ವಿಜಯಪುರ: ಬಸವ ನಾಡು ವಿಜಯಪುರದಲ್ಲೋಂದು ಜಾಗೃತ ದೇವಸ್ಥಾನವಿದೆ. ಇಲ್ಲಿ ನೆಲೆಸಿರುವ ಶಕ್ತಿದೇವತೆ, ಸರ್ವಶಕ್ತರೂಪಿಣಿ ಎಂದೆ ಹೆಸರಾಗಿರುವ ದೇವಿಯ ದರ್ಶನಕ್ಕೆ ಸಾವಿರಾರು ಜನ ಬರುವುದುಂಟು. ಈಗ ಈ ಜಾಗೃತ ದೇವಸ್ಥಾನದಲ್ಲಿ ದಶಮಾನೋತ್ಸವ ಕಾರ್ಯಕರ್ಮ ನಡೆಯುತ್ತಿದೆ. ಇದರ ಅಂಗವಾಗಿ ದೇವಸ್ಥಾನದ ಉಸ್ತುವಾರಿ ಸಮತಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.
ವಿಜಯಪುರ ನಗರದ ಜೊರಾಪುರ ಪೇಟೆಯಲ್ಲಿರುವ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ದಶಮಾನೋತ್ಸವ ಸಂಭ್ರಮ ಕಳೆಗಟ್ಟಿದೆ. ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರದ ಜೊತೆಗೆ ತರಹೇವಾಹಿ ಬಣ್ಣಬಣ್ಣದ ಹೂವುಗಳಿಂದಲೂ ಅಲಂಕಾರ ಮಾಡಲಾಗಿದೆ. ಈ ದೇವಸ್ಥಾನದಲ್ಲಿ ಶ್ರೀ ಶಕ್ತಿ ತರುಣ ಸಂಘದ ವತಿಯಿಂದ ನಾಡದೇವಿಯ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.
1976 ರಿಂದ ಇಲ್ಲಿ ನವರಾತ್ರಿಯಲ್ಲಿ ನಾಡದೇವಿ ಪ್ರತಿಷ್ಠಾಪಿಸಿ ಪೂಜೆ ನಡೆಸಲಾಗುತ್ತಿದೆ. ದೇವಸ್ಥಾನದ ದಶಮಾನೋತ್ಸವ ಹಿನ್ನೆಲೆಯಲ್ಲಿ ಹೋಮ ಹವನ ಇನ್ನಿಕಪ ಧಾರ್ಮಿಕ ವಿಧಿ ವಿಧಾನಗಳನ್ನು ಆಯೋಜಿಸಲಾಗಿದೆ. ಬೆ. 6ಕ್ಕೆ ಪೂಜೆ ಧಾರ್ಮಿಕ ಕೈಂಕರ್ಯಗಳು ನಡೆದವು. ಇಡೀ ದಿನ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಜಗದಂಬೆಯ ದರ್ಶನ ಪಡೆದು ಧನ್ಯರಾಗುತ್ತಿದ್ದಾರೆ. ದೇವಸ್ಥಾನದಲ್ಲಿ ಸಪ್ತಸ್ವರಗಳನ ನೀನಾದವೂ ಇಂಪಾಗಿತ್ತು. ಹೋಮ ಹವನದ ಬಳಿಕ ಪೂರ್ಣಾಹುತಿ ನೀಡಿ ಪೂಜೆ ಸಲ್ಲಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಕೊರೊನಾ ಸಂಕಷ್ಟದಿಂದಾಗಿ ಎಲ್ಲ ಜಾತ್ರೆ, ಉತ್ಸವಗಳಿಗೆ ಬ್ರೇಕ್ ಬಿದ್ದಿತ್ತು. ಈ ಸಂದರ್ಭದಲ್ಲಿ ಜಾತ್ರೆಗಳು ರದ್ದಾಗಿದ್ದು, ಒಂದೆರಡು ಬಾರಿ ಉತ್ಸವಗಳು ಸರಳ ಮತ್ತು ಸಾಂಕಿತವಾಗಿ ಮಾತ್ರ ನಡೆದಿದ್ದವು. ಈಗ ಕೊರೊನಾ ಕಡಿಮೆಯಾಗಿರವ ಹಿನ್ನೆಲೆಯಲ್ಲಿ ವರ್ಷಾಚರಣೆ ಮತ್ತು ನಾಡದೇವಿ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಆದರೆ, ಈ ಬಾರಿ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ಹಾಗೂ ಮದ್ಯಾಹ್ನ ಅನ್ನಪ್ರಸಾದ ಕಾರ್ಯಕ್ರಮ ನಡೆಯಿತು. ಜೋರಾಪುರ ಪೇಟೆ ಪ್ರದೇಶದಲ್ಲಿ ಸಂಚರಿಸಿದ ಪಲ್ಲಕ್ಕಿ ಉತ್ಸವ ದೇವಸ್ಥಾನಕ್ಕೆ ಮರಳಿತು. ಪಲ್ಲಕ್ಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ತರಹೇವಾರಿ ವಸ್ತುಗಳಿಂದ ತಯಾರಿಸಿದ ಅನ್ನಪ್ರಸಾದ ಭಕ್ತರ ಪ್ರೀತಿಗೆ ಪಾತ್ರವಾಯಿತು.
ಐದು ದಿನಗಳ ಕಾಲ ಇಲ್ಲಿ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಸರದಿಯಲ್ಲಿ ನಿಂತು ಜಗದಂಬೆಯ ದರ್ಶನ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ತಾವು ಬೇಡಿಕೊಂಡ ಹರಕೆಗಳು ಈಡೇರಿದ ಹಿನ್ನೆಲೆಯಲ್ಲಿ ದೇವತೆಗೆ ಹರಕೆಯನ್ನೂ ತೀರಿಸುತ್ತಿದ್ದಾರೆ. ಮತ್ತೆ ಹಲವಾರು ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹರಕೆಯನ್ನು ಹೊತ್ತಿರುವುದು ಕಂಡು ಬಂತು.
ಜೋರಾಪುರ ಪೇಟೆಯ ಜಗನ್ಮಾತೆ ತುಳಜಾಭವಾನಿ ಆರಾಧನೆ ಸಂಭ್ರಮದಿಂದ ನಡೆಯುತ್ತಿದೆ. ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಈ ಜಾತ್ರೆ ಅಂಬಾ ಭವಾನಿ ಭಕ್ತರಲ್ಲಿ ಗತವೈಭವವನ್ನು ಮರಳಿ ತಂದಿದೆ. ಜಗದಂಬೆಯ ಪಾದಾರಂದಗಳಿಗೆ ನಮಸ್ಕರಿಸಿದ ಭಕ್ತರು ಜೈ ಭವಾನಿ ಎಂದು ಘೋಷಣೆ ಹಾಕುತ್ತಿದ್ದ ದೃಷ್ಯಗಳು ಭಕ್ತರ ಭಕ್ತಿಗೆ ಸಾಕ್ಷಿಯಾಗಿತ್ತು. ಪ್ರತಿವರ್ಷದ ಜಾತ್ರೆಗಿಂತಲೂ ಈ ಬಾರಿ ದಶಮಾನೋತ್ಸವದ ಜಾತ್ರೆಯಲ್ಲಿ ಪಾಲ್ಗೋಂಡ ಭಕ್ತರು ಹೆಮ್ಮೆಯ ಭಾವ ವ್ಯಕ್ತಪಡಿಸಿದ್ದು ಗಮನಾರ್ಹವಾಗಿತ್ತು.