ವಿಜಯಪುರ: ಜಿಲ್ಲಾ ಹಾಲುಮತ ನೌಕರರ ಸಮಾವೇಶ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೌಕರರಿಗೆ ಸನ್ಮಾನ ಸಮಾರಂಭ ನಗರದ ಶ್ರೀ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.
ಈ ಸಮಾರಂಭವನ್ನು ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ರಾಹುಲ(ಬಸನಗೌಡ) ಪಾಟೀಲ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಾಲುಮತ ಸಮಾಜ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಸದೃಢವಾಗಿದೆ. ಈ ಸಮಾಜದವರು ಕೊಟ್ಟ ಮಾತಿಗೆ ತಪ್ಪಲಾರರು ಎಂದು ಹೇಳಿದರು.
ಹಾಲು ಮತ ಸಮಾಜದವರು ಆರ್ಥಿಕವಾಗಿ ಬಲಿಷ್ಠವಾಗಿ ರಾಜಕೀಯವಾಗಿ ಮುಂಚೂಣಿಯಲ್ಲಿ ಇರಲು ಎಲ್ಲ ಅರ್ಹತೆ ಹೊಂದಿದ್ದಾರೆ. ಆ ಸಮಾಜಕ್ಕೆ ನಾವು ಸದಾ ಬೆಂಬಲವಾಗಿ ನಿಲ್ಲಲಿದ್ದೇವೆ ಎಂದು ಭರವಸೆ ನೀಡಿದರು.
ಹಾಲುಮತ ಸಮಾಜ ಹಾಲಿನಷ್ಟೇ ಪರಿಶುದ್ಧವಾಗಿದೆ- ಡಾ. ದೇವಾನಂದ ಚವ್ಹಾಣ
ಈ ಸಂದರ್ಭದಲ್ಲಿ ಮಾತನಾಡಿದ ನಾಗಠಾಣ ಜೆಡಿಎಸ್ ಶಾಸಕ ಡಾ. ದೇವಾನಂದ ಚವ್ಹಾಣ, ಹಾಲುಮತ ಹಾಲಿನಂತೆ ಪರಿಶುದ್ಧವಾಗಿದೆ ಎಂದು ಹೇಳಿದರು.
ಸಮಯ ಬಂದರೆ ಸಿಂಹದಂತೆ ಘರ್ಜಿಸುವ ತಾಕತ್ತು ಸಹ ಅವರಲ್ಲಿದೆ. ದೇಶದಲ್ಲಿ ಹಾಲುಮತ ಸಮಾಜ ಬಹುದೊಡ್ಡ ಸಂಖ್ಯೆಯಲ್ಲಿದೆ. ಸಮಾಜ ಮತ್ತು ದೇಶಕ್ಕೆ ಈ ಸಮುದಾಯದ ಕೊಡುಗೆ ಅಪಾರವಾಗಿದೆ. ಕಂಬಳಿ ಬೀಸಿ ಮಳೆಯನ್ನು ಸುರಿಸಿದ ಇತಿಹಾಸವನ್ನು ಈ ಸಮಾಜ ಹೊಂದಿದೆ. ಇದು ಹಾಲುಮತ ಸಮಾಜದ ಅದಮ್ಯ ಹಾಗೂ ಪರಿಶುದ್ಧ ಭಕ್ತಿಯ ಸಂಕೇತದ ಉದಾರಹಣೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಹಾಲುಮತ ಸಮಾಜ ಅತೀ ಹೆಚ್ಚಿನ ಜನಸಂಖ್ಯೆ ಇದೆ. ಆದರೂ ರಾಜಕೀಯವಾಗಿ ಬಹಳಷ್ಟು ಹಿಂದುಳಿದಿದೆ. ಇಂಡಿ ಹಾಗೂ ಸಿಂದಗಿ ಎರಡೂ ತಾಲೂಕುಗಳಲ್ಲಿ ಹಾಲುಮತ ಸಮಾಜಕ್ಕೆ ಟಿಕೆಟ್ ಸಿಕ್ಕರೂ ಈ ಸಮಾಜದಿಂದ ಯಾರೊಬ್ಬ ನಾಯಕನನ್ನು ವಿಧಾನ ಸಭೆಗೆ ಕಳುಹಿಸಲು ಸಾಧ್ಯವಾಗಿಲ್ಲ. ಹಾಲುಮತ ಸಮಾಜ ಒಗ್ಗಟ್ಟು ಉಳಿಸಿಕೊಂಡು ಬಂದರೆ ಇದು ಯಶಸ್ವಿಯಾಗಲಿದೆ. ನನ್ನ ಅವಧಿಯಲ್ಲಿ ಸುಮಾರು ರೂ. 7 ಕೋ. ಅನುದಾನವನ್ನು ಹಾಲುಮತ ಸಮಾಜದ ದೇವಾಲಯಗಳಿಗೆ ಒದಗಿಸಿಸುವ ಮೂಲಕ ಹಾಲುಮತದ ಋಣ ತೀರಿಸುವ ಚಿಕ್ಕ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು.
