ವಿಜಯಪುರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಡೋಣಿ ನದಿಯು ತುಂಬಿ ಹರಿದು ಅವಾಂತರ ಸೃಷ್ಟಿಸಿದೆ. ಈ ನದಿಪಾತ್ರವುದ್ದಕ್ಕೂ ಉಂಟಾದ ಅಪಾರ ಹಾನಿ ಪರಿಶೀಲನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಎರಡನೆ ದಿನವೂ ಮುಂದುವರೆಸಿದರು.
ಬೆಳಿಗ್ಗೆ ವಿಜಯಪುರದಿಂದ ಪ್ರವಾಸ ಆರಂಭಿಸಿದ ಸಚಿವರು ದೇವರ ಹಿಪ್ಪರಗಿ, ತಾಳಿಕೋಟಿ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಸಂಚರಿಸಿ ಬೆಳೆ ಹಾನಿ, ಮನೆ ಹಾನಿಯನ್ನು ಖುದ್ದು ವೀಕ್ಷಣೆ ಮಾಡಿದರು. ಶಾಸಕರಾದ ಸೋಮನಗೌಡ ಬಿ. ಪಾಟೀಲ ಸಾಸನೂರ ಅವರೊಂದಿಗೆ ಮೊದಲಿಗೆ ಸಚಿವರು, ದೇವರ ಹಿಪ್ಪರಗಿ ತಾಲೂಕಿನಲ್ಲಿ ಸಂಚರಿಸಿದರು. ದೇವರ ಹಿಪ್ಪರಗಿ-ಮುದ್ದೇಬಿಹಾಳ
ಮದ್ಯೆದಲ್ಲಿ ಬರುವ ಸಾತಿಹಾಳ ಸೇತುವೆಯು ಡೋಣಿ ನದಿ ನೀರಿನಿಂದಾಗಿ ಕೆಲ ಕಡೆ ಕಿತ್ತು ಹೋಗಿರುವುದನ್ನು ಮತ್ತು ನದಿ ಪಾತ್ರದ ಅಕ್ಕಪಕ್ಕದ ಜಮೀನು ನೀರಿನಿಂದಾಗಿ ಹಾನಿಯಾಗಿರುವುದನ್ನು ನೋಡಿದರು.
ಶಾಶ್ವತ ಪರಿಹಾರ ಕಲ್ಪಿಸಲು ಗ್ರಾಮಸ್ಥರ ಮನವಿ
ನಮಗೆ ತಾತ್ಕಾಲಿಕ ಪರಿಹಾರ ಬೇಡ, ಶಾಶ್ವತ ಪರಿಹಾರ ಬೇಕು. ಡೋಣಿ ನದಿ ಹೂಳು ಎತ್ತಿಸಬೇಕು. ಸಾತಿಹಾಳ ಸೇತುವೆಯನ್ನು ಎತ್ತರಿಸಬೇಕು. ಮಳೆಯಿಂದಾದ ಹಾನಿಗೆ ಪರಿಹಾರ ಕಲ್ಪಿಸಬೇಕು. ಮಳೆಯಾದಾಗೊಮ್ಮೆ ಶಾಲಾ ಆವರಣದಲ್ಲಿ ಮೊಳಕಾಲವರೆಗೆ ನೀರು ನಿಂತು ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು. ಊರು ಪಕ್ಕದ ಜಮೀನಿನ ನೀರು ಮನೆಗಳಿಗೆ ನುಗ್ಗಿ ನೀರು ಬಳಿಯುವಂತಾಗಿದೆ ಎಂದು ಅದೆ ಗ್ರಾಮದ ಹರಿಜನ ಕೇರಿಯ ನಿವಾಸಿಗಳು ಸಚಿವರಲ್ಲಿ ಮನವಿ ಮಾಡಿದರು.
ತಾಳಿಕೋಟಿ ತಾಲೂಕಿನಲ್ಲಿ ಸಂಚಾರ
ದೇವರಹಿಪ್ಪರಗಿ ಭೇಟಿ ತರುವಾಯ ಸಚಿವರು ತಾಳಿಕೋಟೆ ತಾಲೂಕಿನಲ್ಲಿ ಸಂಚರಿಸಿದರು. ಆ. 3ರಂದು ಸಿಡಿಲು ಬಡಿದು ಸಾವಿಗೀಡಾದ ತಾಳಿಕೋಟೆ ತಾಲೂಕಿನ ಹುಣಸ್ಯಾಳ ಗ್ರಾಮದ ಜೈನಾಬಿ ನಜೀರ್ ಅಹ್ಮದ್ ಸಿಪಾಯಿ ಅವರ ಕುಟುಂಬದವರಿಗೆ ರೂ. 5 ಲಕ್ಷ ಪರಿಹಾರ ಮಂಜೂರಾತಿ ಆದೇಶದ ಪ್ರತಿಯನ್ನು ತಾಳಿಕೋಟೆಯ ಪ್ರವಾಸಿ ಮಂದಿರದಲ್ಲಿ ವಿತರಿಸಿದರು. ಘಟನೆಯಲ್ಲಿ ಎಮ್ಮೆ ಮೃತಪಟ್ಟಿದ್ದು ಇದಕ್ಕಾಗಿ ರೂ. 30 ಸಾವಿರ ಪರಿಹಾರ ವಿತರಿಸಲಾಯಿತು.
ಮುಳುಗಡೆ ಗ್ರಾಮಕ್ಕೆ ಭೇಟಿ
ಡೋಣಿ ನದಿನೀರಿನಿಂದ ಮುಳುಗಡೆಯಾಗುವ ತಾಳಿಕೋಟೆ ತಾಲೂಕಿನ ಬೋಳುವಾಡ ಗ್ರಾಮಕ್ಕೆ ತೆರಳಿದ ಸಚಿವರು, ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಅಲ್ಲಿನ ಸರಕಾರಿ ಶಾಲೆಯ ದುಸ್ತಿತಿಯ ಬಗ್ಗೆ ಮುಖ್ಯಾಧ್ಯಾಪಕರಾದ ಎಸ್. ಎಂ. ಕುಪ್ಪಸ್ತ, ಶಿಕ್ಷಕಿ ಎಸ್ ಬಿ ಪಾಟೀಲ ಅವರಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಎಸ್ಪಿ ಡಾ. ಎಚ್. ಡಿ. ಆನಂದಕುಮಾರ, ವಿಜಯಪುರ ಉಪವಿಭಾಗಾಧಿಕಾರಿ
ರಾಮಚಂದ್ರ ಗಡಾದೆ, ತಾಳಿಕೋಟೆ ತಹಸೀಲ್ದಾರ, ತಾಪಂ ಇಓ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರಾದ ಸಿ. ಬಿ. ಚಿಕ್ಕಲಗಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಬರಗಿಮಠ, ವಿಪತ್ತು ನಿರ್ಹಣೆಯ ದೇವರಹಿಪ್ಪರಗಿ ತಾಲೂಕು ನೋಡಲ್ ಅಧಿಕಾರಿ ಮಲ್ಲಿಕಾರ್ಜುನ ಭಜಂತ್ರಿ ಹಾಗೂ ಇತರರು ಉಪಸ್ಥಿತರಿದ್ದರು.