ವಿಜಯಪುರ: ಪ್ರತಿದಿನ ಹೊಸ ಹೊಸ ಸಂಗತಿಗಳನ್ನು ವರದಿ ಮಾಡುವ ಪತ್ರಕರ್ತರು ಸಾರ್ವಜನಿಕರ ಶಿಕ್ಷಕರು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದ್ದಾರೆ.
ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾಡನಾಡಿದರು.
ಪತ್ರಿಕೆಗಳಿಗೆ ಓದುಗರ ಮನಸ್ಸು ವಿಕಾಸಗೊಳಿಸುವ, ಮುಖವಿದೆ, ಸರಕಾರದ ನಡೆ, ನುಡಿ ತಿದ್ದುವ ಮುಖವಿದೆ. ಈ ಮುಖದಲ್ಲಿ ಯಾವ ಮುಖವೂ ವಿಮುಖವಾಗಬಾರದು. ಪತ್ರಿಕೆಗಳಲ್ಲಿ ಕ್ರೀಡೆಗಳಿಗೂ ಒಂದು ಪುಟ ಮೀಸಲಿರುತ್ತದೆ. ಯುವಜನತೆಗೆ ಈ ಪುಟವೇ ಅಚ್ಚುಮೆಚ್ಚು. ಯುವಜನತೆಯ ಆರೋಗ್ಯ ವೃದ್ದಿ, ಕ್ರೀಡಾಪಟುಗಳಂತೆ ಸಾಧನೆ ಮಾಡುವ ದಿವ್ಯ ಪ್ರೇರಣೆ ದೊರಕುತ್ತದೆ ಎಂದು ಅವರು ಹೇಳಿದರು.
ವರದಿಗಾರಿಕೆಗೆ ದೊಡ್ಡ ಇತಿಹಾಸವಿದೆ. ಮಹಾಭಾರತ ಯದ್ಧದ ಸಂದರ್ಭದಲ್ಲಿ ಸಂಜಯ ಎಂಬ ವರದಿಗಾರನಿದ್ದ. ಯುದ್ದದ ಪ್ರತಿಯೊಂದು ಸನ್ನಿವೇಶಗಳ ಕುರಿತು ಧೃತರಾಷ್ಟ್ರನಿಗೆ ಕ್ಷಣ ಕ್ಷಣದ ಸಂದೇಶ ರವಾನಿಸುತ್ತಿದ್ದ. ಮಹಾಭಾರತದ ಯುದ್ಧ ಸಹ ಒಂದು ವರದಿ. ಧೃತರಾಷ್ಟ್ರ ಕ್ಷಣ ಕ್ಷಣಕ್ಕೂ ಸಂಜಯನ ಬಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ. ಸಂಜಯನ ಅಂದಿನ ವರದಿಯನ್ನು ಇಂದಿಗೂ ಎಲ್ಲರೂ ಓದುತ್ತಿದ್ದಾರೆ. ಸಂಜಯ ಭಾವನೆಗಳನ್ನು ವರ್ಣಿಸುವ ಪರಿ ಅದ್ಭುತ. ಅದೇ ರೀತಿಯಲ್ಲಿ ಮೇಘಧೂತವನ್ನು ಕಾಳಿದಾಸ ಬರೆದರು. ಮೇಘ, ಗಾಳಿ ಸಂದೇಶ ವಾಹಕರು. ಚಲಿಸುವ ವಸ್ತುಗಳು ಸಂದೇಹ ವಾಹಕಗಳೇ. ಸೂರ್ಯನ ಕಿರಣ ಸಕಲ ಮಾಹಿತಿಯ ಕಣಜವಾಗಿ ಹೊತ್ತು ತಂದಿರುತ್ತದೆ. ಈ ಗುಂಪೇ ಪತ್ರಕರ್ತರ ಗುಂಪು. ಮಾತುಗಳನ್ನು ಓದಿದರೆ ಮನಸ್ಸಿಗೆ ಸಂತೋಷ ಎನಿಸುವ ಮತ್ತು ಮನಸ್ಸು ಅರಳಿಸುವ ಕೆಲಸ ಪತ್ರಿಕಾ ವ್ಯವಸಾಯವಾಗಿದೆ. ಪತ್ರಿಕೆ ಎದುರಿಗೆ ಇರಬೇಕು. ಕಾಫಿ ಬಟ್ಟಲು ಮುಂದಿರಬೇಕು. ಜಗತ್ತಿನ ಕುರೂಪಗಳು ದೂರವಾಗುವ ಸುದ್ದಿ ಮುಟ್ಟಿಸುವ ಪವಿತ್ರ ಕಾರ್ಯವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.