ವಿಜಯಪುರ: ಎಲ್ಲ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ನಮಗೆ ಯಾರಿಗೂ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಶಾಸಕ ರಾಜುಗೌಡ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ನಾನು ನೇರವಾಗಿಯೇ ಹೇಳುತ್ತೇನೆ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ ಹೇಳಿ ಎಂದು ಮರು ಪ್ರಶ್ನಿಸಿದರು.
ನಾನು ಯಾರ ವಿರುದ್ಧವೂ ಬ್ಲೇಮ್ ಮಾಡುವುದಿಲ್ಲ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ? ನಮ್ಮ ಕುಟುಂಬದಲ್ಲಿ ನೀನೊಬ್ಬನೆ ರಾಜಕಾರಣ ಮಾಡು ಎಂದು ನಮ್ಮ ತಂದೆ ಹೇಳಿದ್ದರು. ಎಲ್ಲ ಎಲ್ಲ ಕಡೆ ಕುಟುಂಬ ರಾಜಕಾರಣ ತುಂಬಿ ತುಳುಕುತ್ತಿದೆ. ಇಲ್ಲ ಎಂದು ಹೇಳಿದರೆ ನಮಗಿಂತಲೂ ದಡ್ಡ ಬೇರಾರೂ ಇಲ್ಲ ಎಂದು ಹೇಳಿದರು.
ಬಿ. ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ವಿಚಾರ
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜಕೀಯ ನಿವೃತ್ತಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿ. ಎಸ್. ಯಡಿಯೂರಪ್ಪ ಓರ್ವ ಶಾಸಕಾರಿಗಿದ್ದಾಗಿನಿಂದಲೂ ಪಕ್ಷ ಸಂಘಟನೆ ಮಾಡಿದ್ದರು. ಇಂದು 110 ರಿಂದ 120 ರ ವರೆಗೆ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಇದಕ್ಕೆ ಯಡಿಯೂರಪ್ಪ ಅವರೂ ಕಾರಣೀಭೂತರಾಗಿದ್ದಾರೆ. ಬಿಜೆಪಿಯಲ್ಲಿ 75 ವರ್ಷ ಆದ ಮೇಲೆ ಟಿಕೆಟ್ ಕೊಡಬಾರದು ಎಂದು ನಿಯಮವಿದೆ. ಅದರಲ್ಲೂ ಬಿ. ಎಸ್. ಯಡಿಯೂರಪ್ಪ ವಿಶೇಷವಾಗಿ ಸಿಎಂ ಆಗಿ ಕೆಲಸ ಮಾಡಿದ್ದಾರೆ. ವಿಜಯೇಂದ್ರ ಅಣ್ಣಾವ್ರು ಬೇರೆ ಬೇರೆ ಕಡೆ ಸ್ಪರ್ಧಿಬೇಕು ಎಂದು ಕಾರ್ಯಕ್ರತರ ಒತ್ತಡವಿತ್ತು. ಈ ಹಿನ್ನೆಲೆಯಲ್ಲಿ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡಲಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.
ಯಡಿಯೂರಪ್ಪ ಅವರು ರಾಜಕೀಯದಿಂದ ನಿವೃತ್ತಿ ಆಗ್ತಿಲ್ಲ. ಚುನಾವಣೆಗೆ ಬಿ. ಎಸ್. ಯಡಿಯೂರಪ್ಪ ಸ್ಪರ್ಧಿಸುತ್ತಿಲ್ಲ. ಬಿ ಎಸ್ ವೈ ಅವರ ಮಾರ್ಗದರ್ಶನದಲ್ಲಿಯೇ ಬಿಜೆಪಿಯನ್ನು ಮುನ್ನಡೆಸಲಾಗುತ್ತದೆ. ಎಂದು ಶಾಸಕರು ತಿಳಿಸಿದರು.
ಯಡಿಯೂರಪ್ಪನವರನ್ನು ಕಪಿಲದೇವ ಗೆ ಹೋಲಿಕೆ
ಇದೇ ವೇಳೆ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲದೇವ ಅವರಿಗೆ ಹೋಲಿಕೆ ಮಾಡಿದ ರಾಜುಗೌಡ, ಕಪಿಲದೇವ ನೇತೃತ್ವದಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದಿದ್ದೇವೆ. ಕಪಿಲದೇವ ಅವರು ಕ್ರಿಕೆಟ್ ನಿಂದ ನಿವೃತ್ತಿ ಘೋಷಣೆ ಮಾಡಿದ ಮೇಲೆ ಬಹಳರ ಬೇಜಾರಾಗಿತ್ತು. ಆಮೇಲೆ ಕಪಿಲದೇವ ಅವರು ಭಾರತೀಯ ಕ್ರಿಕೆಟ್ ತಂಡದ ಕೋಚ್ ಆಗಿ ಕೆಲಸ ಮಾಡಿದರು. ಅದೇ ರೀತಿಯಲ್ಲಿ ಬಿ. ಎಸ್. ಯಡಿಯೂರಪ್ಪ ಕೂಡ ನಮ್ಮ ತಂಡವನ್ನು ಮುನ್ನಡೆಸುತ್ತಾರೆ ಎಂದು ಶಾಸಕರು ತಿಳಿಸಿದರು.
ವಿಜಯೇಂದ್ರ ವಿಚಾರ
ಬಿ ಎಸ್ ವೈ ಪುತ್ರ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಸಕ್ರೀಯ ರಾಜಕಾರಣದಿಂದ ಬಿಜೆಪಿಗೆ ಶಕ್ತಿ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯೇಂದ್ರ ಓರ್ವ ಐಕಾನ್. ಒಳ್ಳೆಯ ಲೀಡರ್. ಯುವಕರು ಅವರನ್ನು ಬಹಳ ಇಷ್ಟಪಡುತ್ತಾರೆ. ಅವರು ಯಾಕೆ ರಾಜಕಾರಣಕ್ಕೆ ಬರಬಾರದು? ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ 75 ವರ್ಷ ಪೂರೈಸಿರುವ ಇತರ ನಾಯಕರು ಬಿ. ಎಸ್. ಯಡಿಯೂರಪ್ಪ ಅವರ ನಡೆಯನ್ನು ಅನುಸರಿಸುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರಾರಿಗೆ 75 ವರ್ಷ ಆಗಿದೆ ಅಂತ ದಾಖಲೆಗಳನ್ನು ತೆಗೆಸುತ್ತಿದ್ದೇವೆ. ಅವರೆಲ್ಲರಿಗೂ ಸಾಮೂಹಿಕವಾಗಿ ಬರ್ಥ್ ಡೇ ಆಚರಣೆ ಮಾಡುವ ಯೋಚನೆಯಿದೆ ಎಂದು ಯಾದಗಿರಿ ಜಿಲ್ಲೆಯ ಸುರಪುರ ಬಿಜೆಪಿ ಶಾಸಕ ರಾಜುಗೌಡ ಮಾರ್ಮಿಕವಾಗಿ ಉತ್ತರಿಸಿದರು.