ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಆದ ನಂತರ ಜನ ಹಾಗೂ ಕಾರ್ಯಕರ್ತರು ವ್ಯಕ್ತ ಮಾಡಿರುವ ಆಕ್ರೋಶದ ಹಿನ್ನೆಲೆಯಲ್ಲಿ ಆತ್ಮಸಾಕ್ಷಿಯಾಗಿ ನಿರ್ಣಯ ಕೈಗೊಂಡು ಬ್ಯಾಂಕ್ವೆಟ್ ಹಾಲಿನಲ್ಲಿ ಮತ್ತು ಪಕ್ಷದ ವತಿಯಿಂದ ದೊಡ್ಡಬಳ್ಲಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರಕಾರಕ್ಕೆ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ನಿರ್ಣಯದ ಬಗ್ಗೆ ಹಲವಾರು ವ್ಯಾಖ್ಯಾನಗಳು ಆಗಿವೆ. ಆದರೆ. ಮೊನ್ನೆಯ ಘಟನೆಯ ಬಗ್ಗೆ ಯೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಕಾರ್ಯಕರ್ತರು ಹಾಗೂ ಜಿಲ್ಲಾ ಮಂತ್ರಿಗಳೊಂದಿಗೆ ಜೊತೆಗೆ ಚರ್ಚೆ ಮಾಡಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಇಂದಿಗೆ ಬಿಜೆಪಿ ಆಡಳಿತದ ಸರಕಾರ ಮೂರು ವರ್ಷಗಳನ್ನು ಪೂರೈಸಿದೆ. ಎರಡು ವರ್ಷ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಕಳೆದ ಒಂದು ವರ್ಷ ನನ್ನ ನೇತೃತ್ವದ ಸರಕಾರಕ್ಕೆ ಒಂದು ವರ್ಷ ತುಂಬಿದೆ. ಜನರಿಗೆ ಒಂದು ವರ್ಷ ಏನು ಮಾಡಿದ್ದೇವೆ ಎಂದು ಹೇಳುವುದು ನಮ್ಮ ಕರ್ತವ್ಯ ಹಾಗೂ ಉತ್ತರದಾಯಿತ್ವ. ಈ ಸಂದರ್ಭದಲ್ಲಿ ಮಾಡಬಹುದಾದ ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸುವ ಸಂದರ್ಭವಿದು ಎಂದು ಸಿಎಂ ಹೇಳಿದರು.
ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ಸದಸ್ಯರಿಗೆ, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ. ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ದೇಶವನ್ನು ಸಮರ್ಥವಾಗಿ ನಡೆಸುತ್ತಿರುವ ಪ್ರಧಾನಿ ಮೋದಿಯವರಿಗೆ ಸವಾಲುಗಳ ಮಧ್ಯೆಯೂ ಸಾಧನೆ ಮಾಡಲು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಬದ್ಧತೆಯುಳ್ಳ ಸಚಿವ ಸಂಪುಟ
ನಮ್ಮದು ಒಂದು ತಂಡ. ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರಿದ್ದಾರೆ, ಸೇವಾ ಮನೋಭಾವವಿರುವವರು, ಯುವಕರಿದ್ದಾರೆ. ಒಟ್ಟಾರೆ ಬದ್ಧತೆ ಇರುವ ಸಚಿವ ಸಂಪುಟ ನಮ್ಮದು. ಇವರೆಲ್ಲರ ಪಾಲು ಒಂದು ವರ್ಷದ ಸಾಧನೆಯಲ್ಲಿ ಇದೆ. ಕೋವಿಡ್ ಸಾಂಕ್ರಾಮಿಕ ಒಂದು ಹಂತಕ್ಕೆ ಬಂದಂಥ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಳ್ಳಲಾಯಿತು. 2 ವರ್ಷ ನಮ್ಮ ನಾಯಕರಾದ ಬಿ ಎಸ್. ಯಡಿಯೂರಪ್ಪ ಅವರು ಅತ್ಯಂತ ಸಮರ್ಥವಾಗಿ, ಸಚಿವ ಸಂಪುಟದ ಸಚಿವರು, ಸಹಕಾರ ನೀಡಿದರು. ವಿಶೇಷವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಜನರ ಪಾಲ್ಗೊಳ್ಳುವಿಕೆ ಹಾಗೂ ಭಾಗೀಧಾರಿಕೆಯ ಆಡಳಿತ
ಆಡಳಿತ ಯಾರ ಪರವಾಗಿದೆ ಎನ್ನುವುದು ಮುಖ್ಯ. ನಮ್ಮ ನಿರ್ಣಯಗಳ ಮುಖಾಂತರ ಒಟ್ಟಾರೆ ಜನಪರವಾಗಿರುವ ಆಡಳಿತ ನೀಡುವುದು, ರಾಜ್ಯ ಸಮಗ್ರ ಅಭಿವೃದ್ಧಿ ಹೊಂದಿ ಎಲ್ಲರಿಗೂ ಪಾಲುದಾರಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ಆಡಳಿತವನ್ನು ನೀಡಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಡಾ. ಸಿ. ಎನ್. ಅಶ್ವತ್ಥನಾರಾಯಣ ಸೇರಿದಂತೆ ನಾನಾ ಸಚಿವರು ಉಪಸ್ಥಿತರಿದ್ದರು.