ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯೂನಿಸೇಫ್, ಬೆಂಗಳೂರಿನ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನೆ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಅಪೌಷ್ಠಿಕತೆ ಮತ್ತು ಅನಿಮಿಯಾ ಮುಕ್ತ ಭಾರತ ಜಾಗೃತಿ ಅಭಿಯಾನ ನಡೆಯಿತು.
ಬಸವನ ಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ. ಕೆ. ಚವ್ಹಾಣ ಉದ್ಗಾಟಿಸಿದರು.
ಬಳಿಕ ಮಾತನಾಡಿದ ಅವರು, ಮಹಿಳೆಯರು ಅನಿಮಿಯಾದಿಂದ ಮುಕ್ತರಾಗಿ, ಸದೃಡ ಆರೋಗ್ಯವಂತರಾಗಲು ಇಲಾಖೆಯಿಂದ ಸಾಕಷ್ಟು ಯೋಜನೆಗಳನ್ನು ಕೊಡಲಾಗುತ್ತದೆ. ಪ್ರತಿ ಮಗು ಹಾಗೂ ತಾಯಿಂದಿರು ಅದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಹೇಳಿದರು.
ಯೂನಿಸೇಫ್, ಬೆಳಗಾವಿ ಆರೋಗ್ಯ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಸಂಯೋಜಕ ಗುರು ಹಿರೇಮಠ ಮಾತನಾಡಿ, ಅನಿಮಿಯಾ, ಅಪೌಷ್ಠಿಕತೆ ಹಾಗೂ ಮಕ್ಕಳ ದೈಹಿಕ ಬೆಳವಣಿಗೆ ಬಗ್ಗೆ ತಾಯಿಂದಿರು ಮತ್ತು ಪೋಷಕರು ಹೆಚ್ಚು ಜಾಗೃತರಾಗಿರಬೇಕು. ನಮ್ಮ ದೈನಂದಿನ ಜೀವನದ ಆಹಾರ ಪದ್ದತಿಗಳಲ್ಲಿ ಪಾಶ್ಚಾತ್ಯ ಆಹಾರ ಪದ್ದತಿಗಳನ್ನು ತಿರಸ್ಕರಿಸಿ, ದೇಶಿಯ ಹಾಗೂ ಸ್ಥಳೀಯವಾಗಿ ಸಿಗುವ ತರಕಾರಿ, ಹಣ್ಣು ಹಂಪಲುಗಳು ಹಾಗೂ ಧಾನ್ಯಗಳನ್ನು ಸೇವಿಸಬೇಕು. ಮಕ್ಕಳ ಪುನ:ಚ್ಚೇತನ ಕಾರ್ಯದಲ್ಲಿ ನಾನಾ ಇಲಾಖೆಗಳ ಸಹಭಾಗಿತ್ವ ಅತೀ ಅವಶ್ಯವಿದ್ದು ಹಾಗೂ ಪುನ:ಚ್ಚೇತನಕ್ಕಾಗಿ ಇರುವ ಎಲ್ಲ ಸರಕಾರಿ ಸೌಲಭ್ಯಗಳನ್ನು ಸಮಾಜದ ಕೊನೆಯ ಹಂತದಲ್ಲಿರುವ ಭಾಗಿದಾರರಿಗೆ ತಲುಪುವಂತಾಗಬೇಕು. ಮತ್ತು ಪುನಃಶ್ಚೇತನ ಕೇಂದ್ರಗಳಾದ ಎನ್.ಆರ್.ಸಿ, ಡಿ.ಇ.ಐ.ಸಿ, ಡಿ.ಡಿ.ಆರ್.ಸಿ ಮತ್ತು ಹಗಲು ಕಾಳಜಿ ಕೇಂದ್ರಗಳಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಮಕ್ಕಳ ಆರೋಗ್ಯ ಸುಧಾರಣೆ ಮಾಡಬೇಕು ಎಂದು ಹೇಳಿದರು.
ಬಸವನ ಬಾಗೇವಾಡಿ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ನಿರ್ಮಲಾ ಸುರಪುರ ಮಾತನಾಡಿ, ಪೌಷ್ಠಿಕತೆಯುಕ್ತ ಆಹಾರಗಳು ಯಾವವು ಮತ್ತು ಅವುಗಳನ್ನು ನಿಯಮಿತವಾಗಿ ಹೇಗೆ ಸೇವಿಸಬೇಕು ಎಂಬುದರ ಕುರಿತು ಹಾಗೂ ಕಬ್ಬಿಣಾಂಶ ಕೊರತೆಯಿಂದ ಬರುವ ಕಾಯಿಲೆಗಳ ಲಕ್ಷಣಗಳು ಹಾಗೂ ಅವುಗಳನ್ನು ತಡೆಗಟ್ಟುವುದರ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರ ಮಾತನಾಡಿ, ಆರೋಗ್ಯ ಇಲಾಖೆಯಿಂದ ಅಪೌಷ್ಠಿಕತೆ ಮತ್ತು ಅನಿಮಿಯಾ ನಿರ್ಮೂಲನೆಗಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಅಂಗನವಾಡಿ ಮತ್ತು ಶಾಲೆಗಳಿಗೆ, ಸಮುದಾಯದ ವಿವಿಧ, ಸ್ಥರಗಳಲ್ಲಿ ಇವುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅಲ್ಲದೇ, ಸೂಕ್ತ ವೈದ್ಯಕೀಯ ಚಿಕಿತ್ಸೆ ಕೂಡ ಕೊಡಲಾಗುತ್ತಿದ್ದು, ತಾವುಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮೊದಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಣ್ಣು ಮಕ್ಕಳಿಂದ ಗ್ರಾಮದಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ಈ ಜಾಥಾಕ್ಕೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಲಕ್ಷ್ಮಣ ಹಂಚಿನಾಳ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ತಾ. ಪಂ. ಸದಸ್ಯರು, ಪಿಡಿಔಗಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಅಂಗನವಾಡಿ ಮೇಲ್ವಿಚಾರಕಿಯರು, ಶಾಲಾ ಮುಖ್ಯೋಪಾಧ್ಯಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೋಷಕರು, ಸಹಾಯಕ ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಭಾಗವಹಿಸಿದ್ದರು.