ವಿಜಯಪುರ: ಬಬಲೇಶ್ವರ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಡೋಣಿ ನದಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಮಾಡಿ, ಕೂಡಲೇ ಹಾನಿಗೊಳಗಾದವರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ದೊರಕುವಂತೆ ನೋಡಿಕೊಳ್ಳಿ ಎಂದು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ ಅವರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಸೂಚಿಸೆ ನೀಡಿದ್ದಾರೆ.
ಎಂ. ಬಿ. ಪಾಟೀಲ ಅವರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಡೋಣಿ ನದಿ ಪ್ರವಾಹದಿಂದ ಹಾನಿಗೊಳಗಾದ ಕೋಟ್ಯಾಳ, ಧನ್ಯಾಳ, ದಾಶ್ಯಾಳ ಹಾಗೂ ಸಾರವಾಡ ಗ್ರಾಮಗಳಿಗೆ ತೆರಳಿ, ವಸ್ತುಸ್ಥಿತಿ ಅವಲೋಕಿಸಿದರು. ಅಲ್ಲದೇ, ಜನರು ಡೋಣಿ ನದಿ ದಂಡೆಗೆ ಹೋಗದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಹದಿಂದ ಹಾನಿಗೀಡಾದ ಪ್ರದೇಶಗಳ ಸಮೀಕ್ಷೆ ಮಾಡಿ, ರೈತರಿಗೆ ಸೂಕ್ತ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದರು.
ಬಸನಗೌಡ(ರಾಹುಲ) ಪಾಟೀಲ ಭೇಟಿ
ಈ ಮಧ್ಯೆ ಬಬಲೇಶ್ವರ ಶಾಸಕರ ಕಛೇರಿ ಸಿಬ್ಬಂದಿಯೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಬಸನಗೌಡ(ರಾಹುಲ) ಎಂ. ಪಾಟೀಲ ಅವರು ಕೋಟ್ಯಾಳ, ಧನ್ಯಾಳ, ದಾಶ್ಯಾಳ ಹಾಗೂ ಸಾರವಾಡ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಬಬಲೇಶ್ವರ ತಹಸೀಲ್ದಾರ ಸಂತೋಷ ಮ್ಯಾಗೇರಿ, ತಿಕೋಟಾ ತಹಸೀಲ್ದಾರ ಮಲ್ಲಿಕಾರ್ಜುನ ಅರಕೇರಿ, ಬಬಲೇಶ್ವರ ತಾ. ಪಂ. ಕಾರ್ಯ ನಿರ್ವಾಹಣಾಧಿಕಾರಿ ಜುಬೇರ ಪಠಾಣ, ತಿಕೋಟಾ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜೇಶ ಎಸ್. ಡಿ. ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.