ವಿಜಯಪುರ: ಬಹುಜನ ದಲಿತ ಸಂಘರ್ಷ ಸಮಿತಿ ವತಿಯಿಂದ ಬುದ್ದ, ಬಸವ, ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಡಾ. ಸಂಜೀವಕುಮಾರ ಪೋತೆ ಅವರು ರಚಿಸಿದ ಬುದ್ದನ ತಾತ್ವಿಕ ನಿಲುವುಗಳು ಕೃತಿ ಬಿಡುಗಡೆ ಸಮಾರಂಭ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆಯಿತು.
ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮತಾನಾಡಿದ ಅವರು, ಬಹುಜನ ದಲಿತ ಸಂಘರ್ಷ ವತಿಯಿಂದ ನಡೆಸಲಾಗುತ್ತಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಸಂಜೀವಕುಮಾರ ಪೋತೆ ಅವರು ತಾವು ರಚಿಸಿದ ಬುದ್ದನ ತಾತ್ವಿಕ ನಿಲುವುಗಳು ಬಗ್ಗೆ ವಿಶೇಷವಾದ ಉಪನ್ಯಾಸ ನೀಡಿದರು.
ಸಂಘಟನೆಯ ಉತ್ತರ ಕರ್ನಾಟಕದ ಅಧ್ಯಕ್ಷ ರಾಜಶೇಖರ ಕುದರಿ ಮಾತನಾಡಿ, ಬಹುಜನ ದಲಿತ ಸಂಘರ್ಷ ಸಮಿತಿಯು ದಲಿತರ, ಹಿಂದುಳಿದವರ, ಮಹಿಳೆಯರ, ಸಂವಿಧಾನಿಕ ಹಕ್ಕು ಮತ್ತು ಸೌಲತ್ತುಗಳನ್ನು ಅನುಷ್ಠಾನಕ್ಕಾಗಿ ದಶಕಗಳಿಂದ ಪ್ರಾಮಾಣಿಕವಾಗಿ ಹೋರಾಟವನ್ನು ರೂಪಿಸಿ ಹೋರಾಟ ನಡೆಸುತ್ತ ಬಂದಿದೆ. ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ, ದಲಿತರ ಮೇಲಿನ ದೌರ್ಜನ್ಯ ಖಂಡನೆ, ಮಹಿಳೆಯರ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯಪರತೆಯ ಮೇಲೆ ಸಂಘಟನೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಮಾತನಾಡಿ, ಇಂದಿನ ಮಕ್ಕಳು ಭವ್ಯ ಭಾರತದ ನಿಮಾರ್ತೃಗಳು. ಇಂಥ ಪುರಸ್ಕಾರ ಅವರಿಗೆ ಶ್ರೇಷ್ಠತೆಯನ್ನು ತಂದು ಕೊಡುತ್ತದೆ ಪ್ರತಿಭಾ ಪುರಸ್ಕಾರ ನೀಡುವುದರಿಂದ ಮಕ್ಕಳಲ್ಲಿ ಓದಿನ ಕಡೆಗೆ ಹೆಚ್ಚಿನ ಒಲವು ದೊರೆತಂತಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ, ಸಮಾನತೆ, ಸಾಮರಸ್ಯ ಮತ್ತು ಸಹೋದರತೆಯ ಸಹಭಾಗಿತ್ವ ಬೆಳೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಎಂ. ಎನ್. ರಮೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ನ್ಯಾಯವಾದಿ ನಾಗರಾಜ ಲಂಬು, ಡಿ ಎಸ್ ಎಸ್(ಪರಿವರ್ತನೆ) ರಾಜ್ಯಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಮುಖಂಡರಾದ ರಾಜಕುಮಾರ ಶಿಂದೆ, ಬಸವರಾಜ ಕೌಲಗಿ, ಸುಧೀರ ಬೋಸಲೆ, ಸಂಗಮೇಶ ಜಾಧವ, ನ್ಯಾಯವಾದಿ ಶಿವರಾಜ ಯಂಭತ್ನಾಳ, ಶ್ಯಾಮರಾವ ಶಿಂಗೆ, ಯಮನೂರಿ ಚಲವಾದಿ, ಯಮನಪ್ಪ ಗುಣಕಿ, ತುಕಾರಾಮ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.