ವಿಜಯಪುರ: ವಿಜಯಪುರ ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮನೆ ಮೇಲ್ಛಾವಣಿ ನಿರ್ಮಿಸಲು ಬಳಸುವ ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳ್ಳತನ ಮಾಡುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿದ್ದು, 1094 ಸೆಂಟ್ರಿಂಗ್ ಪ್ಲೇಟ್ ಮತ್ತು ಅವುಗಳನ್ನು ಸಾಗಿಸಲು ಬಳಸುತ್ತಿದ್ದ ಲಘು ಸರಕು ಸಾಗಣೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಸಾತಾರ ನಗರದ ಸಿಲವಲ್ ಚೌಪಲಿ ಮಂದಿರದ ಅನಿಲ ಗ್ಲೋಷಮ್ ಸೊಸಾಯಿಟಿ ನಿವಾಸಿ ಮತ್ತು ಬಾಂಡೆ ವ್ಯಾಪಾರಿ ಫರೀದ ತಂದೆ, ಅನ್ವರ ಶೇಖ(32), ಮಹಾರಾಷ್ಟ್ರ ಮೂಲಕ ಮತ್ತು ವಿಜಯಪುರ ನಗರದ ಖಾಜಾ ಅಮೀನ್ ದರ್ಗಾ ಉರ್ದು ಶಾಲೆಯ ಹತ್ತಿರದ ನಿವಾಸಿ ಮಹಮ್ಮದ ಶಫೀಕ್ ಥಮದೆ ಅಲ್ಲಾಭಕ್ಷ ಜಹಾಗೀರದಾರ(47) ಪುಣೆಯ ಅಜಯ ಬಕೂಲ್ ತಂತಿ(22), ಛತ್ತಿಸಗಢದ ಅಕಲತರಾ ಜಂಜಗೀರ ಮೂಲದ ಶಾಂತಿರಾಮ ಬೇದರಾಮ(39), ಉತ್ತರ ಪ್ರದೇಶದ ಆಜಮಗಢ ಮೂಲದ ಅಶಿತೋಷಕುಮಾರ ಜಗದೀಶ ಪ್ರಸಾದ(22) ಮತ್ತು ಉತ್ತರ ಪ್ರದೇಶದ ಮಹಾರಾಜ ಗಂಜ ಮೂಲದ ಭಕ್ಷಿಸ ಸಹಮ್ಮದ(35) ಮತ್ತು ಇನ್ನೋರ್ವ ಅಪ್ರಾಪ್ತ ವಯಸ್ಸಿನ ಬಾಲಕ ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಕಳವು ಮಾಡಿದ್ದ ಸುಮಾರು 8.75 ಲಕ್ಷ ಮೌಲ್ಯದ 1094 ಸೆಂಟ್ರಿಂಗ್ ಪ್ಲೇಟುಗಳು ಮತ್ತು ಅವುಗಳನ್ನು ಸಾಗಿಸಲು ಬಳಸುತ್ತಿದ್ದ ರೂ. 1.50 ಲಕ್ಷ ಮೌಲ್ಯದ ಎಮ್ಎಚ್-14/ಎಎಸ್-4661 ನಂಬರಿನ ಲಘು ಸಾರಿಗೆ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂ. 12 ಲಕ್ಷ 25 ಸಾವಿರದ 200 ಎಂದು ಅಂದಾಜಿಸಲಾಗಿದೆ.
ಘಟನೆಯ ಹಿನ್ನೆಲೆ
ಸೋಮವಾರ ನಸುಕಿನ ಜಾವ 4 ಗಂಟೆಗೆ ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ಬಳಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಪೊಲೀಸರು ಸಂಶಯಾಸ್ಪದ ವಾಹನಗಳ ತಪಾಸಣೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಲಘು ಸರಕು ಸಾಗಣೆ ವಾಹನವನ್ನು ತಪಾಸಣೆ ನಡೆಸಿದಾಗ ಅದರಲ್ಲಿದ್ದವರು ಹೆಸರು ಮತ್ತು ವಿಳಾಸ ತಿಳಿಸದೇ ಸಂಶಯಾಸ್ಪದವಾಗಿ ವರ್ತಿಸಿದ್ದಾರೆ. ಇದರಿಂದ ಶಂಕೆಪಟ್ಟ ಪೊಲೀಸರು ಎಲ್ಲ ಆರು ಜನರನ್ನು ಹೆಚ್ಚಿನ ವಿಚಾರಣೆಗೆಗಾಗಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆಗ, ಆರೋಪಿಗಳು ತಾವು ನಡೆಸಿದ ಕಳ್ಳತನದ ಕುರಿತು ಬಾಯಿ ಬಿಟ್ಟಿದ್ದಾರೆ.
ನಾನಾ ಠಾಣೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು
ಸೆಂಟ್ರಿಂಗ್ ಪ್ಲೇಟ್ ಕಳ್ಳತನ ಮಾಡಿರುವ ಆರೋಪಿಗಳು ಕಳೆದ ಎರಡು ತಿಂಗಳ ಅವಧಿಯಲ್ಲಿ ವಿಜಯಪುರ ನಗರ ಮತ್ತು ಸುತ್ತಮುತ್ತಲಿನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಐದಾರು ಕಡೆಗಳಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಗಾಂಧಿಚೌಕ, ಎಪಿಎಂಸಿ, ವಿಜಯಪುರ ಗ್ರಾಮೀಣ ಸೇರಿದಂತೆ ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇವರು ಸೆಂಟ್ರಿಂಗ್ ಪ್ಲೇಟ್ ಗಳನ್ನು ಕಳವು ಮಾಡಿರುವುದು ಪತ್ತೆಯಾಗಿದ್ದು, ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ.
ಎಸ್ಪಿ ಎಚ್. ಡಿ. ಆನಂದ ಕುಮಾರ ಮೆಚ್ಚುಗೆ
ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ನಡೆಸಿದ ಈ ಕಾರ್ಯಾಚರಣೆಯನ್ನು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ ಶ್ಲಾಘಿಸಿದ್ದಾರೆ. ಅಲ್ಲದೇ, ಈ ಕಾರ್ಯಾಚರಣೆಯಲ್ಲಿ ಪಾಲ್ಗೋಂಡ ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ, ಡಿವೈಎಸ್ಪಿ ಸಿದ್ಧೇಶ್ವರ, ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಭಾವಿ, ಪಿ ಎಸ್ ಐ ಜಿ. ಎಸ್. ಉಪ್ಪಾರ, ಆರ್. ಎ. ದಿನ್ನಿ, ಸಿಬ್ಬಂದಿಯಾದ ಎ ಎಸ್ ಐ ಪಿ. ಎಸ್. ಗಟ್ಟೂರ, ಎಚ್. ಸಿ. ಎಂ. ಎನ್. ಮುಜಾವರ, ಪೇದೆಗಳಾದ ಐ. ವೈ. ದಳವಾಯಿ, ಬಿ. ವಿ. ಪವಾರ, ಎಚ್. ಎಸ್. ಬಿರಾದಾರ. ಎ. ಎಸ್. ಬಿರಾದಾರ, ಎಸ್. ಬಿ. ತೇಲಗಾಂವ ಪಾಲ್ಗೋಂಡಿದ್ದರು ಎಂದು ವಿಜಯಪುರ ಎಸ್ಪಿ ಡಾ., ಎಚ್. ಡಿ. ಆನಂದ ಕುಮಾರ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.