ವಿಜಯಪುರ: ವ್ಯಕ್ತಿಪೂಜೆ ಮಿತಿ ಮೀರಿದರೇ ಆ ವ್ಯಕ್ತಿಯ ಜೊತೆಗೆ ಆತನ ಸಂಘ ಮತ್ತು ಪಕ್ಷವೂ ಹಾಳಾಗಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿಯೇ ