ವಿಜಯಪುರ: ಸ್ವಾತಂತ್ರ್ಯದ ಬಳಿಕ ವಿಧಿಯಿಲ್ಲದೇ ಸಂವಿಧಾನವನ್ನು ಒಪ್ಪಿದದವರು ಈಗ ಜನರಲ್ಲಿ ಮೌಢ್ಯ ಮತ್ತು ಮನು ಸಂಸ್ಕೃತಿಯನ್ನು ಬಿತ್ತುವ ಮೂಲಕ ಹಳೆಯ ವ್ಯವಸ್ಥೆಯನ್ನು ಪುನರ್ ಜಾರಿಗೆ ತರುತ್ತಿದ್ದಾರೆ. ಇದಕ್ಕೆ ನಾವು ಕೂಡ ಪ್ರಜ್ಞಾಪೂರ್ವಕವಾಗಿ ಮುಂದೆ ಹೋಗುತ್ತಿದ್ದೇವೆಯೋ ಇಲ್ಲವೇ ಅಥವಾ ಅನಿವಾರ್ಯವಾಗಿ ಸಿಲುಕಿ ಹಾಕಿಕೊಂಡಿದ್ದೇವೆಯೋ ಎಂಬುದು ಗೊತ್ತಾಗುತ್ತಿಲ್ಲ. ಈದು ವರ್ತಮಾನ ಜೀವನದ ವಿಪರ್ಯಾಸವಾಗಿದೆ ಎಂದು ವಿಧಾನ ಸಭೆ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ಕೆ. ಆರ್. ರಮೇಶ ಕುಮಾರ ಹೇಳಿದ್ದಾರೆ.
ವಿಜಯಪುರ ನಗರದ ಪ್ರತಿಷ್ಠಿತ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ ಸಾಂಸ್ಕೃತಿಕ ಬಳಗದ ವತಿಯಿಂದ ಬಿ ಎಲ್ ಡಿ ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಪೂಜ್ಯ ಡಾ. ಫ. ಗು. ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಮಹಾದಾನಿ ಬಂಗಾರಮ್ಮ ಸಜ್ಜನ, ಶಿಕ್ಷಣ ಪ್ರೇಮಿ ದಿ. ಬಿ. ಎಂ. ಪಾಟೀಲ ಅವರ ಸ್ಮರಣೆ ಅಂಗವಾಗಿ ಆಯೋಜಿಸಲಾಗಿದ್ದ ವರ್ತಮಾನದ ಬದುಕು ವಿಷಯದ ಕುರಿತು ದಿಕ್ಸೂಚಿ ಉಪನ್ಯಾಸ ನೀಡಿದರು.
ಸಂವಿಧಾನ ಜಾರಿಗೆ ಬರುವ ಮುಂಚೆ ಸಮಾನತೆ ಇರಲಿಲ್ಲ. ಅಸಮಾನತೆ, ಜಾತಿ ವ್ಯವಸ್ಥೆ ಹೋಗಲಾಡಿಸಲು ಸಂವಿಧಾನ ಜಾರಿಗೆ ಬಂದಿದೆ. ಈಗ ರಾಜ ಇಲ್ಲ, ಕಿರೀಟವಿಲ್ಲ. ಬ್ರಿಟೀಷರು ನಮ್ಮನ್ನಾಳಿದರು. ಅಂದು ಆಂಗ್ಲರ ನಾಡಿನಲ್ಲಿ ಚರ್ಚ್ ಗಳು ಪಾರುಪತ್ಯ ತೋರಿದ್ದವು. ರಾಜನೂ ಕೂಡ ಚರ್ಚ್ ಅಣತಿಯಂತೆ ಕಾರ್ಯ ನಿರ್ವಹಿಸಬೇಕಾಗಿತ್ತು, ನಮ್ಮಲ್ಲಿಯೂ ಧರ್ಮಾಧಾರಿತ ವ್ಯವಸ್ಥೆ ವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳುವಾಗ ವಿಜಯಪುರದಲ್ಲಿ ಬಸವಣ್ಣವರು ಜನಿಸಿ ಲಿಂಗ, ಜಾತಿ, ಕಾಯಕ ತಾರತಮ್ಯ ಹೋಗಲಾಡಿಸಲು ಸಿಡಿದೆದ್ದು ಸಾಮಾಜಿಕ ಕ್ರಾಂತಿ ಮಾಡಿದರು. ಸ್ವಾತಂತ್ರ್ಯ ನಂತರ ಮನುಸ್ಮೃತಿಯ ವಿಚಾರಧಾರೆ ತೊಡದು ಹಾಕಲು ಸಂವಿಧಾನ ರಚನೆಯಾಯಿತು. ಆದರೆ, ಈಗ ಬೇರೆ ಬೇರೆ ರೀತಿಯಲ್ಲಿ ಮತ್ತೆ ಮನುಸ್ಮೃತಿಯನ್ನು ಜಾರಿಗೆ ತರಲು ಒಂದು ಗುಂಪು ಸಕ್ರೀಯವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಹಿಂದೂ ಧರ್ಮ ವಿಭಜನೆ ತಡೆಯಲು ಮಹಾತ್ಮಾ ಗಾಂಧಿ ಪ್ರತ್ಯೇಕ ಚುನಾವಣೆ ಪದ್ಧತಿಯನ್ನು ಒಪ್ಪಲಿಲ್ಲ. ಆದರೆ, ಹಿಂದೂ ಧರ್ಮ ಒಡೆಯುವುದನ್ನು ತಡೆದ ಮಹಾತ್ಮಾ ಗಾಂಧಿಯನ್ನೇ ಕೊಂದಿರುವ ಸಮುದಾಯ ಇಂದು ಹಿಂದೂ ಹಿಂದೂ ಎಂದು ಅಬ್ಬರಿಸುತ್ತಿದ್ದಾರೆ ಎಂದು ಕೆ. ಆರ್. ರಮೇಶ ಕುಮಾರ ವಿಷಾಧ ವ್ಯಕ್ತಪಡಿಸಿದರು.
ಭಗತ್‌ಸಿಂಗ್ ನೇಣಿಗಿರುವಾಗ ಡಾ. ಹೆಗಡೆವಾರ ಒಂದು ಮಾತನ್ನೂ ಹೇಳಲಿಲ್ಲ. ಬಾಲ್ಯದಲ್ಲಿಯೇ ದೇಶಭಕ್ತಿಯನ್ನು ಉಸಿರಾಗಿಸಿಕೊಂಡು ಭಗತ್‌ಸಿಂಗ್ ಹೋರಾಡುವಾಗ ಡಾ. ಹೆಗಡೆವಾರ ಎಲ್ಲಿದ್ದರು? ಎಂದು ಅವರು ಪ್ರಶ್ನಿಸಿದರು.
ಶ್ರೀರಾಮ ಸೇನೆಯ ವಿರುದ್ಧವೂ ವಾಗ್ದಾಳಿ
ಪಿತೃವಾಕ್ಯ ಪರಿಪಾಲನೆಗೆ ಅಧಿಕಾರವನ್ನೇ ತ್ಯಜಿಸಿ 14 ವರ್ಷ ವನವಾಸ ಅನುಭವಿಸಿದ ಆದರ್ಶ ಪುರುಷ ಶ್ರೀರಾಮನ ಹೆಸರು ಹೇಳಿಕೊಂಡು ಕೆಲವರು ತಿರುಗಾಡುತ್ತಿದ್ದಾರೆ. ಆತನ ಹೆಸರು ಇಟ್ಟುಕೊಂಡಿರುವ ಶ್ರೀರಾಮ ಸೇನೆ ಕಾರ್ಯಕರ್ತರು ಜನರ ಜೀವನ ಶೈಲಿ, ಆಹಾರ ಪದ್ಧತಿ, ಧರ್ಮ ಮತ್ತು ಪ್ರೀತಿಯ ಬಗ್ಗೆ ಪರ್ಮಿಶನ್ ನೀಡುವ ನೈತಿಕಗಿರಿ ತೋರಿಸುತ್ತಿದ್ದಾರೆ. ಮನುವಾದವನ್ನು ಪ್ರಬಲವಾಗಿ ಬೆಂಬಲಿಸಿದ ಸಾವರಕರ ಅವರ ಜಯಂತೋತ್ಸವವನ್ನು ಕೇಂದ್ರ ಸಕಾರ ಆಚರಿಸಲು ಹೊರಟಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.
