ವಿಜಯಪುರ: ನಗರದ ಇಬ್ರಾಹಿಂಪೂರ ರೇಲ್ವೆ ಮೇಲ್ಸೇತುವೆ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣವಾಗಲಿದ್ದು, ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಜೆಪಿ ನಗರ ಮುಂಡಲ ಅಧ್ಯಕ್ಷ ಮಳುಗೌಡ ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ತಾಂತ್ರಿಕ ಕಾರಣಗಳಿಂದಾಗಿ ಈ ಕಾಮಗಾರಿ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಬಾರಿ ಸಂಸದ ರಮೇಶ ಜಿಗಜಿಣಗಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕಾಲೂ ಮಾಡಿಕೊಡುವಂತೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದ್ದು, ಒಂದೂವರೆ ತಿಂಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಜಕೀಯಕ್ಕಾಗಿ ಕೆಲವರ ಪ್ರಯತ್ನ ಆರೋಪ
ಈ ಕಾಮಗಾರಿ ಸಂಸದ ರಮೇಶ ಜಿಗಜಿಣಗಿ ಅವರ ಸತತ ಪ್ರಯತ್ನದಿಂದಾಗಿ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಆದರೆ, ಕೆಲವರು ರಾಜಕೀಯ ಉದ್ದೇಶಕ್ಕಾಗಿ ಇದರ ಶ್ರೇಯಸ್ಸು ಪಡೆಯಲು ಯತ್ನಿಸುತ್ತಿರುವುದು ವಿಷಾಧನೀಯವಾಗಿದೆ. ಸಂಸದ ರಮೇಶ ಜಿಗಜಿಣಗಿ ಸ್ವಂತ ಪ್ರಯತ್ನದಿಂದ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಐದು ರೇಲ್ವೆ ಮೇಲ್ಸೇತುವೆಗಳು, ರೈಲು ಹಳಿಗಳ ದ್ವಿಪಥಗಳ ನಿರ್ಮಾಣ ಸೇರಿದಂತೆ ಕೇಂದ್ರದಿಂದ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದು ಮಳುಗೌಡ ಬಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.