Pressday Nadahalli: ಮಾಧ್ಯಮಗಳು ಮನೋವಿಕಾಸದ ಸುದ್ದಿಗಳಿಗೆ ಆದ್ಯತೆ ನೀಡಬೇಕು- ಎ. ಎಸ್. ಪಾಟೀಲ ನಡಹಳ್ಳಿ

ವಿಜಯಪುರ: ಮಾಧ್ಯಮಗಳು ಮನೋವಿಕಾರದ ಬದಲು ಮನೋವಿಕಾಸದ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಮುದ್ದೇಬಿಹಾಳ ಬಿಜೆಪಿ ಶಾಸಕ ಮತ್ತು ರಾಜ್ಯ ಆಹಾರ ನಿಗಮದ ಅಧ್ಯಕ್ಷ ಎ. ಎಸ್. ಪಾಟೀಲ ನಡಹಳ್ಳಿ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ ಮತ್ತು ಶ್ರೀ ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪದಗ್ರಹಣ, ಪ್ರಶಸ್ತಿ ಪ್ರದಾನ, ವಿತರಕರಿಗೆ ಸೌಲಭ್ಯ ಮತ್ತು ಸದಸ್ಯರಿಗೆ ಐಡಿ ಕಾರ್ಡ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮಗಳು ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇ ನಿಟ್ಟಿನಲ್ಲಿ ಪತ್ರಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಾಧ್ಯಮಗಳು ಸ್ವತಂತ್ರ ಪೂರ್ವದಲ್ಲಿ ಹೊಂದಿದ್ದ ಗುರಿಗಳು ಈಗ ಬದಲಾಗಿವೆ. ಮಾಧ್ಯಮಗಳಲ್ಲಿ ಇರುವ ವ್ಯಕ್ತಿಗಳ ಯೋಚನೆಯ ಆಧಾರದ ಮೇಲೆ ವರದಿಗಳು, ಲೇಖನಗಳು, ಸುದ್ದಿಗಳು ಬರುತ್ತಿವೆ. ಈ ವರದಿಗಳ ಆಧಾರದ ಮೇಲೆ ವರದಿ ನೀಡುವ ವ್ಯಕ್ತಿ ಮತ್ತು‌ ಸಂಸ್ಥೆಗಳ ಮನಸ್ಥಿತಿಯನ್ನು ಅರ್ಥೈಸಬಹುದಾಗಿದೆ. ಪತ್ರಿಕೆಗಳಲ್ಲಿ ವರದಿಗಾರನ ಮನಸ್ಥಿತಿಯ ಬದಲು ಸಮಾಜದ ಮನಸ್ಥಿತಿಯ ಮಾತುಗಳು ಬಂದಲ್ಲಿ ಅದಕ್ಕೊಂದು ಅರ್ಥ ಬರುತ್ತದೆ. ಇತ್ತೀಚೆಗೆ ಕೆಲವರು ಬರೆಯೋದನ್ನು ಓದೋಕೆ ಆಗದೆ ಅಂಥ ಪತ್ರಿಕೆ ಬದಿಗಿಡುವಂತಾಗಿದೆ. ವಿಕೃತ ಮನಸ್ಸಿನವರು ಮಾತ್ರ ವಿಕೃತ ಬರವಣಿಗೆ ಓದುತ್ತಾರೆ. ಬರವಣಿಗೆ ಓದುವವರ ಮನಸ್ಸಿಗೆ, ಸಮಾಜಕ್ಕೆ ಸಂತೋಷ ಕೊಡುವಂತಿರಬೇಕು ಎಂದು ಶಾಸಕರು ಹೇಳಿದರು.

ಮುದ್ದೇಬಿಹಾಳದಲ್ಲಿ ಪತ್ರಿಕಾ ದಿಬಾಚರಣೆ ಕಾರ್ಯಕ್ರಮ‌ ನಡೆಯಿತು

ನೆಗೆಟಿವ್ ಮನೋಭಾವ, ಮನೋವಿಕಾರದ ಲೇಖನಗಳಿಗೆ ಯಾವತ್ತಿಗೂ ಬೆಲೆ ಇಲ್ಲ. ಟಿ ಆರ್ ಪಿ, ಸ್ಪರ್ಧೆ, ಸ್ಪೋಟಕ ಸುದ್ದಿ ಕೊಡುವ ಭರದಲ್ಲಿ ಮಾಧ್ಯಮ ಭಯ ಹುಟ್ಟಿಸುವ ರೀತಿ ನಡೆದುಕೊಳ್ಳುತ್ತಿರುವುದು ಮಕ್ಕಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುವುದರಿಂದ ಮಕ್ಕಳಿಗೆ ಟಿವಿ ಚಾನಲ್‍ಗಳನ್ನು ತೋರಿಸಲೇಬಾರದು ಎಂಬಂತಾಗಿದೆ ಎಂದು ನಡಹಳ್ಳಿ ಹೇಳಿದರು.

