ವಿಜಯಪುರ: ಭಾರತದ 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸರ್ಕಾರವು ಅಮೃತ ಗ್ರಾಮ ಪಂಚಾಯತಿ ಯೋಜನೆ ಜಾರಿ ತಂದಿದೆ.
ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಜಿ. ಪಂ. ಸಭಾಂಗಣದಲ್ಲಿ ನಾನಾ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು. ಮೊದಲನೇ ಹಂತದಲ್ಲಿ ಆಯ್ಕೆಯಾದ ಅಮೃತ ಗ್ರಾ. ಪಂ. ಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಿ, ನಾನಾ ತಾಲೂಕುಗಳ ಸಹಾಯಕ ನಿರ್ದೇಶಕರು ಮತ್ತು ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿ ಆಯ್ಕೆಯಾದ ಗ್ರಾ. ಪಂ. ಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಎಲ್ಲ ತಾಲೂಕುಗಳ ತಾಂತ್ರಿಕ ಸಂಯೋಜಕರಿಗೆ ಯೋಜನೆಯ ಅನಿಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಿದರು. ಸಭೆಯಲ್ಲಿ, ಅಮೃತ ಗ್ರಾ. ಪಂ. ಯೋಜನೆಯ ಲೋಗೋವನ್ನು ಸಹ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಿಇಓ ಅವರು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆ. 14 ರೊಳಗೆ ಮುಕ್ತಾಯಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಮೃತ ಗ್ರಾ. ಪಂ. ಯೋಜನೆಯಡಿ ಜಿಲ್ಲೆಗೆ ಸರಕಾರದಿಂದ ರೂ. 3.250 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಗಳ ಮುಕ್ತಾಯ ವರದಿ ಸಲ್ಲಿಸುವ ಗ್ರಾಮ ಪಂಚಾಯತಿಗಳಿಗೆ ಪ್ರಥಮ ಆದ್ಯತೆಯ ಮೇರೆಗೆ 12.50 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿಸಿದರು.
2022-23ನೇ ವರ್ಷದಲ್ಲಿ ಎರಡನೇ ಹಂತದ ಅಮೃತ ಗ್ರಾ. ಪಂ. ಯೋಜನೆಯಡಿ 27 ಗ್ರಾ. ಪಂ. ಗಳನ್ನು ಆಯ್ಕೆ ಮಾಡಲಾಗಿದ್ದು, ಸದರಿ ಗ್ರಾ. ಪಂ. ಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಗ್ರಾ. ಪಂ. ಅಧ್ಯಕ್ಷರಿಗೆ ಅಮೃತ ಗ್ರಾ. ಪಂ. ಯೋಜನೆಯ ಉದ್ದೇಶ, ಕೈಗೊಳ್ಳಬೇಕಾದ ಕಾಮಗಾರಿಗಳು, ಅನುದಾನದ ಲಭ್ಯತೆ ಹಾಗೂ ರಾಜ್ಯಕ್ಕೆ ಮಾದರಿ ಗ್ರಾ. ಪಂ. ಗಳನ್ನಾಗಿ ಮಾಡಲು ಶ್ರಮ ವಹಿಸಬೇಕು ಎಂದು ಜಿ. ಪಂ. ಸಿಇಓ ಸೂಚನೆ ನೀಡಿದರು.
ಎರಡನೇ ಹಂತದ ಅಮೃತ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತುರ್ತಾಗಿ ಕ್ರಿಯಾ ಯೋಜನೆ ತಯಾರಿಸಿ ಜಿ. ಪಂ. ಗೆ ಸಲ್ಲಿಸಲು ಸೂಚಿಸಿದರು. ಕ್ರಿಯಾ ಯೋಜನೆ ಅನುಮೋದನೆಗೊಂಡ ಮೇಲೆ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ರಾಹುಲ ಶಿಂಧೆ ತಿಳಿಸಿದರು.
ಮಹತ್ವದ ಯೋಜನೆ: ಭಾರತದ 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸರ್ಕಾರವು ರೂಪಿಸಿದ ಅಮೃತ ಗ್ರಾಮ ಪಂಚಾಯತಿ ಯೋಜನೆಯು ಮಹತ್ವದ್ದಾಗಿದೆ. ಈ ಯೋಜನೆಯಡಿ ಜಿಲ್ಲೆಯ ಆಯ್ದ 26 ಅಮೃತ ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪಗಳು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೆ ಕಂಪೌAಡ್, ಶೌಚಾಲಯ ಹಾಗೂ ಪೌಷ್ಠಿಕ ತೋಟಗಳನ್ನು ನಿರ್ಮಾಣ ಮಾಡುವುದು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನ ತ್ಯಾಜ್ಯ ವಿಂಗಡನೆ ಹಾಗೂ ವಿಲೆವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು. ಸೌರ ವಿದ್ಯುತ್ ಅಳವಡಿಕೆ, ಡಿಜಿಟಲ್ ಗ್ರಂಥಾಲಯಗಳೊಂದಿಗೆ ಸುಸಜ್ಜಿತವಾಗಿ ಶಾಲೆಗಳನ್ನು ಸ್ಥಾಪಿಸುವುದು ಹಾಗೂ ಅಮೃತ ಉದ್ಯಾನವನ ನಿರ್ಮಾಣ ಹಾಗೂ ಸ್ಮಶಾನ ಅಭಿವೃದ್ಧಿಗೂ ಕೂಡ ಒತ್ತು ಕೊಟ್ಟು ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ರಾಹುಲ ಶಿಂಧೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿಗಳಾದ ವಿಜಯಕುಮಾರ ಆಜೂರ, ಜಿಲ್ಲಾ ಪಂಚಾಯತಿಯ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಜಿಲ್ಲಾ ಪಂಚಾಯತಿಯ ವಿಷಯ ನಿರ್ವಾಹಕರಾದ ಅರವಿಂದ ಜಾಧವ ಅವರು ಹಾಗೂ ಇತರರು ಉಪಸ್ಥಿತರಿದ್ದರು.