ವಿಜಯಪುರ: ಬಸವನಾಡು ವಿಜಯಪುರ ಜಿಲ್ಲಾಧ್ಯಂತ ಕಳೆದ ನಾಲ್ಕೈದು ದಿನಗಳಿಂದ ಆಗಾಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಹಳ್ಳಕೊಳ್ಳಗಳು ಮೈತುಂಬಿ ಹರಿಯುತ್ತಿವೆ. ಕೆಲವು ಕಡೆಗಳಲ್ಲಿ ಮನೆಗಳಿಗೆ, ನಾನಾ ಕಟ್ಟಡಗಳಿಗೆ ನೀರು ನುಗ್ಗಿದೆ.
ವಿಜಯಪುರ ಜಿಲ್ಲೆಯ ಹಲವಾರು ಕಡೆ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಹಲವು ಕಡೆಗಳಲ್ಲಿ ಬೆಳೆಯೂ ಹಾನಿಯಾಗಿದೆ. ಮುಂಗಾರು ಸರಿಯಾಗಿ ಸುರಿಯದ ಕಾರಣ ಕಂಗಾಲಾಗಿದ್ದ ರೈತರ ಮುಖದಲ್ಲಿ ಈಗ ಸುರಿಯುತ್ತಿರುವ ಧಾರಾಕಾರ ಮಳೆ ಸಂತಸದ ಉಂಟು ಮಾಡಿದೆ.
ತಿಕೋಟಾ ತಾಲೂಕಿನಲ್ಲಿ ನಿನ್ನೆ ಗುರುವಾರ ಸಂಜೆಯಿಂದ ರಾತ್ರಿ ವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು, ಬಾಂಧಾರಗಳು ಉಕ್ಕಿ ಹರಿಯುತ್ತಿವೆ. ಕಳ್ಳಕವಟಗಿ ಗ್ರಾಮದಲ್ಲಿ ಇರುವ ಸಂಗಮನಾಥ ದೇವಸ್ಥಾನಕ್ಕೆ ನೀರು ನುಗಿದ್ದು, ದೇವಾಲಯ ಜಲಾವೃತವಾಗಿದೆ. ಮೊಣಕಾಲಕ್ಕೂ ಹೆಚ್ಚಿನ ಮಟ್ಟದ ನೀರಿನಲ್ಲಿಯೇ ತೆರಳಿ ಭಕ್ತರು ಸಂಗಮನಾಥನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಸಂಗಮನಾಥನ ಗರ್ಭದ ಗುಡಿಯಲ್ಲಿ ಸೊಂಟದ ಮಟ್ಟದವರೆಗೂ ನೀರು ನಿಂತಿದೆ. ಈ ದೇವಸ್ಥಾನದ ಪಕ್ಕದಲ್ಲಿ ಹರಿಯುವ ಬಾಂದಾರ ಮತ್ತು ಹಳ್ಳದ ಜಲಧಾರೆಯಬ್ನು ನೋಡಲು ಜನ ಆಗಮಿಸಿ, ದೃಶ್ಯಗಳನ್ನು ಮೈ ತುಂಬಿಸಿಕೊಳ್ಳುತ್ತಿದ್ದಾರೆ. ಈಗ ಈ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತೇವೆ.
