Doni Flood: ಬಸವ ನಾಡಿನ ತಾಳಿಕೋಟೆ ಭಾಗದಲ್ಲಿ ಮುಂದುವರೆದ ಡೋಣಿ ನದಿ ಪ್ರವಾಹ- ದೇವಸ್ಥಾನ ಜಲಾವೃತ

ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಡೋಣಿ ನದಿ ಪ್ರವಾಹ ಮಾತ್ರ ತಾಳಿಕೋಟೆ ಮತ್ತು ದೇವರ ಹಿಪ್ಪರಗಿ ತಾಲೂಕಿನಲ್ಲಿ ಇನ್ನೂ ಮುಂದುವರೆದಿದೆ. 

ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿರುವ ಡೋಣಿ ನದಿಯ ಬಳಿ ಹಳೆಯ ಸೇತುವೆ ಇನ್ನೂ ಜಲಾವೃತವಾಗಿದ್ದು, ಸೇತುವೆಯ ಮೇಲೆ ಏಳೆಂಟು ಅಡಿ ನೀರು ಹರಿಯುತ್ತಿದೆ.  ರಾಜ್ಯ ಹೆದ್ದಾರಿ ಸಂಖ್ಯೆ 61ರಲ್ಲಿ ಬರುವ ಈ ರಸ್ತೆಯಲ್ಲಿ ಸೇತುವೆ ಮುಳುಗಡೆಯಾಗಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಬಂದ್ ಆಗಿದೆ.  ಇದರಿಂದಾಗಿ ವಿಜಯಪುರ ತಾಳಿಕೋಟೆ ಹಾಗೂ ಇತರ ಭಾಗಗಳ ಸಂಪರ್ಕ ಕಡಿತವಾಗಿದೆ.  ಸಮೀಪದಲ್ಲಿ ಪರ್ಯಾಯ ಮಾರ್ಗಗಳಿಲ್ಲದ ಕಾರಣ ಈ ಭಾಗಕ್ಕೆ ಸಂಚರಿಸಬೇಕಾದ ಜನ ಸುಮಾರು 50 ಕಿ. ಮೀ. ದೂರದವರೆಗೆ ಸುತ್ತ ಹಾಕಿ ಸಂಚರಿಸಬೇಕಾಗಿದೆ.

ತಾಳಿಕೋಟೆ ಪಟ್ಟಣದ ಬಳಿ ಇದೇ ಡೋಣಿ ನಿದೆ ಹೊಸ ಸೇತುವೆ ನಿರ್ಮಿಸಲಾಗಿತ್ತಾದರೂ ಅದು ಬಿರುಕು ಬಿಟ್ಟು ವಾಲಿರುವ ಕಾರಣ ಆ ಸೇತುವೆಯ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.  ಆದರೆ, ಬೈಕ್ ಸವಾರರು ಬಿರುಕು ಬಿಟ್ಟು ವಾಲಿರುವ ಸೇತುವೆಯ ಮೂಲಕವೇ ಓಡಾಟ ಮುಂದುವರೆಸಿದ್ದಾರೆ.  ಅಪಾಯವನ್ನೂ ಲೆಕ್ಕಿಸದೇ ಶಿಥಿಲವಾದ ಸೇತುವೆ ಮೇಲೆ ಜನರ ಓಡಾಟ ಮುಂದುವರೆದಿದೆ.

ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿ ಜಲಾವೃತವಾಗಿರುವ ಹನುಮಂತ ದೇವರ ಮೂರ್ತಿ

ದೇವಸ್ಥಾನ ಜಲಾವೃತ

ಈ ಡೋಣಿ ನದಿಯ ದಂಡೆಯಲ್ಲಿರುವ ದೇವಸ್ಥಾನ ಈಗ ಜಲಾವೃತವಾಗಿದೆ.  ಡೋಣಿ ನದಿಯ ದಂಡೆಯಲ್ಲಿ ಹನುಮಂತನ ದೇವಸ್ಥಾನ ನಿರ್ಮಿಸಲಾಗಿದ್ದು, ಡೋಣಿ ನದಿ ಪ್ರವಾಹ ವಾಯುಪುರ್ತನಿಗೂ ಜಲದಿಗ್ಬಂಧನ ಹಾಕಿದಂತಾಗಿದೆ.  ಈ ದೇವಸ್ಥಾನದ ಅರ್ಧ ಭಾಗದವರೆಗೂ ಪ್ರವಾಹದ ನೀರು ನುಗ್ಗಿದ್ದು, ಆಂಜನೇಯನ ದೇವರ ಮೂರ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ.  ಇದರಿಂದಾಗಿ ಶ್ರಾವಣ ಮಾಸದಲ್ಲಿ ಪೂಜೆ- ಪುನಸ್ಕಾರ ನೆರವೇರಿಸುವ ಅರ್ಚಕರು ಮತ್ತು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಡೋಣಿ ಪ್ರವಾಹದಿಂದಾಗಿ ಅಡಚಣೆ ಉಂಟಾಗಿದೆ.

