Media Hugar: 4ನೇ ಅಂಗವಾಗಿ ಪತ್ರಿಕೋದ್ಯಮ ವಿಫಲವಾಗಿದೆ- 5ನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ- ಸುಭಾಷ ಹೂಗಾರ

ವಿಜಯಪುರ: ಸಮಾಜದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ಈಗ ವಿಫಲವಾಗಿದೆ. ವಿಶ್ವಾದ್ಯಂತ ಈಗ 5ನೇ ಅಂಗವಾಗಿ ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಸುಭಾಷ ಹೂಗಾರ ತಿಳಿಸಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಸಾಧಕರಿಗೆ ಸನ್ಮಾನ, ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪತ್ರಿಕೋದ್ಯಮ ವೃತ್ತಿಯ ಮೂಲ ಉದ್ದೇಶ ಮತ್ತು ಆಶಯ ಬದಲಾಗಬಾರದು. ಸಮಾಜದಲ್ಲಿ ತಾಯಿಯ ಪಾತ್ರವನ್ನು ಪತ್ರಿಕೋದ್ಯಮ ನಿರ್ವಹಿಸಬೇಕು. ಪತ್ರಕರ್ತರಲ್ಲಿ ಮತ್ತು ಮಾಧ್ಯಮ ಮುಖ್ಯಸ್ಥರಲ್ಲಿ ತಾಯಿಯಂತೆ ಎಲ್ಲರನ್ನೂ ಸಮಾನವಾಗಿ ಕಾಣುವ ದೃಷ್ಠಿಕೋನವಿರಬೇಕು.. ಸಬಲರಿಗಿಂತ ಅಬಲರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಈಗ ಪೆನ್ನು ಈಗ ಖಡ್ಗಕ್ಕಿಂತ ಮೊನಚಾಗಿಲ್ಲ. ಮೊಂಡಾಗಿ ಬಿಟ್ಟಿದೆ ಎಂದು ಅವರು ಹೇಳಿದರು.

ಮಾಧ್ಯಮಗಳು ಈಗ ಹೆಚ್ಚು ಪ್ರಭಾವ ಬೀರುತ್ತಿಲ್ಲ. ‌ಈ ಮುಂಚೆಯಂತೆ ಜನರಾರೂ ಮಾಧ್ಯಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಪತ್ರಕರ್ತರು ತಮ್ಮ ಮೂಲ ಸಿದ್ಧಾಂತ ಕೈಬಿಟ್ಟಿರುವುದೇ ಪ್ರಮುಖ ಕಾರಣ. ಮಾಧ್ಯಮಗಳು ಈಗ ವ್ಯಕ್ತಿ, ಸಂಸ್ಥೆ, ಸರಕಾತಗಳ‌ ಪಿಆರ್ ಏಜೆನ್ಸಿಯಂತೆ ಕೆಲಸ ಮಾಡುತ್ತಿವೆ. ಹೀಗಾಗಿ ಜನ ಈಗ ಮಾಧ್ಯಮಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಸುಭಾಷ ಹೂಗಾರ ಹೇಳಿದರು.

ಪತ್ರಕರ್ತರು ಸತ್ಯಕ್ಕೆ ಬೆನ್ನು ಮಾಡಿ ಹೊಗಲು ಸಾಧ್ಯವಿಲ್ಲ. ಸತ್ಯವನ್ನು ನೇರವಾಗಿ ಎದುರಿಸಬೇಕು. ಮೌಲ್ಯಗಳ ಅಧಃಪತನ ಎಲ್ಲ ಕ್ಷೇತ್ರಗಳಲ್ಲಿ ಆಗಿದೆ. ಪತ್ರಿಕೋದ್ಯಮವೂ ಎಲ್ಲ ಕ್ಷೇತ್ರಗಳಿಗಿಂತಲೂ ವೇಗವಾಗಿ ಕುಸಿಯುತ್ತಿದೆ. ನಾಲ್ಕನೇ ಅಂಗ ಈಗ ವಿಫಲವಾಗಿದೆ. 5ನೇ ಅಂಗ ಈಗ ಎಲ್ಲೆಡೆ ಬರುತ್ತಿದೆ.‌‌ಸ್ವತಂತ್ರ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದೆ . ಅವರು ಯಾರ ಋಣದಲ್ಲಿಯೂ ಇಲ್ಲ. ಅವರು ಜನರ ಸನಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಹೀಗಾಗಿ ಅವರಿಗೆ ಲಕ್ಷಾಂತರ ಚಂದಾದಾರರಿದ್ದಾರೆ ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳು ವಿಸ್ತರಣೆಯಾಗಿದ್ದರಿಂದ ಈಗ ಎಲ್ಲರ ಕೈಯಲ್ಲಿ ಸ್ನಾರ್ಟಫೋನ್ ಇವೆ. ಮೊಬೈಲ್ ಇದ್ದವರೆಲ್ಲರೂ ಪತ್ರಕರ್ತರಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳು ಎಷ್ಟೋಂದು ಪ್ರಭಾವಶಾಲಿಯಾಗಿವೆ ಎಂದರೆ ಈ ಹಿಂದೆ ಇವುಗಳ ಪ್ರಭಾವದಿಂದಾಗಿ ಕೆಲವು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಧಿಕಾರದಲ್ಲಿದ್ದವರು ಪತನರಾಗಿದ್ದಾರೆ ಎಂದು ಅವರು ಹೇಳಿದರು.

ಮಾಧ್ಯಮಗಳು ಯಾವಾಗಲೂ ಪ್ರತಿಪಕ್ಷದಂತೆ ಕೆಲಸ ಮಾಡಬೇಕು. ಆದರೆ, ಈಗ ಆಡಳಿತ ಪಕ್ಷಗಳಂತೆ ಕೆಲಸ ಮಾಡುತ್ತಿರುವುದು ವಿಪರ್ಯಾಸ ಎಂದು ಸುಭಾಷ ಹೂಗಾರ ಹೇಳಿದರು.

ಈ ಸಂದರ್ಭದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಪೌರಾಯುಕ್ತ ವಿಜಯಕುಮಾರ ಮೆಕ್ಕಳಕಿ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಹಿರಿಯ ಪತ್ರಕರ್ತರಾದ ಪುಂಡಲಿಕ ಬಾಗೋಜಿ, ಸಂಗಮೇಶ ಟಿ. ಚೂರಿ, ಡಿ. ಬಿ. ವಡವಡಗಿ, ಮೋಹನ ಕುಲಕರ್ಣಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