ಮಾಧ್ಯಮಗಳು ಒಳ್ಳೇಯದನ್ನು ಗುರುತಿಸಬೇಕು. ಶೇ.99 ಒಳ್ಳೇಯದನ್ನು ಕೈಬಿಟ್ಟು ಶೇ.1ರಷ್ಟು ಕೆಟ್ಟದ್ದನ್ನೇ ಹೈಲೈಟ್ ಮಾಡುವುದು ತಪ್ಪು. ಒಬ್ಬ ವ್ಯಕ್ತಿ ವಿರುದ್ಧವಾಗಿಯೇ ಬರೆಯಬೇಕು ಎಂದು ತೀರ್ಮಾನಿಸಿದರೆ ಏನೂ ಮಾಡಲು ಆಗುವುದಿಲ್ಲ. ಬರೆಯಿರಿ, ಬೇಕಾದ್ದು ಬರೆದುಕೊಳ್ಳಿ ಎನ್ನುತ್ತೇವೆ. ವಾಸ್ತವ, ಸತ್ಯವನ್ನು ಬರೆಯಿರಿ. ಸಾಕ್ಷಿ ಸಮೇತ ಬರೆಯುವ ಲೇಖನಕ್ಕೆ ಮೌಲ್ಯವಿದೆ. ಒಬ್ಬ ವ್ಯಕ್ತಿ ಏನಾದರೂ ಬರೆದರೆ ಅದರ ಬಗ್ಗೆ ಯೋಚನೆ ಮಾಡುವಂತೆ ಬರೆಯಬೇಕು ಎಂದು ಅವರು ಹೇಳಿದರು.

ಪತ್ರಕರ್ತರು ಆ.1 ರಿಂದ ಆ. 15ರ‌ ವರೆಗೆ ನೆಗೆಟಿವ್ ಸುದ್ದಿ ಬಂದ್ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರ, ಸ್ವಾತಂತ್ರ್ಯ ಯೋಧರ ಕುಟುಂಬದ ಕುರಿತ ಸುದ್ದಿ ಮಾಡಿ.‌‌‌ ಇದು ಪ್ರೇರಣೆ, ಪ್ರೋತ್ಸಾಹ ನೀಡುತ್ತದೆ. ಆ.5‌ ರಿಂದ ಆ.‌12ರ ವರೆಗೆ ನಡೆಯುವ ಯುವಜನ ಸಂಕಲ್ಪ ನಡಿಗೆಯ ನೇತೃತ್ವವನ್ನು ಮಾಧ್ಯಮದವರೇ ವಹಿಸಿಕೊಳ್ಳಬೇಕು. ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ. ಯುವಜನತೆಗೆ ದೇಶ, ದೇಶದ ರಕ್ಷಣೆ, ದೇಶಾಭಿಮಾನ ಮೂಡಿಸುವ ಐತಿಹಾಸಿಕ ಕಾರ್ಯಕ್ರಮ ಅದಾಗಿರುತ್ತದೆ ಎಂದು ಶಾಸಕರು ಹೇಳಿದರು.

ಕೆಲವರು ಪ್ರತಿದಿನ‌‌ ಬೆಳಿಗ್ಗೆ ಎದ್ದು ಸುಮ್ಸುಮ್ಮನೆ ಹೋರಾಟ ಮಾಡುತ್ತಾರೆ. ಅವರ ಹತ್ರ ಮೂರು ಜನ ಕೂಡ ಇರಲ್ಲ. ‌ಪತ್ರಕರ್ತರು ಬರೀತಾರೆ, ಹೈಲೈಟ್ ಮಾಡ್ತಾರೆ ಎಂದು ಅಂಥವರು ಹೋರಾಟ ಮಾಡುತ್ತಾರೆ. ಪತ್ರಿಕೆಯವರು ಬರಿಯೋದ್ ಬಂದ್ ಮಾಡಿದ್ರೆ ನಾಲ್ಕನೇ ದಿನ ಅವರು ಅಲ್ಲಿರುವುದಿಲ್ಲ ಎಂದು‌ ಅವರು ಹೇಳಿದರು.