ಶ್ರೀ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕವಲುಗುಡ್ಡದ ಶ್ರೀ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮನ್ನು ಯಾರು ಬೆಳೆಸುವುದಿಲ್ಲ. ನಾವೇ ಬೆಳೆಯಬೇಕು ಸಮಾಜದ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಮಾಜದ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಇಷ್ಟೊಂದು ದೊಡ್ಡ ಸಮಾಜವಿದೆ. ಆದರೂ ಜಿಲ್ಲೆಯಲ್ಲಿ ಯಾವುದೇ ಹಾಲುಮತ ಸಮುದಾಯ ಭವನ ಇಲ್ಲ. ಇದು ನಮ್ಮ ಸಮಾಜದ ದುರ್ದೈವವೇ ಸರಿ ಎಂದು ನೋವು ತೊಡಿಕೊಂಡರು.
ಮಕಣಾಪುರ ಸ್ವಾಮೀಜಿ
ಮಕಣಾಪುರದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಜನ ಇದ್ದರೆ ಏನು ಫಲ? ನಮ್ಮವರನ್ನು ನಾವೇ ಕಡೆಗಣಿಸುತ್ತಿದ್ದೇವೆ. ರಾಜಕೀಯವಾಗಿ ಬೆಳೆಯುವುದು ಯಾವಾಗ ಎಂದು ಪ್ರಶ್ನಿಸಿದರು.
ವಿಜಯಕುಮಾರ ಮೆಕ್ಕಳಕಿ
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ವಿದ್ಯಾರ್ಥಿಗಳು ಒಳ್ಳೆಯ ಗುರಿಗಳನ್ನು ಇಟ್ಟುಕೊಳ್ಳಬೇಕು. ಶೈಕ್ಷಣಿಕವಾಗಿ ಹಾಲುಮತ ಸಮಾಜ ಬಹಳಷ್ಟು ಹಿಂದುಳಿದಿದೆ. ಸಮಾಜದ ಅವಶ್ಯಕತೆಗಳನ್ನು ಪೂರೈಸಬೇಕಾದರೆ ಶಿಕ್ಷಣವನ್ನೇ ಅಸ್ತ್ರವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಹಾಲುಮತ ಸಮಾಜದಲ್ಲಿ ಶ್ರೀಮಂತರಿಗಿಂತ ಬಡವರೇ ಹೆಚ್ಚಾಗಿದ್ದಾರೆ. ಇದನ್ನು ನೆನಪಿನಲ್ಲಿಟ್ಟುಕೊಂಡೆ ಇಂದು ಹಾಲುಮತ ನೌಕರರ ಸಂಘ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಇದು ನಿಜಕ್ಕೂ ಇದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸತ್ಯಜೀತ ಪಾಟೀಲ
ಯುವ ಮುಖಂಡ ಸತ್ಯಜೀತ ಶಿವಾನಂದ ಪಾಟೀಲ ಮಾತನಾಡಿ, ಹಾಲುಮತ ಸಮಾಜದ ಬಗ್ಗೆ ನಮ್ಮ ತಂದೆಯವರಿಗೆ ದೊಡ್ಡ ಗೌರವವಿದೆ. ನಮ್ಮ ತಂದೆಯವರು ರಾಜಕೀಯವಾಗಿ ಸದೃಡರಾಗಲು ಹಾಲುಮತ ಸಮಾಜದ ಕೊಡುಗೆ ಬಹಳಷ್ಟು ಇದೆ. ನಾವು ಆ ಋಣವನ್ನು ಎಂದಿಗೂ ಮರೆಯುವುದಿಲ್ಲ. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಹಾಲುಮತ ಸಮಾಜದ ಹಿತ ಕಾಪಾಡಲು ನಾವು ಬದ್ಧ. ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆಯಾದಲ್ಲಿ ನಮ್ಮ ಗಮನಕ್ಕೆ ತಂದರೆ ಖಂಡಿತ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ
