯಯನ ಮಾಡಲು ಅವಕಾಶ ನೀಡಬೇಕು. ಅಲ್ಲದೇ, ಈಗ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರವೂ ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳ ಪೋಷಕರಾದ ಧರ್ಮರಾಯ ಮಮದಾಪೂರ, ರಮೇಶ ಪಾಟೀಲ, ರಾಜೇಂದ್ರ ಪಾಟೀಲ, ಶ್ರೀಶೈಲ ವತ್ರ್ತದ, ಮಲ್ಲನಗೌಡ ಕವಡಿಮಟ್ಟಿ, ರಾಜಶೇಖರ ನಾಡಗೌಡ, ವಿಧ್ಶಾಧರ ನ್ಶಾಮಗೊಂಡ, ಕರಣೆ ಮುಂತಾದವರು ಆಗ್ರಹಿಸಿದ್ದಾರೆ. ಎಂದು ಪೋಷಕರು ಆಗ್ರಹಿಸಿದ್ದಾರೆ.