Journalists Conference: ವಿಜಯಪುರದಲ್ಲಿ ಪತ್ರಕರ್ತರ 37ನೇ ರಾಜ್ಯ ಮಟ್ಟದ ಸಮ್ಮೇಳನ ಯಶಸ್ಸಿಗೆ ಶಿವಾನಂದ ತಗಡೂರ ಮನವಿ

ವಿಜಯಪುರ: ನಗರದಲ್ಲಿ ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ 37ನೇ ಪತ್ರಕರ್ತರ ರಾಜ್ಯ ಸಮ್ಮೇಳನ ಯಶಸ್ಸಿಗೆ ಶ್ರಮಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮನವಿ ಮಾಡಿದ್ದಾರೆ. 

ವಿಜಯಪುರ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನವೆಂಬರ್ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ.  ವಿಜಯಪುರ ಜಿಲ್ಲೆಯ ಹಲವಾರು ಪತ್ರಕರ್ತರು ಹಾಗೂ ಸಂಘದ ಜಿಲ್ಲಾ ಪದಾಧಿಕಾರಿಗಳು ಪತ್ರಕರ್ತರ ರಾಜ್ಯ ಸಮ್ಮೇಳನ ವಿಜಯಪುರ ಜಿಲ್ಲೆಗೆ ವಹಿಸಿ ಕೊಡುವಂತೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡುತ್ತ ಬಂದಿದ್ದರು.  ಅವರ ಮನವಿಗೆ ಸ್ಪಂದಿಸಿ 37ನೇ ರಾಜ್ಯ ಸಮ್ಮೇಳನ ನಡೆಸಲು ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.  ಜಿಲ್ಲೆ ಹಾಗೂ ಎಲ್ಲ ತಾಲೂಕು ಘಟಕಗಳ ಹಾಲಿ-ಮಾಜಿ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಸಮ್ಮೇಳನದ ಸಂಪೂರ್ಣ ಯಶಸ್ವಿಗೆ ಸಹಕಾರ ನೀಡಬೇಕು.  ಇಂದಿನಿಂದಲೇ ಸಮ್ಮೇಳನದ ಸಿದ್ಧತೆಗೆ ಕಾರ್ಯೋನ್ಮುಖರಾಗಬೇಕು ಎಂದು ಅವರು ಮನವಿ ಮಾಡಿದರು.

ತಮ್ಮ ಹಿಂದಿನ ನನ್ನ ಅವಧಿಯ ಮೂರು ವರ್ಷಗಳಲ್ಲಿ ಮೈಸೂರಿನ ಸುತ್ತೂರು, ಮಂಗಳೂರು ಹಾಗೂ ಕಲಬುರ್ಗಿಯಲ್ಲಿ ಮೂರು ರಾಜ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ.  ಇದೊಂದು ಐತಿಹಾಸಿಕ ದಾಖಲೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.  ಈ ಮೂರು ಸಮ್ಮೇಳನಗಳ ಸ್ವರೂಪ ಒಂದಕ್ಕಿಂತ ಒಂದು ಭಿನ್ನ-ಭಿನ್ನವಾಗಿತ್ತು. ಕೋವಿಡ್ ಭಯ ಹಾಗೂ ಅಪಪ್ರಚಾರಗಳ ನಡುವೆಯೂ ನಿರೀಕ್ಷೆ ಮೀರಿ ರಾಜ್ಯದ ಉದ್ದಗಲಗಳಿಂದ ಪತ್ರಕರ್ತರು  ಆಗಮಿಸಿ ಸಮ್ಮೇಳನಕ್ಕೆ ಸಾಕ್ಷಿಯಾಗಿದ್ದಾರೆ. ಅದೇ ರೀತಿ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ವಿಜಯಪುರದಲ್ಲಿ ಒಂದು ಮಾದರಿ ಸಮ್ಮೇಳನವಾಗಿ ಇಡೀ ರಾಜ್ಯಕ್ಕೆ ಒಂದು ಉತ್ತಮ ಸಂದೇಶ ರವಾನೆಯಾಗಬೇಕು ಎಂದು ಶಿವಾನಂದ ತಗಡೂರು ಹೇಳಿದರು.

