ವಿಜಯಪುರ: ಮುಂಬರುವ ನಾಲ್ಕೈದು ದಿನಗಳಲ್ಲಿ ರಾಜ್ಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಕುರಿತು ಮಾಹಿತಿ ನೀಡಿರುವ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ಧಾನಮ್ಮನವರ, ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕರ್ನಾಟಕ ಪ್ರವೇಶಿಸಿರುವ ಮುಂಗಾರಿನಿಂದಾಗಿ ರಾಜ್ಯಾದ್ಯಂತ ಮಳೆಯ ಮುನ್ಸೂಚನೆ ನೀಡಲಾಗಿದೆ. ಅಲ್ಲದೇ, ಉತ್ತರ ಉಳನಾಡಿನ ಬಹುತೇಕ ಕಡೆ ನಿರಂತರವಾಗಿ ಸಾಧಾರಣದಿಂದ ಭಾರಿ ಮಳೆ ನಿರೀಕ್ಷೆಯಿದೆ ಎಂದು ಮುನ್ಸೂಚನೆ ನೀಡಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.
ಬಸವ ನಾಡಿನಲ್ಲಿ ಆರಂಭವಾಗಿದೆ ಮಳೆ
ಸೋಮವಾರ ರಾತ್ರಿಯಿಂದಲೇ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ. ಹಲವಾರು ಕಡೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗಿದೆ. ವಿಜಯಪುರ ನಗರದಲ್ಲಿಯೂ ಬೆಳಿಗ್ಗೆಯಿಂದ ಆಗಾಗ ಉತ್ತಮ ಮಳೆಯಾಗುತ್ತಿದೆ.
ಕರಾವಳಿ, ಮಲೆನಾಡಿಗೆ ಎಚ್ಚರಿಕೆ
ಈ ನಡುವೆ, ಮಂಗಳೂರಿನಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಭೂಕುಸಿತವೂ ಉಂಟಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.