Street Business: ವಿಜಯಪುರದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಭ್ರಮಾಚರಣೆಯ ಸ್ವನಿಧಿ ಮಹೋತ್ಸವ: ವಿಜಯಪುರದಲ್ಲಿ ಯಶಸ್ವಿ

ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ, ಐತಿಹಾಸಿಕ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಪ್ರಮುಖ ನಗರವಾಗಿ ಆಯ್ಕೆಯಾದ, ಐತಿಹಾಸಿಕ ಹಿನ್ನೆಲೆಯ ವಿಜಯಪುರದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ, ಕೌಶಲಾಭಿವೃದ್ಧಿ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಸ್ವನಿಧಿ ಮಹೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ಕೇಂದ್ರ ಸರಕಾರದ ಮಹತ್ವದ ಈ ಸ್ವನಿಧಿ ಮಹೋತ್ಸವಕ್ಕೆ ರಾಷ್ಟ್ರ ಮಟ್ಟದ 75 ನಗರಗಳು ಹಾಗೂ ಕರ್ನಾಟಕ ರಾಜ್ಯ ಮಟ್ಟದ ಮೂರು ನಗರಗಳ ಪೈಕಿ ವಿಜಯಪುರ ನಗರ ಕೂಡ ಆಯ್ಕೆಯಾಗಿದ್ದರಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮವನ್ನು ವಿಭಿನ್ನವಾಗಿ ನಡೆಸಲಾಯಿತು.

ಸ್ವನಿಧಿ ಮಹೋತ್ಸವದಲ್ಲಿ ಜನರನ್ನು ಸೇರಿಸಲು ಮಹಾನಗರ ಪಾಲಿಕೆ ಮತ್ತು ಪಟ್ಟಣ ಮಾರಾಟ ಸಮಿತಿ ಸದಸ್ಯರು ವಿಶೇಷ ಆಮಂತ್ರಣ ನೀಡಿದ್ದರಿಂದ ರಂಗಮಂದಿರ ಒಳಾಂಗಣ ಮತ್ತು ಹೋರಾಂಗಣದಲ್ಲಿ ಜನರು ಕಿಕ್ಕಿರಿದು ಸೇರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾಡಳಿದ ವಿವಿಧ 20ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, 25ಕ್ಕೂ ಹೆಚ್ಚಿನ ನಾನಾ ಬ್ಯಾಂಕುಗಳ ಜಿಲ್ಲಾ ವ್ಯವಸ್ಥಾಪಕರು ಮತ್ತು ಪದಾಧಿಕಾರಿಗಳು ಭಾಗಿಯಾಗಿದ್ದರು. ಗಣ್ಯರು, ವಿವಿಧ ವಲಯದ ಸಾರ್ವಜನಿಕರು ಸಹ ಉತ್ತಮ ಸಹಭಾಗಿತ್ವ ನೀಡಿದರು.

