ವಿಜಯಪುರ: ರಾಜ್ಯದಲ್ಲಿ ಅತೀವೃಷ್ಛಿಯಿಂದಾಗಿ ಜನ, ಜಾನುವಾರು, ಬೆಳೆ ಮತ್ತು ಆಸ್ತಿಪಾಸ್ತಿ ಹಾನಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಾನಾ ಜಿಲ್ಲೆಗಳಿಗೆ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ಅನುದಾನ ಹಂಚಿಕೆಯಲ್ಲಿ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿರುವುದಕ್ಕೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಅತೀವೃಷ್ಠಿಯಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಯೂ ಹಾನಿಯಾಗಿದೆ. ರಾಜ್ಯ ಸರಕಾರ ಈಗ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರೂ. 200 ಕೋ. ಹಣವನ್ನು ನಾನಾ ಜಿಲ್ಲೆಗಳಿಗೆ ಅನುದಾನ ಬಿಡುಗೆ ಮಾಡಿದೆ. ಆದರೆ, ವಿಜಯಪುರ ಜಿಲ್ಲೆಯನ್ನು ಕೈ ಬಿಟ್ಟಿರುವುದು ಆಶ್ಚರ್ಯ ತಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
.
ವಿಜಯಪುರ ಜಿಲ್ಲೆಗೆ ಅಭಿವೃದ್ಧಿ ಕಾರ್ಯಗಳ ಅನುದಾನ ಬಿಡುಗಡೆ ಮಾಡುವಲ್ಲಿ ಸದಾ ತಾರತಮ್ಯ ತೋರುತ್ತಿರುವ ಬಿಜೆಪಿ ಸರಕಾರ ಈಗ ನೆರೆ ಹಾವಳಿಯಂಥ ಗಂಭೀರ ವಿಷಯದಲ್ಲಿಯೂ ತಾರತಮ್ಯ ಮಾಡುವ ಮೂಲಕ ತಾವು ಲಜ್ಜೆಗೆಟ್ಟವರು ಎಂಬುದನ್ನು ತೋರಿಸಿದೆ. ಮುಖ್ಯಮಂತ್ರಿಗಳಿಗೆ, ಬಿಜೆಪಿ ಸರಕಾರದಲ್ಲಿ ಈ ಭಾಗದ ಮಂತ್ರಿಗಳಿಗೆ ಕಿಂಚಿತ್ತು ಮಾನ, ಮರ್ಯಾದೆ ಇದ್ದರೆ, ತಕ್ಷಣ ಜಿಲ್ಲಾಧಿಕಾರಿಗಳಿಂದ ಜಿಲ್ಲೆಯಲ್ಲಿ ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿಯಾಗಿರುವ ಮಾಹಿತಿ ಪಡೆದು, ವಿಜಯಪುರ ಜಿಲ್ಲೆಗೂ ತುರ್ತು ಪರಿಹಾರ ಬಿಡುಗಡೆ ಮಾಡಿ, ತಮ್ಮ ಗೌರವ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂತ್ರಸ್ಥರೊಂದಿಗೆ ನಾನೇ ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಂ. ಬಿ. ಪಾಟೀಲ ಕಟುವಾಗಿ ಎಚ್ಚರಿಕೆ ನೀಡಿದ್ದಾರೆ.