ಈ ಮಧ್ಯೆ ಕಳೆದ ನಾಲ್ಕೈದು ದಿನಗಳಿಂದ ಬಸವ ನಾಡಿನ ಅಲ್ಲಲ್ಲಿ ಸುರಿದ ಧಾರಾಕಾರ ಮಳೆ ಈಗ ಕಡಿಮೆಯಾಗಿದೆ.  ವರುಣ ಈಗ ಕೃಪೆ ತೋರಿದ್ದು, ಆಗಾಗ ಸೂರ್ಯನೂ ದರ್ಶನ ನೀಡುತ್ತಿದ್ದಾನೆ.  ಕಳೆದ 48 ಗಂಟೆಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ.  ಆದರೆ, ತಾಳಿಕೋಟೆ ತಾಲೂಕಿನ ಮೇಲ್ಭಾಗದಲ್ಲಿ ಅಂದರೆ, ಬಸವನ ಬಾಗೇವಾಡಿ, ವಿಜಯಪುರ, ಬಬಲೇಶ್ವರ ಮತ್ತು ತಿಕೋಟಾ ಭಾಗದಲ್ಲಿ ಮೂರು ದಿನಗಳ ಹಿಂದೆ ಸುರಿದು ಭಾರಿ ಮಳೆಯಿಂದಾಗಿ ಈಗಲೂ ಕೂಡ ತಾಳಿಕೋಟೆ ಮತ್ತು ದೇವರ ಹಿಪ್ಪರಗಿ ಭಾಗದಲ್ಲಿ ಡೋಣಿ ನದಿ ಉಕ್ಕಿ ಹರಿಯಲು ಕಾರಣವಾಗಿದೆ.

ಈಗಾಗಲೇ ವರುಣಾರ್ಭಟದಿಂದಾಗಿ ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಿಕೋಟಾ, ಬಬಲೇಶ್ವರ, ವಿಜಯಪುರ, ಬಸವನ ಬಾಗೇವಾಡಿ, ತಾಳಿಕೋಟೆ ಮತ್ತು ದೇವರ ಹಿಪ್ಪರಗಿ ತಾಲೂಕಿನನಲ್ಲಿ ಅಪಾರ ಬೆಳೆಹಾನಿಯಾಗಿದೆ.  ತಿಕೋಟಾ, ಬಬಲೇಶ್ವರ ಮತ್ತು ವಿಜಯಪುರ ಈ ಮೂರೇ ತಾಲೂಕುಗಳಲ್ಲಿ ಡೋಣಿ ನದಿ ಪ್ರವಾಹದಿಂದಾಗಿ ಸುಮಾರು 1520.60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕೃಷಿ ಮತ್ತು ತೋಟಗಾರಿಗೆ ಬೆಳೆಗಳು ಜಲಾವೃತವಾಗಿವೆ.  ಪ್ರವಾಹ ಇಳಿಕೆಯಾದ ನಂತರ ಜಂಟಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಈಗಾಗಲೇ ಮಾಹಿತಿ ನೀಡಿದ್ದಾರೆ.  ಬಸವನ ಬಾಗೇವಾಡಿ, ತಾಳಿಕೋಟೆ ಮತ್ತು ದೇವರ ಹಿಪ್ಪರಗಿ ಗ್ರಾಮಗಳಲ್ಲಿ ಡೋಣಿ ನದಿ ಪ್ರವಾಹದಿಂದಾ ಉಂಟಾಗಿರುವ ಬೆಳೆಹಾನಿಯ ಕುರಿತು ಇನ್ನಷ್ಟೇ ಸಮೀಕ್ಷೆ ನಡೆಯಬೇಕಿದೆ.

Leave a Reply

ಹೊಸ ಪೋಸ್ಟ್‌