ವಿಜಯಪುರ: ಬವಸ ನಾಡು ವಿಜಯಪುರ ಜಿಲ್ಲೆಯಲ್ಲಿ ಜಾತ್ರೆಗಳ ಸಂಭ್ರಮ ಮುಂದುವರೆದಿದೆ. ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದಲ್ಲಿ ನಾಗರ ಅಮಾವಾಸ್ಯೆ ನಡೆದ ಪವಾಡ ಪುರುಷ ಗೂಳಪ್ಪ ಮುತ್ಯಾನ ಜಾತ್ರೆ ಸಂಭ್ರಮ ಮತ್ತು ಸಡಗರಕ್ಕೆ ಸಾಕ್ಷಿಯಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕಳೆಗುಂದಿದ್ದ ಜಾತ್ರೆಗೆ ಈಗ ಮತ್ತೆ ಕಳೆ ಬಂದಿದೆ. ನಾಗಠಾಣ ಗ್ರಾಮದಲ್ಲಿ ಪವಾಡ ಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರೆಯ ಅಂಗವಾಗಿ ಕೇವಲ ಧಾರ್ಮಿಕ ಮಾತ್ರವಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಾತ್ರೆಯ ಸಂಘಟಕರು ಭಕ್ತರ ಪ್ರೀತಿಗೆ ಪಾತ್ರರಾದರು. ಡೊಳ್ಳಿನ ವಾಲಗದೊಂದಿಗೆ ಬೀರ ಸಿದ್ಧೇಶ್ವರ, ಕಗ್ಗೊಡದ ತಿಪರಾಯ ದೇವರ, ಲಾಯಮ್ಮ ದೇವಿ, ತಿಡಗುಂದಿಯ ಬೀರಲಿಂಗೇಶ್ವರ ದೇವರ, ಮಾಳಿಂಗರಾಯ ದೇವರ ಪಲ್ಲಕ್ಕಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿದ್ದರೆ ಭಕ್ತರ ಜಯಘೋಷಗಳು ಪಲ್ಲಕ್ಕಿ ಹೊತ್ತವರ ಹುರುಪನ್ನು ಹೆಚ್ಚಿಸಿದವು.
ಬಳಿಕ ಗಂಗಾ ಪೂಜೆ ನೆರವೇರಿಸಲಾಯಿತು. ನಂತರ ನಾಗಠಾಣ ಗ್ರಾಮದ ನಡುಕಟ್ಟೆಯ ಮೇಲೆ ಎಲ್ಲ ಪಲ್ಲಕ್ಕಿಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು. ಮಹಿಳೆಯರು, ಮಕ್ಕಳು, ಹಿರಿಯರೂ ಕೂಡ ದೇವಸ್ಥಾನಕ್ಕೆ ಬಂದು ನೈವೆದ್ಯ ಅರ್ಪಿಸಿ, ಕರ್ಪೂರ ಹಚ್ಚಿ, ಊದಿನ ಕಡ್ಡಿ ಬೆಳಗಿ, ಟೆಂಗಿನಕಾಯಿ ಒಡೆದು ಧನ್ಯರಾದರು.
ಈ ಸಂದರ್ಭದಲ್ಲಿ ಬಳಗಾನೂರ, ಮತ್ತು ಸಾರವಾಡ ಗ್ರಾಮದ ಯುವಕರು ಗ್ರಾಮೀಣ ಕಲೆಗಳನ್ನು ಪ್ರದರ್ಶಿಸಿ ಜನಮನ ಗೆದ್ದರು. ಇದೇ ಸಂದರ್ಭದಲ್ಲಿ ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು. ಇಲ್ಲಿ ಧರ್ಮಭೇದವಿಲ್ಲದೆ ಗ್ರಾಮದ ಎಲ್ಲರೂ ಪಾಲ್ಗೋಂಡಿದ್ದು ಗಮನಾರ್ಹವಾಗಿತ್ತು. ಅಷ್ಟೇ ಅಲ್ಲ, ರಾಜ್ಯದ ನಾನಾ ಜಲ್ಲೆಗಳಿಂದ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು.
ಗೊಂಬೆ ಕುಣಿತ,ಕರಡಿ ಮಜಲುದಂಥ ಅನೇಕ ಪ್ರದರ್ಶನಗಳು ಜನರನ್ನು ಆಕರ್ಷಿಸಿದವು. ಭಾರ ಎತ್ತುವ ಸ್ಪರ್ಧೆ ಮೈನವಿರೇಳಿಸಿತು. ಅಪ್ಪಟ ಗ್ರಾಮೀಣ ಪರಂಪರೆಯನ್ನು ಬಿಂಬಿಸುವ ಈ ಜಾತ್ರೆಯು ಗೂಳಪ್ಪ ಮುತ್ಯಾ ಜಾತ್ರೆ ಎಂದೇ ಪ್ರಸಿದ್ಧವಾಗಿದೆ. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಲೆ ಕೆಳಗೆ ಮಾಡಿ ಕೈಯಿಂದ ನಡೆಯುವ ಮೂಲಕ ಜಾತ್ರೆಯಲ್ಲಿ ಸೇರಿದ್ದ ಜನರ ಸೇರಿದ ಭಕ್ತರು ಮೂಗಿನ ಮೇಲೆ ಬೆರಳಿಟ್ಟುಕೊಳ್ವಂತೆ ಮಾಡಿದ್ದು ಗಮನಾರ್ಹವಾಗಿತ್ತು. ಈ ಜಾತ್ರೆಗೆ ಬರುವ ಎಲ್ಲ ಭಕ್ತರಿಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಜಾತ್ರೆಯಲ್ಲಿ ಕಾರ್ಣಿಕ ನುಡಿಯುವ ಭವಿಷ್ಯ ಕೂಡ ಮುಂದಿನ ಒಂದು ವರ್ಷದೊಳಗೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಒಳಗೊಂಡಿರುತ್ತದೆ.