ಬೆ. 11 ರಿಂದ ರಾತ್ರಿ 9ರ ವರೆಗೆ ಒಂದಾದ ಮೇಲೋಂದರಂತೆ ಎಲ್ಲ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು. ಈ ಮೂಲಕ, ದೇಶದ ಆರ್ಥಿಕ ವಹಿವಾಟಿನ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವ, ಬೀದಿ ವ್ಯಾಪಾರಸ್ಥರ ಅವಿಸ್ಮರಣೀಯ ಕೊಡುಗೆಯನ್ನು ಸ್ಮರಿಸಿ, ಅವರನ್ನು ಗೌರವಿಲಾಯಿತು.
ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಂದ ಎಲ್‌ಇಡಿ ಪರದೇಯ ಮೂಲಕ ಸಾರ್ವಜನಿಕರಿಗೆ ಹಣಕಾಸು ಸಾಕ್ಷರತೆ ತರಬೇತಿ ಹೇಳಿ ಕೊಟ್ಟಿದ್ದು, ಬೀದಿಬದಿ ವ್ಯಾಪಾರಸ್ಥರಿಗೆ ತಾಲೂಕು ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆಗೆ ಏರ್ಪಾಡು ಮಾಡಿದ್ದು, ಸಮಾರಂಭದಲ್ಲಿ 409 ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯದ ಮಂಜೂರಾತಿ ಮಾಡಿದ್ದು ವಿಶೇಷವಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಕಲಾವಿದರನ್ನು ಕರೆಯಿಸಿ, ಬೀದಿ ವ್ಯಾಪಾರಸ್ಥರು ಹಾಗೂ ಅವರ ಕುಟುಂಬದ ಸದಸ್ಯರುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ರಂಗಮAದಿರದ ಆವರಣದಲ್ಲಿ 15 ಆಹಾರ ಉತ್ಪನ್ನ ಮಾರಾಟ ಮಳಿಗೆಗಳು ಮತ್ತು ಐದು ಸ್ವಸಹಾಯ ಸಂಘಗಳ ಮಳಿಗೆಗಳನ್ನು ಹಾಕಲಾಗಿತ್ತು.

ಮಳಿಗೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕರಕುಶಲ ವಸ್ತುಗಳನ್ನು ವೀಕ್ಷಿಸಿದರು

ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ

ಇದಕ್ಕೂ ಮೊದಲು ಬೆಳಿಗ್ಗೆ ಆರಂಭವಾದ ಆಹಾರ ಉತ್ಪನ್ನಗಳು ಹಾಗೂ ಇತರೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಡೆ-ನಲ್ಮ್ ಯೋಜನೆಯ ಫಲಾನುಭವಿಗಳಿಗೆ ಸಾಲ ಮೇಳ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಚಾಲನೆ ನೀಡಿದರು.

ನಾನಾ ಮಳಿಗೆಗಳಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಮರು ಬಳಕೆ ವಸ್ತುಗಳಿಂದ ತಯಾರಿಸಿದ ಚೀಲವೊಂದನ್ನು ಖರೀದಿಸಿ ಗಮನ ಸೆಳೆದರು. ಇದೆ ವೇಳೆ, ಬೀದಿ ಬದಿ ವ್ಯಾಪಾರಸ್ಥರೊಂದಿಗೆ ಜಿಲ್ಲಾಧಿಕಾರಿಗಳು ಸಮಾಲೋಚನೆ ನಡೆಸಿದರು. ಕೆಲವರು ಬ್ಯಾಂಕಿನ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿದರು. ಇನ್ನೂ ಕೆಲವರು ಬ್ಯಾಂಕಿನಿಂದ ಸಾಲಸೌಕರ್ಯ ಒದಗಿಸಲು ಕೋರಿದರು.