ಲೋಕಾಯುಕ್ತ ಎಸ್ಪಿ ಅನಿತಾ ಹದ್ದಣ್ಣವರ ಮಾತನಾಡಿ, ವಿದ್ಯಾರ್ಥಿಗಳಿಗೆ ಸಾಧಿಸುವ ಛಲ ಇರಬೇಕು. ನಾನು ಕೂಡ ಕಷ್ಟದ ಪರಸ್ಥಿತಿಯಲ್ಲಿ ವಿದ್ಯಾಬ್ಯಾಸ ಮಾಡಿ ಈ ಹುದ್ದೆಗೆ ಬಂದಿದ್ದೇನೆ. ಐಎಎಸ್ ಹಾಗೂ ಐಪಿಎಸ್ ಪರೀಕ್ಷೆ ಪಾಸು ಮಾಡುವುದು ಅತ್ಯಂತ ಕಷ್ಟದ ಕೆಲಸ ವಿದ್ಯಾರ್ಥಿಗಳು. ಸಾಧಿಸುವ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಅಧ್ಯಯನ ಮಾಡಿದರೆ ಮಾತ್ರ ದೊಡ್ಡ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲಿ ಯಾರೇ ಬಡ ವಿದ್ಯಾರ್ಥಿಗಳಿದ್ದರೂ ಓದುವ ಛಲ ನಿಮ್ಮಲ್ಲಿ ಇದ್ದರೆ ನಮ್ಮ ಸಹಕಾರ ಯಾವತ್ತು ನಿಮಗೆ ಸಿಗುತ್ತದೆ ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಬಿ. ಡಿ. ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಅಭಿನವ ಪುಂಡಲಿಂಗೇಶ್ವರ ಮಹಾರಾಜರು, ಹಾಲುಮತ ನೌಕರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಬಗಲಿ, ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಸಹಕಾರ್ಯದರ್ಶಿ ರವಿ ಕಿತ್ತೂರ, ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ. ಎಸ್. ಎಲ್. ಲಕ್ಕಣ್ಣವರ, ಜೆಸ್ಕಾಂ ಸುಪರಿಂಟೆಂಡೆಂಟ್ ಎಂಜಿನಿಯರ್ ಸಿದ್ದಪ್ಪ ಬಿಂಜಗೇರಿ, ಸಂಘದ ಪದಾಧಿಕಾರಿಗಳಾದ ಶಿವಾನಂದ ಹಿರೇಕುರುಬರ, ಸುನೀಲ ತೊಂಟಾಪೂರ, ಮಲ್ಲು ವಾಲಿಕಾರ, ಮಲ್ಲಿಕಾರ್ಜುನ ಪೂಜಾರಿ, ರಾಜು ಕುರಿಯರವರ, ಕರೆಪ್ಪ ಬಸ್ತಾಳ, ಧರ್ಮಣ್ಣ ತೊಂಟಾಪೂರ, ರಾಜು ಕಗ್ಗೊಡ, ನಿಲಗಿರೇಶ್ವರ ಗದ್ದಗಿ ಪೂಜಾರಿ, ಜಿ.ಪಂ.ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಜಿ.ಪಂ. ಮಾಜಿ ಸದಸ್ಯರಾದ ಗುರುನಗೌಡ ಪಾಟೀಲ, ಸಾಬು ಮಾಶ್ಯಾಳ, ಎಂ.ಎನ್.ಮದರಿ, ಗೌರಮ್ಮ ಮುತ್ತತ್ತಿ, ನಿವೃತ್ತ ಪೊಲೀಸ್ ಅಧಿಕಾರಿ ಹುಲ್ಲೂರ, ರಾಜು ಬಿರಾದಾರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಯಲ್ಲಮ್ಮ ಪಡೇಸೂರ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆ ಅಧಿಕಾರಿ ಈರಣ್ಣ ಆಶಾಪೂರ ಮುಂತಾದವರು ಉಪಸ್ಥಿತರಿದ್ದರು.