ವಿಜಯಪುರ: ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕಣಾಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ನಾನಾ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ತಿಡಗುಂದಿ ಗ್ರಾಮ ಪಂಚಾಯಿತಿ, ಇಂಡಿ ತಾಲೂಕಿನ ಹೊರ್ತಿ ಮತ್ತು ಝಳಕಿ ಗ್ರಾಮ ಪಂಚಾಯಿತಿ ಹಾಗೂ ಚಡಚಣ ತಾಲೂಕಿನ ಬರಡೋಲ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ರಾಷ್ಟ್ರಧ್ವಜ ವಿತರಣೆ ಮಾಡಿದರು. ಸರಕಾರದ ನಿಯಮದಂತೆ ಪ್ರತಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜಗಳನ್ನು ಹಾರಿಸುವ ಸಂದರ್ಭದಲ್ಲಿ ಯಾವುದೇ ಅವಮಾನಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಗೌರವಯುತವಾಗಿ ಹರ ಘರ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಬರಡೋಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿದ ರಾಷ್ಟ್ರಧ್ವಜಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ರಾಹುಲ ಶಿಂಧೆ, ಜಿಲ್ಲೆಯಲ್ಲಿ 211 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳಿದ್ದು, 211 ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟಗಳ ಸ್ವ-ಸಹಾಯ ಸಂಘಗಳ ಮಹಿಳೆಯರು ನಮ್ಮ ಜಿಲ್ಲೆಗೆ 42,000 ರಾಷ್ಟ್ರಧ್ವಜಗಳನ್ನು ತಯಾರಿಸುತ್ತಿದ್ದಾರೆ. ಸ್ವ-ಸಹಾಯ ಸಂಘಗಳ ಮಹಿಳೆಯರ ಆದಾಯ ಹೆಚ್ಚಿಸುವ ಸಲುವಾಗಿ ಅವರಿಂದ ಧ್ವಜಗಳನ್ನು ತಯಾರಿ ಮಾಡಿಸಲಾಗುತ್ತಿದೆ ಎಂದು ತಿಳಿಸಿದರು.
ಪಿಡಿಓಗಳಿಗೆ ಸೂಚನೆ
ಕೇಂದ್ರ ಸರಕಾರದಿಂದ ನಮ್ಮ ಜಿಲ್ಲೆಗೆ 31000 ಧ್ವಜಗಳು ಬಂದಿವೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕಡ್ಡಾಯವಾಗಿ ಆ. 13 ರಿಂದ ಆ. 15ರವರೆಗೆ ರಾಷ್ಟ್ರಧ್ವಜಗಳನ್ನು ಹಾರಿಸಲು ಏರ್ಪಾಡು ಮಾಡಬೇಕು. ಪ್ರತಿ ಗ್ರಾ. ಪಂ. ವ್ಯಾಪ್ತಿಯಲ್ಲಿ ರಂಗೋಲಿ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಪೇಂಟಿಂಗ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಜಿಂಗಲ್ಸ್, ಮೈಕ್ ಮತ್ತು ಎಲ್ಲ ಗ್ರಾಮಗಳಲ್ಲಿ ಡಂಗೂರ ಸಾರುವ ಮುಖಾಂತರ 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಆಚರಣೆ ಕುರಿತು ಜಾಗೃತಿ ಮೂಡಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕಲ್ಲಿ ಮನವಿ