ಈ ಭಾಗದ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ರಚಿಸಿ ಇದರಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ನಾಯಕರು ಹಾಗೂ ಜನಪ್ರತಿನಿಧಿಗಳು ಒಳಗೊಳ್ಳುವಂತೆ ಮಾಡಬೇಕು.  ಹಾಗೇಯೇ ಸಮ್ಮೇಳನದ ಯಶಸ್ವಿಗಾಗಿ ಪ್ರಚಾರ ಸಮಿತಿ, ಹಣಕಾಸು ಸಮಿತಿ, ಸ್ಮರಣ ಸಂಚಿಕೆ ಸಮಿತಿ, ವಸತಿ ಸಮಿತಿ, ಊಟದ ಸಮಿತಿ ಸೇರಿದಂತೆ ನಾನಾ ಸಮಿತಿಗಳನ್ನು ರಚಿಸಬೇಕಾಗುತ್ತದೆ.  ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರವನ್ನು ಪಡಯಬೇಕಾಗುತ್ತದೆ.  ನಮ್ಮಲ್ಲಿರುವ ಸಣ್ಣಪುಟ್ಟ ಸಮಸ್ಯೆ, ಭಿನ್ನಾಭಿಪ್ರಾಯಗಳ:್ನು ಬದಿಗೊತ್ತಿ ಇದು ನಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಎಲ್ಲರೂ ಸೇರಿ ದಿನದ 24 ಗಂಟೆ ಹುಮ್ಮಸ್ಸಿನಿಂದ ಹಾಗೂ ಒಮ್ಮನಸ್ಸಿನಿಂದ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮ್ಮೇಳನ ಸಂಪೂರ್ಣ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.

ಪ್ರತಿ ಸಮ್ಮೇಳನದಲ್ಲಿ ಮುಖ್ಯವಾಗಿ ವಸತಿ ವ್ಯವಸ್ಥೆಯ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬರುತ್ತವೆ.  ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದೂರದ ಊರುಗಳಿಂದ ಬರುವವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.  ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು.  ಅವರಿಗೆ ಒಳ್ಳೆಯ ರೀತಿಯಿಂದ ಆದರಾತಿಥ್ಯ ನೀಡುವ ಮೂಲಕ ಜಿಲ್ಲೆಯ ಜನತೆ ಹಾಗೂ ಪತ್ರಕರ್ತರು ತಮ್ಮ ಹೃದಯ ವೈಶಾಲ್ಯತೆ ಮೆರೆಯಬೇಕೆಂದು ಎಂದು ಅವರು ಶಿವಾನಂದ ತಗಡೂರು ಹೇಳಿದರು.

ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ವಿಜಯಪುರದಲ್ಲಿ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ಯಶಸ್ವಿಯಾಗಿ ನಡೆಸಲು ನಮ್ಮ ಜೊತೆ ಎಲ್ಲರೂ ಕೈಜೋಡಿಸಬೇಕು.  ಈ ಸಮ್ಮೇಳನವನ್ನು ಅದ್ಧೂರಿ ಹಾಗೂ ಸಂಭ್ರಮದಿಂದ ಯಶಸ್ವಿಯಾಗಿ ನಡೆಸುವ ಮೂಲಕ ಗೋಳಗುಮ್ಮಟದ ಖ್ಯಾತಿಯಂತೆಯೇ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಬಾನೆತ್ತರಕ್ಕೆ ಹೆಚ್ಚಿಸೋಣ ಎಂದು ಹೇಳಿದರು.