ಮುದ್ದೇಬಿಹಾಳದಲ್ಲಿ ಪತ್ರಕರ್ತರ ಚಟುವಟಿಕೆಗಳಿಗೆ ಪತ್ರಿಕಾ ಭವನ ಬೇಡಿಕೆಗೆ ಸ್ಪಂದಿಸಿದ ಶಾಸಕರು ಪತ್ರಿಕಾ ಭವನಕ್ಕೆ ರೂ. 25 ಲಕ್ಷ ಅನುದಾನ ಕೊಡುತ್ತೇನೆ. ಇದಕ್ಕಾಗಿ ಜಾಗ ಗುರುತಿಸಿ ಅರ್ಜಿ ಕೊಡಬೇಕು. ಪುರಸಭೆಯಲ್ಲಿ ಠರಾವು ಪಾಸ್ ಮಾಡಿಸಿ ಕೊಡಬೇಕು. ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿ ಇದೇ ತಿಂಗಳಲ್ಲಿಯೇ ಮಂಜೂರು ಮಾಡಿಸಿಕೊಟ್ಟು ಗುದ್ದಲಿ ಪೂಜೆ ಮಾಡುತ್ತೇನೆ ಎಂದು ಶಾಸಕ ಎ.‌ ಎಸ್.‌ ಪಾಟೀಲ‌ ನಡಹಳ್ಳಿ ಈ ಸಂದರ್ಭದಲ್ಲಿ ವಾಗ್ಧಾನ ಮಾಡಿದರು.

ಜೆಡಿಎಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಮಂಗಳಾದೇವಿ ಬಿರಾದಾರ ಮಾತನಾಡಿ, ಪತ್ರಿಕೆಗಳು ಸಮಾಜಮುಖಿ ಚಿಂತನೆಗಳಿಗೆ ಜನಪರ ಧ್ವನಿಯಾಗಿ ಕಾರ್ಯ ನಿರ್ವಹಿಸಬೇಕು. ವಾಸ್ತವಕ್ಕೆ ಹತ್ತಿರವಾದ ಸುದ್ದಿಗಳ ಮೂಲಕ ಜಾಗೃತಿ ಮೂಡಿಸಬೇಕು. ಯಾರದೇ ಅಡಿಯಾಳಾಗದೇ ಜನಪರ, ಪಕ್ಷಾತೀತ ನಿಲುವು ಹೊಂದಿರಬೇಕು ಎಂದು ಹೇಳಿದರು.

ನಯನ ಭಾರ್ಗವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯಪುರದ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ, ಪತ್ರಕರ್ತರು ಪರೀಕ್ಷೆ ಬರೆದ ಮೇಲೆ ಮಾಕ್ರ್ಸ್ ಕೊಡುವಂಥವರು. ನಾನು ಪಡೆದ ಎಲ್ಲ ಪ್ರಶಸ್ತಿಗಳಿಗಿಂತ ನಯನ ಭಾರ್ಗವ ಪ್ರಶಸ್ತಿ ಹೆಚ್ಚು ಸಂತೋಷ ತಂದುಕೊಟ್ಟಿದೆ. ಈ ಸನ್ಮಾನ ಅವಿಸ್ಮರಣೀಯವಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಸಿಕ್ಕ ಮೇಲೆ 200 ಗ್ರಾಮಗಳಿಗೆ ಹೋಗಿ ತಪಾಸಣೆ ನಡೆಸಿ ಉಚಿತ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿದ್ದೇನೆ. ಸಮಾಜಮುಖಿ ಬದುಕಿಗೆ ಪ್ರಶಸ್ತಿಗಳು ಸಂತೋಷ ತಂದು ಕೊಡುತ್ತವೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ. ಚನ್ನವೀರ ದೇವರು ಆಶೀರ್ವಚನ ನೀಡಿ, ಪತ್ರಿಕೆಗಳು, ಪತ್ರಕರ್ತರು ಮೌಲ್ಯಗಳನ್ನು ಎತ್ತಿ ಹಿಡಿದು ವಾಸ್ತವಕ್ಕೆ ಕನ್ನಡಿ ಹಿಡಿಯುವ ರೀತಿಯಲ್ಲಿ ಕೆಲಸ ಮಾಡಬೇಕು. ಕುಂಟೋಜಿ ಮಠಕ್ಕೂ, ಪತ್ರಕರ್ತರಿಗೂ ಅವಿನಾಭಾವ ಸಂಬಂಧವಿದೆ. ಕುಮಾರೇಶ್ವರ ಜೀವನ ವಿಕಾಸ ಫೌಂಡೇಶನ್ ಸಹಯೋಗ ಪಡೆದುಕೊಂಡು ಅರ್ಹರಿಗೆ ಪ್ರಶಸ್ತಿ ನೀಡಿದ್ದು ಶ್ಲಾಘನೀಯ ಎಂದು ಹೇಳಿದರು.