ಬಳಿಕ ವೇದಿಕೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಮುಖಂಡರಾದ ವಿಜುಗೌಡ ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ನಗರ ಪ್ರದೇಶಗಳಲ್ಲಿ ಅಂದಾಜು 60 ಲಕ್ಷ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಅವರ ಸೇವೆಯನ್ನು ಗೌರವಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ನಾಗಠಾಣ ಮತಕ್ಷೇತ್ರದ ಶಾಸಕರಾದ ಡಾ.ದೇವಾನಂದ ಫೂ.ಚವ್ಹಾಣ್ ಅವರು ಮಾತನಾಡಿ, ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ, ಈ ದೇಶದ ಪ್ರತಿಯೊಂದು ವರ್ಗದ ಜನರ ಕೊಡುಗೆಗಳ ಸ್ಮರಣೆ ಮಾಡಬೇಕಿದೆ. ದುಡಿಯುವ ವರ್ಗದ ಜನರ ಆರ್ಥಿಕ ಕೊಡುಗೆ ಈ ನಾಡಿಗೆ ಅಪಾರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾತನಾಡಿ, ಅನಾದಿಕಾಲದಿಂದಲೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳ ಪಾತ್ರ ಅನನ್ಯವಾಗಿದೆ. ಮಳೆ, ಚಳಿ ಬಿಸಲು ಎನ್ನದೇ ದುಡಿಯುವ ಬೀದಿ ಬದಿ ವ್ಯಾಪಾರಿಗಳ ಅವಿಸ್ಮರಣೀಯ ಕೊಡುಗೆಯನ್ನು ಸ್ಮರಿಸಲು ಹಾಗೂ ಗೌರವಿಸಲು ಭಾರತ ಘನ ಸರ್ಕಾರ ಹಾಗೂ ಕರ್ನಾಟಕ ಘನ ಸರ್ಕಾರಗಳು ಈ ಕಾರ್ಯಕ್ರಮ ರೂಪಿಸಿವೆ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ವೆಂಕಣ್ಣ ಹೊಸಮನಿ ಅವರು ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಶ್ರಮ ಜೀವಿಗಳು. ದುಡಿಮೆಯ ಮೇಲೆಯೇ ಅವರ ಜೀವನ ನಡೆಯುತ್ತದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾಕಾಲ ತಮ್ಮೊಂದಿಗಿರುತ್ತದೆ. ಅಸಹಾಯಕರಾದಾಗ, ಅಡಚಣೆ ಇದ್ದಾಗ ತಮಗೆ ತಿಳಿಸಬೇಕು. ತಮಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಂಪೂರ್ಣ ಸಹಾಯ ಮಾಡಲಿದೆ ಎಂದು ಬೀದಿ ಬದಿ ವ್ಯಾಪಾರಿಗಳಿಗೆ ತಿಳಿಸಿದರು.

ಪ್ರತಿಜ್ಞಾ ವಿಧಿ ಬೋಧನೆ

ಸ್ವನಿಧಿ ಮಹೋತ್ಸವ ಅಂಗವಾಗಿ, ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ ಅವರು ಪ್ರತಿಜ್ಞೆ ವಿಧಿಯನ್ನು ಬೋಧಿಸಿದರು. ‘ಭಾರತದ ಜವಾಬ್ದಾರಿಯುತ ಪ್ರಜೆಯಾದ ನಾನು ಪ್ರತಿಜ್ಞಾಪೂರ್ವಕÀವಾಗಿ ಪ್ರತಿಜ್ಞೆ ಮಾಡುತ್ತೇನೆ. ನಾನು ಭಾರತದ ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿರುತ್ತೇನೆ. ನನ್ನ ದೇಶ 75ನೇ ವರ್ಷದ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದೆ. ಅದರ ಪ್ರಯುಕ್ತ ದೇಶ ಅಜಾದಿ ಕಾ ಅಮೃತ ಮಹೋತ್ಸವ ದ ಸ್ವನಿಧಿ ಮಹೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಈ ಮಹೋನ್ನತ ಹಾಗೂ ಗೌರವಯುತ ಕಾಲದಲ್ಲಿ ದೇಶದ ಜನರು ನೀಡಿದ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಸಾಧನೆಗಳ ವೈಭವದ ಸ್ಮರಣಾರ್ಥವಾಗಿ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟಂಬದ ಸದಸ್ಯರುಗಳು ದೇಶದ ಆರ್ಥಿಕ ಸಬಲತೆಯಲ್ಲಿ ಅವಿಸ್ಮರಣೀಯ ಕೊಡುಗೆಗಳನ್ನು ನೀಡಿದ್ದನ್ನು ನಾನೂ ಮುಕ್ತ ಕಂಠದಿಂದ ಪ್ರಶಂಶಿಸುತ್ತೇನೆ. ಹಾಗೂ ಇನ್ನು ಮುಂದೆ ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಜನರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಪಡುತ್ತೇನೆ ಎಂದು ಪ್ರತಿಜ್ಞಾ ಪೂರ್ವಕವಾಗಿ ಪ್ರತಿಜ್ಞೆಗೈಯುತ್ತೇನೆ ಎನ್ನುವ ಪ್ರತಿಜ್ಞೆಯನ್ನು ಬೋಧಿಸಲಾಯಿತು.

