Press Card Warn: ಪತ್ರಕರ್ತರ ಸಂಘದ ಐಡಿ ಕಾರ್ಡ್ ದುರ್ಬಳಕೆ ಸಹಿಸಲ್ಲ- ಸಂಗಮೇಶ ಚೂರಿ ಎಚ್ಚರಿಕೆ

ವಿಜಯಪುರ: ಕಾರ್ಯನಿರತ ಪತ್ರಕರ್ತರ ಕಾನಿಪ ಗುರುತಿನ‌ಚೀಟಿ(ID Card) ದುರ್ಬಳಕೆ ಸಹಿಸುವುದಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಎಚ್ಚರಿಕೆ ನೀಡಿದ್ದಾರೆ..

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಿ ಅವರು‌‌ ಮಾತನಾಡಿದರು.

ಗುರುತಿನ ಕಾರ್ಡ್ ದುರುಪಯೋಗ ಪಡಿಸಿಕೊಂಡು ಸಂಘಕ್ಕೆ ಕೆಟ್ಟ ಹೆಸರು ತರುವಂಥ ಕೆಲಸವನ್ನು ಯಾವ ಸದಸ್ಯರೂ ಮಾಡಬಾರದು. ಗುರುತಿನ ಕಾರ್ಡ್ ದುರ್ಬಳಕೆ ಮಾಡಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ. ಸಂಘವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಚೆಕ್ ಪೊಸ್ಟ್ ಹಾಗೂ ಸರಕಾರಿ ಕಚೇರಿಗಳಲ್ಲಿ ಸಂಘದ ಗುರುತಿನ ಕಾರ್ಡು ತೋರಿಸಿ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಯಾರೋ ಕೆಲವರು ಈ ರೀತಿ ಮಾಡುವುದರಿಂದ ಇಡೀ ಪತ್ರಕರ್ತರ ಬಗ್ಗೆ ಜನರಲ್ಲಿರುವ ಗೌರವ ಭಾವನೆ ಕಡಿಮೆಯಾಗುತ್ತದೆ. ಅಲ್ಲದೇ, ಸಂಘಕ್ಕೂ ಕೆಟ್ಟ ಹೆಸರು ಬರುತ್ತದೆ. ಸಂಘದ ಯಾವ ಸದಸ್ಯರೂ ಸಂಘದ ಗುರುತಿನ ಕಾರ್ಡಗ ದುರುಪಯೋಗ ಪಡಿಸಿಕೊಳ್ಳಬಾರದು.‌‌ ಸಂಘದ ಘನತೆಗೆ ಧಕ್ಕೆ ಉಂಟು ಮಾಡುವ ಯಾವ ಕೆಟ್ಟ ಕೆಲಸಕ್ಕೆ ಕೈಹಾಕಬಾರದು ಎಂದು ಅವರು ಹೇಳಿದರು.

ಡಿವಿಜಿ ಅವರು ಹುಟ್ಟುಹಾಕಿದ ಕಾನಿಪ ಸಂಘಕ್ಕೆ ಒಳ್ಳೆಯ ಹಿನ್ನೆಲೆ ಹಾಗೂ ಅದರದೇಯಾದ ಒಂದು ಇತಿಹಾಸವಿದೆ. ಈ ಸಂಘದ ಸದಸ್ಯರಾಗುವುದೇ ಒಂದು ಗೌರವ. ಸಂಘದ ಗೌರವ ಕಾಪಾಡುವುದು ಪ್ರತಿಯೊಬ್ಬ ಸದಸ್ಯರ ಕರ್ತವ್ಯವಾಗಿದೆ. ತ್ರಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ದೃಶ್ಯ ಮಾಧ್ಯಮ, ಸೋಶಿಯಲ್ ಮೀಡಿಯಾಗಳು ಎಷ್ಟೇ ವೇಗವಾಗಿ ಬೆಳೆದರೂ ಮುದ್ರಣ ಮಾಧ್ಯಮ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಪತ್ರಿಕೆಗಳಿಗೆ ಮುಂದೆಯೂ ಅದರ ಮಹತ್ವ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳ ಅಬ್ಬರದಿಂದಾಗಿ ಪ್ರಸಾರ ಹಾಗೂ ಓದುಗರ ಸಂಖ್ಯೆ ಮೊದಲಿಗಿಂತಲೂ ಈಗ ಕಡಿಮೆಯಾಗಿದ್ದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಏನೂ ಧಕ್ಕೆಯಾಗುವುದಿಲ್ಲ ಎಂದು ಸಂಗಮೇಶ ಚೂರ ಹೇಳಿದರು.

Leave a Reply

ಹೊಸ ಪೋಸ್ಟ್‌