ಡಾ. ಪ್ರಭುಗೌಡ ಪಾಟೀಲ ಅವರಿಗೆ ನಯನ ಭಾರ್ಗವ, ಸಿಂದಗಿಯ ಪತ್ರಕರ್ತ ರವಿಚಂದ್ರ ಮಲ್ಲೇದ ಅವರಿಗೆ ಆದರ್ಶ ಪತ್ರಕರ್ತ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾನಿಪ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ ಪತ್ರಿಕೋದ್ಯಮ ಅಂದು ಇಂದು ಮುಂದೆ ವಿಷಯ ಕುರಿತು ಉಪನ್ಯಾಸ ನೀಡಿದರು. ಹಿರಿಯ ಪತ್ರಕರ್ತ ರಾಜು ಕೊಂಡಗೂಳಿ ಐಡಿ ಕಾರ್ಡ ವಿತರಿಸಿದರು. ಕಾನಿಪ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ, ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಪದಗ್ರಹಣ ನಡೆಸಿಕೊಟ್ಟರು. ಮುದ್ದೇಬಿಹಾಳ, ನಾಲತವಾಡ, ತಂಗಡಗಿ, ಢವಳಗಿ ಭಾಗದ ಪತ್ರಿಕೆ ಹಂಚುವ ಹುಡುಗರಿಗೆ ಜರ್ಕಿನ್ ನೀಡಿ ಸನ್ಮಾನಿಸಲಾಯಿತು. ‌ ಕಾನಿಪ ಜಿಲ್ಲಾ ಸಂಘದ ಪದಾಧಿಕಾರಿಗಳಿಗೆ, ತಾಳಿಕೋಟೆ, ಬಸವನ ಬಾಗೇವಾಡಿ ಘಟಕದ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ‌ ಕಾನಿಪ ತಾಲೂಕು ಘಟಕದ ಅಧ್ಯಕ್ಷ ಮುತ್ತು ವಡವಡಗಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ತಹಶೀಲ್ದಾರ್ ಬಿ. ಎಸ್. ಕಡಖಭಾವಿ, ಬಿಇಓ ಎಸ್. ಜೆ. ನಾಯಕ, ಗಣ್ಯರಾದ ಪ್ರಭುಗೌಡ ದೇಸಾಯಿ, ಮೌಲಾನಾ ಕಾರಿಇಸಾಕ್ ಮಾಗಿ, ಎಸ್. ಬಿ. ಕತ್ತಿ, ಸೋಮನಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ ಢವಳಗಿ, ಸಿ. ಬಿ. ಅಸ್ಕಿ, ಎಂ.‌ ಎನ್.‌ ಮದರಿ, ಎಂ. ಎಚ್. ಹಾಲಣ್ಣವರ್, ಎಸ್. ಎಸ್.‌‌ ಮಾಲಗತ್ತಿ, ಬಸವರಾಜ ನಾಲತವಾಡ, ಸತೀಶಕುಮಾರ ಓಸ್ವಾಲ್, ಬಿ. ಎಸ್.‌ ಮೇಟಿ, ಡಿ.‌ ಬಿ.‌ ಮುದೂರ, ಆರ್. ಐ.‌ ಹಿರೇಮಠ, ಎಸ್.ಬಿ.ಬಂಗಾರಿ, ಡಾ.‌ಪರಶುರಾಮ ಪವಾರ, ಪ್ರಭು ಪಾಟೀಲ, ಕುಂಟೋಜಿಯ ಯಶಸ್ವಿನಿ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು, ನಾನಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಂಗಮೇಶ ಶಿವಣಗಿ ನೇತೃತ್ವದ ತಂಡದವರು ಪ್ರಾರ್ಥಿಸಿ ನಾಡಗೀತೆ ಹಾಡಿದರು. ಕೆಸಾಪೂರದ ಸಿದ್ದಾರ್ಥ ಪಬ್ಲಿಕ್ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ತಳವಾರ ಭರತನಾಟ್ಯ ಪ್ರದರ್ಶಿಸಿದಳು. ಮುತ್ತು ವಡವಡಗಿ ಸ್ವಾಗತಿಸಿದರು.‌ ಪರಶುರಾಮ ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಹೂಗಾರ ಮತ್ತು ಶ್ರೀಶೈಲ ಹೂಗಾರ ನಿರೂಪಿಸಿದರು. ರವಿಂದ್ರ ನಂದೆಪ್ಪನವರ್ ವಂದಿಸಿದರು.

Leave a Reply

ಹೊಸ ಪೋಸ್ಟ್‌