ದೇಶಾದ್ಯಂತ ಭಾರತ ಸ್ವಾತಂತ್ರ‍್ಯದ 75ರ ಸಂಭ್ರಮವನ್ನು ವೈವಿದ್ಯಮಯವಾಗಿ ಆಚರಿಸಲಾಗುತ್ತಿದೆ. ಈ ಸಂಭ್ರಮದ ಒಂದು ಭಾಗವಾಗಿ ಕೇಂದ್ರ ಸರಕಾರವು ಹರ್ ಘರ್ ತಿರಂಗಾ ಎಂಬ ಘೋಷವಾಖ್ಯದೊಂದಿಗೆ 2022ರ ಆ. 13 ರಿಂದ ಆ. 15ರ ವರೆಗೆ ಪ್ರತಿ ಮನೆಯಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ ಬಿಂಬಿಸುವ ಮೂಲಕ ರಾಷ್ಟ್ರ ಪ್ರೇಮವನ್ನು ಅಭಿವ್ಯಕ್ತಗೊಳಿಸಿ ದಾಖಲಿಸುವಂತೆ ಕರೆ ನೀಡಿ ಅಭಿಯಾನಕ್ಕೆ ಚಾಲನೆ ನೀಡಿದೆ. ಅದರಂತೆ ಜಿಲ್ಲೆಯ ಪ್ರತಿ ಗ್ರಾ. ಪಂ. ಗಳಿಗೆ ರೂ. 450 ರಂತೆ ರಾಷ್ಟ್ರಧ್ವಜಗಳನ್ನು ತಯಾರು ಮಾಡಲಾಗುತ್ತಿದೆ. ಸಾರ್ವಜನಿಕರಿಂದ ಇನ್ನೂ ಹೆಚ್ಚಿನ ರಾಷ್ಟ್ರಧ್ವಜಗಳ ಬೇಡಿಕೆ ಇದ್ದಲ್ಲಿ ಸಾರ್ವಜನಿಕರು ಸ್ವ-ಇಚ್ಛೆಯಿಂದ ಖರೀದಿ ಮಾಡಿ ತಮ್ಮ ತಮ್ಮ ಮನೆಗಳ ಮುಂದೆ ಧ್ವಜಾರೋಹಣ ನೆರವೇರಿಸಬೇಕು ಎಂದು ರಾಹುಲ ಶಿಂಧೆ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಅಭಿಯಾನದಲ್ಲಿ ಭಾಗವಹಿಸಲು ಮನವಿ
ಅಸಂಖ್ಯಾತ ಹೋರಾಟ, ತ್ಯಾಗ, ಬಲಿದಾನಗಳಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ‍್ಯಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ಅದಕ್ಕೆ ಕಾರಣರಾದ ಎಲ್ಲರನ್ನು ಸದಾ ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವವಾಗಿದೆ. ಇಂದಿನ ನಮ್ಮ ಸಂಭ್ರಮಕ್ಕೆ ತಳಪಾಯವಾಗಿ ತಮ್ಮ ಇಡೀ ಜೀವನ ತ್ಯಾಗ ಮಾಡಿದ ಎಲ್ಲರನ್ನು ಸದಾ ಸ್ಮರಿಸುತ್ತ, ಭವ್ಯ ಭಾರತವನ್ನು ಕಟ್ಟುವಲ್ಲಿ ನಮ್ಮ ಜವಾಬ್ದಾರಿಯುತ ಪಾತ್ರವನ್ನು ನಿರ್ವಹಿಸಬೇಕಾಗಿದೆ ಎಂದು ಅವರು ಹೇಳಿದರು.
ಈ ಅಭಿಯಾನದಲ್ಲಿ ರಾಜ್ಯ ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿಗಳು, ಸಾರ್ವಜನಿಕರು, ಶಾಲಾ-ಕಾಲೇಜು ಮಕ್ಕಳು, ಇತರೆ ಎಲ್ಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕ್ರಿಯಾಶೀಲರಾಗಿ ಭಾಗವಹಿಸುವಂತೆ ರಾಹುಲ ಶಿಂಧೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ. ಪಂ. ಯೋಜನಾ ನಿರ್ದೇಶಕರಾದ ಸಿ. ಬಿ. ದೇವರಮನಿ, ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಹೊಂಗಯ್ಯ.ಕೆ., ಸುನೀಲ್ ಮದ್ದಿನ, ಸಂಜಯ ಖಡಗೇಕರ, ಸಹಾಯಕ ನಿರ್ದೇಶಕ ಕಾಶೀಮಸಾಬ ಜೆ. ಮಸಳಿ, ಸ್ವ-ಸಹಾಯ ಸಂಘಗಳ ಸದಸ್ಯರು, ಗ್ರಾಮಗಳ ಗಣ್ಯ ವ್ಯಕ್ತಿಗಳು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.