ವಿಜಯಪುರ: ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಅತಿವೃಷ್ಟಿಯಿಂದಾದ ಹಾನಿಯನ್ನು ಖುದ್ದು ಪರಿಶೀಲಿಸಿದರು.
ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸುನೀಲಗೌಡ ಬಿ.ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಎಸ್. ಪಾಟೀಲ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ, ಆಹಾರ ಇಲಾಖೆ, ತೋಟಗಾರಿಕಾ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮರೋಪಾದಿಯಲ್ಲಿ ನಾನಾ ಗ್ರಾಮಗಳಿಗೆ ತೆರಳಿ ಮಳೆಯಿಂದಾಗಿ ಹಾನಿಗೀಡಾದ ಜಮೀನು, ಮನೆಗಳು, ಹಳ್ಳ ಮತ್ತು ರಸ್ತೆಗಳನ್ನು ಸಚಿವರು ವೀಕ್ಷಣೆ ನಡೆಸಿದರು.
ದೋನಿ ನದಿಯಿಂದ ಬಿರುಸಿನಿಂದ ನೀರು ಹರಿದು ವಿವಿಧೆಡೆ ಗ್ರಾಮ ಸಂಪರ್ಕದ ಕೆಲವು ಒಳ ರಸ್ತೆಗಳ ಸಂಚಾರ ಸ್ಥಗಿತಗೊಂಡಿರುವುದನ್ನು, ತಿಕೋಟಾ-ಬಬಲೇಶ್ವರ ಮಧ್ಯೆದ ರಸ್ತೆಯು ಹರನಾಳ ಬಳಿಯಲ್ಲಿ ಕಿತ್ತು ಹೋಗಿರುವುದನ್ನು ಸಚಿವರು ಖುದ್ದು ವೀಕ್ಷಣೆ ನಡೆಸಿದರು.
ದೋನಿ ನದಿ ತುಂಬಿ ಹರಿದು ತೊಂದರೆಗೊಳಗಾದ ಆ ನದಿ ಅಂಚಿನ ಗ್ರಾಮಗಳಾದ ದನ್ಯಾಳ, ದಾಸ್ಯಾಳ, ಕೋಟ್ಯಾಳ ಮತ್ತು ಹರನಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಚಿವರು ಭೇಟಿ ನೀಡಿದಾಗ, ಉಕ್ಕಿ ಹರಿದ ದೋನಿ ನದಿ ನೀರಿನಿಂದಾಗಿ ನಮ್ಮ ಜಮೀನುಗಳಲ್ಲಿನ ಬೆಳೆ ಹಾನಿಯಾಗಿದೆ. ವಿಪರೀತ ಸುರಿದ ಮಳೆಯಿಂದಾಗಿ ಗ್ರಾಮಗಳಲ್ಲಿನ ಕೆಲವು ಮನೆಗಳು ಕುಸಿದಿವೆ ಎಂದು ಆಯಾ ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ನದಿ ನೀರಿನಿಂದಾಗಿ ಗ್ರಾಮದ ಸುತ್ತಲಿನ ಹಳ್ಳಗಳು ತುಂಬಿ ಹರಿದವು. ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಮನೆಗಳಿಗೆ ನೀರು ನುಗ್ಗಿತ್ತು ಎಂದು ಆಯಾ ಗ್ರಾಮಸ್ಥರು ತಾವು ಎದುರಿಸಿದ ಸಂಕಟ-ತೊAದರೆಯನ್ನು ಸಚಿವರ ಎದುರು ಎಳೆಎಳೆಯಾಗಿ ಬಿಚ್ಚಿಟ್ಟರು.