ಈ ಸಭೆಯಲ್ಲಿ ಭಾಗವಹಿಸಿದ್ದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ನಾನಾ ಸಮಿತಿಗಳ ರಚನೆ ಹಾಗೂ ಸಮ್ಮೇಳನದ ಸ್ಥಳ ಆಯ್ಕೆ ಕುರಿತಂತೆ ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನರೆಡ್ಡಿ ಗೊಂದಿ, ಡಿ.ಬಿ.ವಡವಡಗಿ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ನಾಮನಿರ್ದೇಶಿತ ಸದಸ್ಯ ಕೆ.ಕೆ.ಕುಲಕರ್ಣಿ, ವಿಶೇಷ ಆಹ್ವಾನಿತರಾದ ಶ್ರೀಮತಿ ಕೌಶಲ್ಯ ಡಿ.ಪನಾಳಕರ, ಉಪಾಧ್ಯಕ್ಷರಾದ ಇಂದುಶೇಖರ ಮಣೂರ, ಫಿರೋಜ್ ರೋಜಿನದಾರ, ಪ್ರಕಾಶ ಬೆಣ್ಣೂರ, ಕಾರ್ಯದರ್ಶಿಗಳಾದ ಶಕೀಲ ಬಾಗಮಾರೆ, ಮಲ್ಲು ಕೆಂಭಾವಿ, ಖಜಾಂಚಿ ರಾಹುಲ ಆಪ್ಟೆ, ಸಹಖಜಾಂಚಿ, ದೀಪಕ ಶಿಂತ್ರೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಶಿ ಮೆಂಡೇಗಾರ, ಪರಶುರಾಮ ಗಣಿ, ಬಸವರಾಜ ಉಳ್ಳಾಗಡ್ಡಿ, ಮಹ್ಮದಸಮೀರ ಇನಾಮದಾರ, ಆಸೀಫ್ ಬಾಗವಾನ, ವಿನೋದ ಸಾರವಾಡ, ಸದ್ದಾಂಹುಸೇನ ಜಮಾದಾರ, ಗುರುರಾಜ ಲೋಕುರಿ, ನಾಮನಿರ್ದೇಶಿತ ಸದಸ್ಯರಾದ ಗುರು ಗದ್ದನಕೇರಿ, ನವೀದಅಂಜುಮ ಮಮದಾಪೂರ, ವಿಜಯ ಸಾರವಾಡ, ಸಲಹಾ ಸಮಿತಿ ಸದಸ್ಯರಾದ ಜಿ.ಎಸ್.ಕಮತರ, ಸೀತಾರಾಮ ಕುಲಕರ್ಣಿ, ದೇವೇಂದ್ರ ಹೆಳವರ, ಅಶೋಕ ಯಡಳ್ಳಿ, ರಾಜು ಕೊಂಡಗೂಳಿ, ಮಹ್ಮದ ಇರ್ಫಾನ್ ಶೇಖ್, ಸಂಘದ ಸಿಂದಗಿ ತಾಲೂಕಾ ಅಧ್ಯಕ್ಷ ಆನಂದ ಶಾಬಾದಿ, ಇಂಡಿ ತಾಲೂಕಾ ಅಧ್ಯಕ್ಷ ಅಬುಶಾಮ ಹವಾಲ್ದಾರ, ಚಡಚಣ ತಾಲೂಕಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಡೋಣಜಮಠ, ಬಸವನ ಬಾಗೇವಾಡಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಬಾಬು ವಾಡೇದ, ದೇವರ ಹಿಪ್ಪರಗಿ ತಾಲೂಕಾ ಅಧ್ಯಕ್ಷ ಸಂಗಮೇಶ ಉತ್ನಾಳ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕುಂಬಾರ, ಸದಸ್ಯರಾದ ಟಿ.ಮಲಗೊಂಡ, ರಶ್ಮಿ ಪಾಟೀಲ ಸೇರಿದಂತೆ ಇತರರು ಈ ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