ವಿಜಯಪುರ: ನಸೀಬಿನಲ್ಲಿದ್ದರೆ ಸಿಎಂ ಸ್ಥಾನ ಬರಬಹುದು ಎಂದು ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಮತ್ತೋಮ್ಮೆ ಮುಖ್ಯಮಂತ್ರಿಯಾಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ಟವೆಲ್ ಹಾಕುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.
ನಸೀಬ್‌ನಲ್ಲಿದ್ದರೆ ಸಿಎಂ ಸ್ಥಾನ ಒಂದಿನ ಬರಬಹುದು. ನನಗಿನ್ನು ಈಗ 60 ವಯಸ್ಸು. ಬಿಜೆಪಿ ರೂಲ್ಸ್ ನಂತೆ ಇನ್ನೂ 15 ವರ್ಷ ರಾಜಕೀಯ ಮಾಡಬಹುದು. ಇನ್ನು 15 ವರ್ಷ ಶಾಸಕನಾಗಿ ಇರುತ್ತೇನೆ. ಟೈಂ ಬರಬಹುದು. ನಾವು ಪ್ರತಿದಿನ ಇದನ್ನೇ ಬೇಡಿದರೆ ಸಿಎಂ ಸ್ಥಾನ ಸಿಗುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕಾಗಿ ನಡೆದಿರುವ ಕಿತ್ತಾಟದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಸಿದ್ದರಾಮಯ್ಯ ಮತ್ತು ಡಿ. ಕೆ. ಸಿದ್ಧರಾಮಯ್ಯ ಹುಚ್ಚು ಹಿಡಿದವರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಏನಾಗಿದೆಯೋ ಗೊತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಬಡೆದಾಡುತ್ತಿದ್ದಾರೆ. ಮೊದಲು ಅವರ ಪಕ್ಷ ಅಧಿಕಾರಕ್ಕೆ ಬರಬೇಕು. ಅಧಿಕಾರಕ್ಕೆ ಬಂದ ಮೇಲೆ ಸಿಎಂ ಸ್ಥಾನಕ್ಕಾಗಿ ಬಡೆದಾಡಬೇಕು. ಹೈಕಮಾಂಡ್ ನಿಂದ ವಾರ್ನ್ ಬಂದಿದೆ. ಜಮೀರ್ ಗು ಹೈಕಮಾಂಡ್ ವಾರ್ನ್ ಮಾಡಿದೆ. ಮೊದಲೇ ಕಾಂಗ್ರೆಸ್ ನಲ್ಲಿ ಪರಿಸ್ಥಿತಿ ಸರಿ ಇಲ್ಲ ಎಂದು ಅವರು ಹೇಳಿದರು.
ಮತ್ತೆ ಮರಳಿ ಬಿಜೆಪಿ ಅಧಿಕಾರಕ್ಕೆ ಬರೋದು ಪಕ್ಕಾ
ಇದೇ ವೇಳೆ ಬಿಜೆಪಿ ಮತ್ತು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷ ಒಡೆಯಲಿದೆ. ಕಾಂಗ್ರೆಸ್ ಒಡೆದು ಚೂರು ಚೂರಾಗಲಿದೆ. ಈ ಬಾರಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಉಮೇಶ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರ
ಯಾವಾಗ ಉತ್ತರ ಕರ್ನಾಟಕದ ಅಭಿವೃದ್ಧಿ ಆಗುವುದಿಲ್ಲವೋ ಆಗಾಗ ಪ್ರತ್ಯೇಕ ರಾಜ್ಯದ ಬೇಡಿಕೆಯ ಕೂಗು ಕೇಳಿ ಬರುತ್ತದೆ. ನಾನು ಕೂಗು ಎತ್ತೋದು ನಿಜ. ನಾನೇನು ಹೊಸದಾಗಿ ಹೇಳ್ತಿಲ್ಲ. ಕಳೆದ 20 ವರ್ಷಗಳಿಂದ ಉತ್ತರ ಕರ್ನಾಟಕಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಈ ಭಾಗದ ಅಭಿವೃದ್ಧಿಗಾಗಿ ನನ್ನ ಕೂಗಿದೆ, ಮುಂದೆಯೂ ಈ ಕೂಗು ಇರಲಿದೆ ಎಂದು ಹೇಳುವ ಮೂಲಕ ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಅವರು ಸಮರ್ಥಿಸಿಕೊಂಡರು.
ಅಭಿವೃದ್ಧಿ ದೃಷ್ಟಿಯಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಕೂಡದು. ಅನ್ಯಾಯವಾದಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಕೂಗು ಇದ್ದೇ ಇರಲಿದೆ. ನನ್ನ ಕೂಗಿಗೆ ಉತ್ತರ ಕರ್ನಾಟಕ ಶಾಸಕರೆಲ್ಲರ ಬೆಂಬಲ ಇದೆ, ಆದರೆ, ಯಾರು ಬಾಯಿ ಬಿಡುತ್ತಿಲ್ಲ. ಈ ಭಾಗಕ್ಕೆ ಅನ್ಯಾಯವಾದಾಗ ನನ್ನ ಪ್ರತ್ಯೇಕತೆ ಕೂಗು ಇರುವುದು ಸಹಜ ಎಂದು ಸಚಿವ ಉಮೇಶ ಕತ್ತಿ ಹೇಳಿದರು.