ಗ್ರಾಮದ ಸ್ಥಳಾಂತರಕ್ಕೆ ಮನವಿ: 12 ವರ್ಷಗಳಿಂದಲೂ ನಾವು ಇಂತಹ ಪ್ರವಾಹದ ದುಸ್ಥಿತಿಯನ್ನು ಎದುರಿಸುತ್ತಲೇ ಬಂದಿದ್ದೇವೆ. ಜೋರು ಮಳೆಯಾಗುತ್ತಲೇ ನದಿಗೆ ನೀರು ರಭಸದಿಂದ ಬಂದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗುತ್ತದೆ. ಕೆಲವರು ಮಾಳಿಗೆ ಏರುತ್ತಾರೆ. ಇನ್ನೂ ಕೆಲವು ಊರಿನಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುತ್ತಾರೆ. ದೋನಿ ನದಿ ಅಂಚಿನ ಗ್ರಾಮಗಳಾದ ಕಣಮುಚಿನಾಳ, ಕೋಟ್ಯಾಳ, ದಾಸ್ಯಾಳ, ಧನ್ಯಾಳ ಸೇರಿದಂತೆ ವಿವಿಧ ಗ್ರಾಮಗಳನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ನಮ್ಮೂರನ್ನು ಇದುವರೆಗೆ ಸ್ಥಳಾಂತರ ಮಾಡಿಲ್ಲ. ನಮ್ಮ ಗ್ರಾಮದ ಸ್ಥಳಾಂತರಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಇದೆ ವೇಳೆ ಹರನಾಳ ಗ್ರಾಮಸ್ಥರಾದ ಮಾಳಪ್ಪ, ಮಲ್ಲಿಕಾರ್ಜುನ ಕಾಳೆ ಹಾಗೂ ಇತರರು ಸಚಿವರಲ್ಲಿ ಮನವಿ ಮಾಡಿದರು.
ಪರಿಹಾರ ಕ್ರಮಕ್ಕೆ ಸೂಚನೆ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.68ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್ ಮಾಹೆಯಲ್ಲಿ ವಾಡಿಕೆಗಿಂದ ಶೇ.383ರಷ್ಟು ಹೆಚ್ಚು ಮಳೆಯಾಗಿದೆ. ಮಳೆ ನೀರು ಮನೆಗೆ ನುಗ್ಗಿ ವಿವಿಧ ತಾಲೂಕುಗಳಲ್ಲಿ ಮನೆಗಳಿಗೆ ಹಾನಿಯಾದ ಪ್ರಕರಣಗಳಿಗೆ ಈಗಾಗಲೇ 10,000 ರೂ. ಪರಿಹಾರ ಧನ ನೀಡಲಾಗಿದೆ. ಮಾನವ ಹಾನಿ ಜಾನುವಾರು ಹಾನಿ ಪ್ರಕರಣಗಳಿಗೆ ಪರಿಹಾರ ವಿತರಿಸಲಾಗುತ್ತಿದೆ. ಆಗಸ್ಟ್ ಮಾಹೆಯಲ್ಲಿ ಭಾರಿ ಮಳೆಯಿಂದಾಗಿ 11.236 ಹೆಕ್ಟೇರನಲ್ಲಿ ಕೃಷಿ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದಕ್ಕೆ ಪರಿಹಾರ ತಂತ್ರಾAಶದಲ್ಲಿ ಬೆಳೆಹಾನಿ ದಾಖಲಿಸಿ ಪರಿಹಾರ ಧನ ವಿತರಿಸಲಾಗುತ್ತಿದೆ. ಅದೇ ರೀತಿ 265.80 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿ ಹಾನಿಯಾಗಿದೆ. ಇದಕ್ಕೆ ಪರಿಹಾರ ಕ್ರಮಕ್ಕೆ ಸೂಚಿಸಲಾಗಿದೆ. ಅಂಗನವಾಡಿ ಕಟ್ಟಡ ಹಾನಿ, ಶಾಲಾ ಕಟ್ಟಡ ಹಾನಿ, ವಿದ್ಯುತ್ ಕಂಬ ಹಾನಿ, ರಸ್ತೆಗಳ ಹಾನಿ ಮತ್ತು ಸೇತುವೆ ಹಾನಿ ಹಾಗೂ ಇನ್ನೀತರ ಹಾನಿ ಸೇರಿ ಅಂದಾಜು 6101 ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಪರಿಹಾರ ಕ್ರಮಕ್ಕೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಸಿದ್ರಾಮ ಮಾರಿಹಾಳ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಬರಗಿಮಠ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.