ವಿಜಯಪುರ: ಮುಂಬರುವ ಮಾರ್ಚ್ ಮಾಸಾಂತ್ಯದೊಳಗೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸುವಂತೆ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.
ಡೋಣಿ ನದಿಯ ಪ್ರವಾಹ ಸೇರಿದಂತೆ ಮಳೆಯಿಂದಾದ ಹಾನಿ ವೀಕ್ಷಣೆಗಾಗಿ ವಿಜಯಪುರ ಪ್ರವಾಸದಲ್ಲಿರುವ ಸಚಿವರು ಬುರಣಾಪುರ ಬಳಿ ಇರುವ ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಗಾಗಲೇ ಪ್ರಗತಿಯಲ್ಲಿರುವ, ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿಎಪ್ಆರ್ ಕಟ್ಟಡ, ರನ್ ವೇ ಸೇರಿದಂತೆ ಇತರೆ ಕಾಮಗಾರಿಯ ಪ್ರಗತಿಯನ್ನು ಅವರು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಲೋಕೋಪಯೋಗಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿ. ಬಿ. ಚಿಕ್ಕಲಗಿ, ವಿಜಯಪುರ ನಿಲ್ದಾಣವನ್ನು ಎಟಿಆರ್-72ದಿಂದ ಏರ್ ಬಸ್-320 ವಿಮಾನಗಳ ಹಾರಾಟಕ್ಕೆ ಮೇಲ್ದರ್ಜೇಗೇರಿಸುವ ಪ್ರಕ್ರಿಯೆ ನಡೆಯುತ್ತಿದೆ. 3ನೇ ಹಂತದ ವಿಮಾನ ನಿಲ್ದಾಣವನ್ನು ಮೇಲ್ದರ್ಜೇಗೇರಿಸುವ ಕಾಮಗಾರಿಗೆ ಅವಶ್ಯವಿರುವ ರೂ. 120 ಕೋ. ಹಣ ಬಿಡುಗಡೆಗೆ ಸರಕಾರದಿಂದ ಅನುಮತಿ ಸಿಕ್ಕಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಜಿಲ್ಲೆಯ ಜನರ ಬಹು ನಿರೀಕ್ಷೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು 2023ರ ಮಾರ್ಚ ಅಂತ್ಯದವರೆಗೆ ಪೂರ್ಣಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಗಡುವು ನೀಡಿದರು.
ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ವಿಜಯಪುರ ತಹಸೀಲ್ದಾರ ಸಿದ್ಧರಾಯ ಬೋಸಗಿ ಮತ್ತೀತರರು ಉಪಸ್ಥಿತರಿದ್ದರು.