ಎಂಟು ಸಂಘಗಳ ರಚನೆ

ದುಡಿಯುವ ವರ್ಗದ ಜನರನ್ನು ಆರ್ಥಿಕ ಸಬಲರನ್ನಾಗಿಸುವ ನಿಟ್ಟಿನಲ್ಲಿ, ಅತ್ಯಂತ ತುಳಿತಕ್ಕೆ ಒಳಗಾದ ದಿನಗೂಲಿ ನೌಕರರ, ಪೌರ ಕಾರ್ಮಿಕರ, ತೃತೀಯ ಲಿಂಗಿಗಳ, ವಿಶೇಷ ಚೇತನರ, ಚಿಂದಿ ಆಯುವವರ, ಕೊಳಗೇರಿ ನಿವಾಸಿಗಳ, ಬೀದಿ ವ್ಯಾಪಾರಸ್ಥರ ಎಂಟು ಸಂಘಂಗಳನ್ನು ಸಹ ರಚಿಸಲಾಯಿತು. ಈ ಹಿಂದೆ ಈ ರೀತಿ ಸಂಘಗಳು ಇರಲಿಲ್ಲ.  ಏಕಕಾಲಕ್ಕೆ ಎಂಟು ಸ್ವಸಹಾಯ ಸಂಘ ಉದ್ಘಾಟಿಸಿ, ಆ ಜನರ ಸಾಮಾಜಿಕ ಮನೋಬಲ ಗುರುತಿಸುವ ಕಾರ್ಯವನ್ನು ಮಾಡಿದ್ದು ಪಾಲಿಕೆಯ ಇತಿಹಾಸದಲ್ಲಿಯೇ ಇದೆ ಮೊದಲು ಎನ್ನುವ ಮೆಚ್ಚುಗೆಯು ಸಾರ್ವಜನಿಕರಿಂದ ವ್ಯಕ್ತವಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳ್ಳಾರಿಯ ಸೂರ್ಯ ಕಲಾ ಟ್ರಸ್ಟನಿಂದ ದೇಶಭಕ್ತಿ ಸಮೂಹ ನೃತ್ಯ ನಡೆಯಿತು. ಹರೀಶ ಹೆಗಡೆ ಮತ್ತು ಸಂಗಡಿಗರಿAದ ದೇಶ ಭಕ್ತಿ ಗೀತೆಗಳು, ದೀಕ್ಷೆ ಬೀಸೆ ಮತ್ತು ಸಂಗಡಿಗರಿಂದ ಬಂಜರಾ ನೃತ್ಯ, ವಿ.ಮಾರೇಶ ಸೋಮಲಾಪುರ ಅವರಿಂದ ಹಗಲು ವೇಷ ಸಾದರಪಡಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಬೀದಿ ಬದಿ ವ್ಯಾಪಾರಿಗಳ ಯಶೋಗಾಥೆಯ ಬೀದಿ ನಾಟಕಗಳು ಪ್ರದರ್ಶನಗೊಂಡವು. ವಿಜಯಪುರದ ರಂಗ ಮೇಳ ಕಲಾ ಸಂಸ್ಥೆಯಿAದ ಮತ್ತು ಅಮೃತ ವಿ ಮಾವಿನಹಳ್ಳಿ ಮತ್ತು ಸಂಗಡಿಗರಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು. ಸಮಾರಂಭದಲ್ಲಿ ವಿಡಿಯೋ ಕಿರು ಚಿತ್ರದ ಪ್ರದರ್ಶನ ಕೂಡ ನಡೆಯಿತು. ರಂಗೋಲಿ ಸ್ವರ್ಧೆ, ಡಿಜಿಟಲ್ ವಹಿವಾಟಿನ ಉಪಯೋಗಗಳ ತರಬೇತಿ ಕೂಡ ನಡೆದವು.