ಅಷ್ಟೇ ಅಲ್ಲ, ವಿಜಯಪುರ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳಲ್ಲಿ ಒಂದಾದ ಮತ್ತು ಅದರದೇ ಆದ ಪಥವನ್ನು ಬಿಟ್ಟು ಬೇಕಾಬಿಟ್ಟಿ ಹರಿಯುವ ಡೊಣಿ ನದಿ ಕೂಡ ಉಕ್ಕಿ ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಬರುವ ರಾಜ್ಯ ಹೆದ್ದಾರಿ ಸಂಖ್ಯೆ 34ರ ವರೆಗೆ ಡೋಣಿನಲ್ಲಿ ನೀರು ಹರಿದು ಬಂದಿದೆ. ಈ ನೀರಿನಲ್ಲಿಯೇ ವಾಹನಗಳ ಸಂಚರಿಸುತ್ತಿವೆ. ಕ್ಷಣಕ್ಕೂ ಹೆಚ್ಚುತ್ತಿರುವ ನೀರು ಪ್ರವಾಹ ಭೀತಿಯನ್ನು ಹೆಚ್ಚಿಸಿದೆ. ಡೋಣಿಹದಿ ನೀರು ಇದೇ ರೀತಿ ನಾಲ್ಕೈದು ಅಡಿ ಹೆಚ್ಚಾದರೆ ಸಾರವಾಡ ಗ್ರಾಮಕ್ಕೆ ನೀರು ನುಗ್ಗುವ ಆತಂಕವನ್ನು ಅಲ್ಲಿನ ತಳಿಯರು ವ್ಯಕ್ತಪಡಿಸಿದ್ದಾರೆ. ಈ ನೀರಿನ ಪ್ರವಾಹ ಹೆಚ್ಚಾದರೆ, ವಿಜಯಪುರ- ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗುವ ಸಾಧ್ಯತೆಗಳಿವೆ. ಈಗಾಗಲೇ ಈ ನದಿಯ ನೀರು ಅಪಾರ ಪ್ರಮಾಣದಲ್ಲಿ ನಿಂತಿರುವುದರಿಂದ ಹೊಲಗದ್ದೆಗಳು ಕೆರೆಗಳಂತಾಗಿ ಮಾರ್ಪಟ್ಟಿವೆ. ಈ ಹೊಲಗಳಲ್ಲಿ ಬೆಳೆಯಲಾಗಿದೆ ಅಪಾರ ಪ್ರಮಾಣದ ಬೆಳೆಗಳು ನೀರು ಪಾಲಾಗಿವೆ. ಡೋಣಿ ನದಿ ನೀರಿನಲ್ಲಿ ಉಪ್ಪಿನ ಅಂಶ ಹೊಂದಿರುವುದರಿಂದ ಬೆಳೆಗಳು ಉಳಿದರೂ ಅವುಗಳ ಫಸಲಿನ ಬಗ್ಗೆ ಅನುಮಾನ ಉಂಟಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಡೋಣಿ ನದಿ ತೀರದ ಗ್ರಾಮಸ್ಥರು ತಂಡೋಪ ತಂಡವಾಗಿ ನದಿ ತೀರಕ್ಕೆ ಆಗಮಿಸುತ್ತಿದ್ದಾರೆ. ಅಲ್ಲದೆ ಗ್ರುಪ್ ಫೋಟೋಗಳನ್ನು, ಸೆಲ್ಫಿಗಳನ್ನು ಕ್ಲಿಕ್ಕಿಸುವ ಮೂಲಕ ಬರದ ನಾಡಿನಲ್ಲಿ ಉಂಟಾಗಿರುವ ಮಲೆನಾಡಿನ ವೈಭವದ ಸಿರಿಯನ್ನು ತಮ್ಮ ಮೊಬೈಲ್ ಗಳ ಕ್ಯಾಮೆರಾಗಳಲ್ಲಿ ಸೆರೆ ಹಿಡಿದು ಸಂಭ್ರಮಿಸುತಿದ್ದಾರೆ.
ಒಟ್ಟಾರೆ ಕಳೆದ ನಾಲ್ಕು ದಿನದಿಂದ ವಿಜಯಪುರ ಜಿಲ್ಲೆಯಲ್ಲಿ ಆಗಾಗ ತುರಿಯುತ್ತಿರುವ ಮಳೆ ಬಹುತೇಕ ಕಡೆ ಸಂತಸಕ್ಕೆ ಕಾರಣವಾಗಿದ್ದರೂ, ಕೆಲವು ಮನೆಗಳಿಗೆ ಮತ್ತು ನಾನಾ ಕಟ್ಟಡಗಳಿಗೆ ಹಾಗೂ ಬೆಳೆಗಳಿಗೆ ನೀರು ನುಗ್ಗಿದ ಪರಿಣಾಮ ಸಂಕಷ್ಟವನ್ನು ತಂದೊಡ್ಡಿದೆ. ಈಗಲೂ ಕೂಡ ವಿಜಯಪುರ ಜಿಲ್ಲಾದ್ಯಂತ ಭಾರಿ ಮೋಡ ಕವಿದ ವಾತಾವರಣವಿದ್ದು ಆಗಾಗ ಮೂಡಗಳು ಮರೆಯಾಗಿ ಸೂರ್ಯನು ಕೂಡ ದರ್ಶನ ನೀಡುತ್ತಿದ್ದಾನೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಇನ್ನೂ ಮೂರ್ ನಾಲ್ಕು ದಿನ ಇದೇ ರೀತಿ ವಾತಾವರಣ ಮುಂದುವರಿಯಲಿದೆ.