ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳದ ಕೈ ನಾಯಕರು ಸಿಎಂ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಲ್ಲ. ಡಿ. ಕೆ. ಶಿವಕುಮಾರ ಮುಖ್ಯಮಂತ್ರಿ ಆಗಲ್ಲ. ಸಿಎಂ ಆಗಬೇಕೆಂದು ಇನ್ಯಾರು ಹಂಬಲ ಪಡುತ್ತಿದ್ದಾರೆ, ಅವರು ಹಂಬಲ ಪಡುತ್ತಿರಲಿ. ಎಲೆಕ್ಷನ್ ಆಗುವವರೆಗೂ ಅವರ ಚಟಗಳನ್ನ ತೀರಿಸಿಕೊಳ್ಳಲಿ. ಆದರೆ, ಬಿಜೆಪಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು ಅವರು ಭವಿಷ್ಯ ನುಡಿದರು.
ಬಿಜೆಪಿ ಒಳ್ಳೆಯ ಸರಕಾರ ಕೊಡುತ್ತದೆ. ಈಗ ಒಳ್ಳೆಯ ಸರಕಾರ ಕೊಟ್ಟಾಗಿದೆ. ಮುಂದೆಯೂ ಒಳ್ಳೆಯ ಸರಕಾರ ಕೊಟ್ಟು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಕುಟುಂಬ ರಾಜಕಾರಣ ವಿಚಾರ
ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲ ಎಂ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನೂ ಕುಟುಂಬ ರಾಜಕಾರಣದಿಂದ ಬಂದಿದ್ದೇನೆ. ಹಾಗಾಗಿ ಕುಟುಂಬ ರಾಜಕಾರಣ ಇದೆ. ವಿಶೇಷವಾಗಿ ಮೋದಿ ಅವರು ಕುಟುಂಬ ಇಲ್ಲದೇ ಇರುವ ನಾಯಕರು. ಆದಿತ್ಯನಾಥ ಯೋಗಿ ಕೂಟ ಕುಟುಂಬ ಇಲ್ಲದ ನಾಯಕರು. ನಮ್ಮ ತಂದೆಯವರೂ ರಾಜಕೀಯ ಮಾಡಿದ್ದಾರೆ. ನಾನೂ ಮಾಡುತ್ತಿದ್ದೇನೆ. ಯಡಿಯೂರಪ್ಪ ಮಾಡಿದಂತೆ ವಿಜಯೇಂದ್ರ ರಾಜಕೀಯ ಮಾಡುತ್ತಾರೆ ಎಂದು ಹೇಳಿದರು.
ಬಿ ಎಸ್ ವೈ ರಾಜಕೀಯ ನಿವೃತ್ತಿ ವಿಚಾರ
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಚುನಾವಣೆ ರಾಜಕಾರಣದಿಂದ ನೀವು ನಿವೃತ್ತಿ ಘೋಷಣೆ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಉಮೇಶ ಕತ್ತಿ, ಬಿ. ಎಸ್. ಯಡಿಯೂರಪ್ಪ ಅವರಿಗೆ 80 ವರ್ಷ ವಯಸ್ಸಾಗಿದೆ. ಚುನಾವಣೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದರೆ, ಅವರಿಗೆ ದುಡಿಯುವ ತಾಕತ್ತು ಇದೆ. 75 ವರ್ಷ ವಯಸ್ಸಾದವರು ರಾಜಕೀಯದಿಂದ ನಿವೃತ್ತಿ ಆಗಬೇಕು ಎಂದು ಬಿಜೆಪಿಯಲ್ಲಿ ನಿಯಮವಿದೆ. ಆದಕಾರಣ ಮಗನನ್ನು ಬೆಳೆಸುವ ನಿಟ್ಟಿನಲ್ಲಿ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಮಳೆಯಾಗಿಲ್ಲ ಉತ್ತಮ ಮಳೆ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ವಿಜಯಪುರ ಜಿಲ್ಲೆ ಬರಗಾಲ ಜಿಲ್ಲೆ ಎನಿಸಿಕೊಳ್ಳುವುದು ಬೇಡ ಉತ್ತಮ ಮಳೆಯಾಗಿ ಜನ ನೆಮ್ಮದಿಯಾಗಿರಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಚಿವ ಉಮೇಶ ಕತ್ತಿ ಹೇಳಿದರು.
ಈ ಸಂದರ್ಭದಲ್ಲಿ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.