ವಿಶೇಷ ಸನ್ಮಾನ

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ತೋರಿದ ಬೀದಿ ಬದಿ ವ್ಯಾಪಾರಿಗಳ ಮಕ್ಕಳಿಗೆ ಇದೆ ವೇಳೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಬೀದಿ ಬದಿ ವ್ಯಾಪಾರಿಯಾಗಿದ್ದು, ತನ್ನ ಪುತ್ರಿಗೆ ಎಂಜಿನಿಯರ್ ಹಾಗೂ ಪುತ್ರನಿಗೆ ಎಂಬಿಬಿಎಸ್ ಓದಿಸಿದ ಮೊಹಮ್ಮದ್ ನಸೀಮ್ ಎಚ್ ಹಡಗಲಿ ಅವರಿಗೆ ಸಮಾರಂಭದಲ್ಲಿ ವಿಶೇಷ ಸನ್ಮಾನ ನೀಡಲಾಯಿತು. ಪಟ್ಟಣ ಮಾರಾಟ ಸಮಿತಿ ಸದಸ್ಯರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಸಹಕಾರ ನೀಡಿದ ಜಿಲ್ಲಾ ಅಗ್ರಣೀಯ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸಮನ್ವಯಾಧಿಕಾರಿಗಳಾದ 17 ಬ್ಯಾಂಕ್ ಅಧಿಕಾರಿಗಳಿಗೆ ಸಹ ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ, ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಜಿಲ್ಲಾ ಕೌಶಲ ಮಿಷನ್ ಅಧಿಕಾರಿ ಗುರುಪಾದಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಮಹಾನಗರ ಪಾಲಿಕೆಯ ಆರೋಗ್ಯಶಾಖೆಯ ಪರಿಸರ ಅಭಿಯಂತರರಾದ ಅಶೋಕ ಸಜ್ಜನ, ರಫಿಕ್ ಬಳಿಗಾರ, ಪ್ರವೀಣ ಕಾಬಳೆ, ಸಮುದಾಯ ಸಂಘಟನಾಧಿಕಾರಿಗಳಾದ ಭಾರತಿ ಕೌಲಗೆ, ಸುನಂದಾ ತಿಪ್ಪಣ್ಣನವರ, ಸಿಆರ್‌ಪಿಗಳು ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ, ಕೌಶಲ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಸಮಾರಂಭದಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಾಜಶೇಖರ ಡಂಬಳ, ಲೀಡ್ ಬ್ಯಾಂಕ್ ಮ್ಯಾನೇಜರ್ ನರೇಂದ್ರಬಾಬು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ, ಪಟ್ಟಣ ಮಾರಾಟ ಸಮಿತಿ ಸದಸ್ಯರಾದ ಯಲ್ಲಪ್ಪ ಘೋರ್ಪಡೆ ಮತ್ತೀತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ ಮೆಕ್ಕಳಕೆ ಸ್ವಾಗತಿಸಿದರು. ಜಿಲ್ಲಾ ಕೌಶಲ್ಯ ಮಿಷನ್ ಅಧಿಕಾರಿ ಗುರುಪಾದಯ್ಯ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಮಹಾದೇವ ರಬಿನಾಳ ಮತ್ತು ನಿರೂಪಕಿ ಸಂಗೀತ ಮಠಪತಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಜೀವನಸಬಾ ವಾಲಿಕಾರ ಮತ್ತು ಸಂಗಡಿಗರು ರಾಷ್ಟಗೀತೆ ಮತ್ತು ನಾಡಗೀತೆ ಹಾಡಿದರು.

Leave a Reply

ಹೊಸ ಪೋಸ್ಟ್‌