ಯಾರು ಏನು ತಿನ್ನಬೇಕು ಎನ್ನುವುದು ಅವರ ವೈಯಕ್ತಿಕ ವಿಚಾರವಾಗಿದೆ. ಆದರೆ, ಇತರರ ಭಾವನೆಗಳಿಗೆ ಧಕ್ಕೆ ತರುವ ಕಾನೂನು ಜಾರಿಯಾಗಬಾರದು. ಒಂದು ಸಮುದಾಯವನ್ನು ಮನಸ್ಸಿನಲ್ಲಿಟ್ಟುಕೊಂಡು ಆ ಸಮುದಾಯಗಳ ಮನಸ್ಸಿಗೆ ನೋವುಂಟು ಮಾಡುವ ರೀತಿಯಲ್ಲಿ ಕಾನೂನುಗಳನ್ನು ರೂಪಿಸುವುದು ಅಧಿಕಾರದ ಸ್ಪಷ್ಟವಾದ ದುರಪಯೋಗ ಪಡಿಸಿಕೊಂಡಂತೆ ಎಂದು ರಮೇಶ ಕುಮಾರ ಹೇಳಿದರು.
ನಮ್ಮದಲ್ಲದ ಭೂಮಿಯನ್ನು ವಶಪಡಿಸಿಕೊಂಡ ಕೇಸುಗಳು ರಾಜಕಾರಣಿಗಳ ಮೇಲೆ ರಾರಾಜಿಸುತ್ತಿವೆ, ಆದರೆ, ವಿಜಯಪುರದ ಬಂಗಾರೆಮ್ಮ ಸಜ್ಜನ ಎನ್ನುವ ಮಹಾತಾಯಿ ಈ ಹಿಂದೆ ತಮ್ಮ 54 ಎಕರೆ ಜಮೀನನ್ನು ಬಿ ಎಲ್ ಡಿ ಇ ಸಂಸ್ಥೆಯ ದಾನ ಮಾಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಜೀವನ ಹಸನಾಗಲು ಕಾರಣರಾಗಿದ್ದಾರೆ. ಬಂಗಾರೆಮ್ಮ ಸಜ್ಜನ ಅವರು ದಾನ ನೀಡಿದ ಬೆಲೆಬಾಳುವ ಜಮೀನನ್ನು ಶಿಕ್ಷಣ ಕ್ರಾಂತಿಗೆ ಬಂಥನಾಳ ಶಿವಯೋಗಿಗಳಿಗೆ ಸಮರ್ಪಿಸಿದ್ದಾರೆ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ವಚನ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು, ಬಂಥನಾಳ ಶಿವಯೋಗಿಗಳು ಶೈಕ್ಷಣಿಕ ಗಂಗೆಯನ್ನೇ ಹರಿಸಿದರು. ಈ ಮಹನೀಯರ ಸಮಾಜಮುಖಿ ಕೆಲಸ ಕಾರ್ಯಗಳ ಮುಂದುವರೆದ ಭಾಗವಾಗಿ ಎಂ. ಬಿ. ಪಾಟೀಲ ಅವರು ಯಾವುದೇ ಹಂಗಿಲ್ಲದೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಳಕಲ್ ಅಕ್ಕನ ಬಳಗದ ಅಧ್ಯಕ್ಷೆ ಗಿರಿಜಾ ಚಂದ್ರಶೇಖರ ಶಿವಬಲ, ಇಲಕಲ್ ವಚನ ಸಾಹಿತ್ಯ ಪರಿಷತ ಸಂಚಾಲಕ ಮಹಾಂತೇಶ ಮಹಾಂತಪ್ಪ ಗಜೇಂದ್ರಗಡ, ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕಾರ್ತಿಕ ರಾಜು ಕುಬಸದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ, ಧಾರವಾಡ ಮುರುಘಾಮಠ ಮತ್ತು ಬೆಂಗಳೂರು ಸರ್ಪಭೂಷಣ ಶಿವಯೋಗಿಗಳ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ರೇಡಿಯೋ ಕಲಾವಿದ ಬಸವರಾಜ ಹಿರೇಮಠ, ವಚನ ಗಾಯನ ಹಾಡಿದರು. ಸಾಂಸ್ಕೃತಿಕ-ಚಿಂತನ ಬಳಗದ ಕಾರ್ಯದರ್ಶಿ ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಅಲ್ಲದೇ, ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ. ಎಸ್. ಮದಭಾವಿ ವಂದಿಸಿದರು. ಡಾ. ವಿ. ಡಿ. ಐಹೊಳ್ಳಿ ನಿರೂಪಿಸಿದರು.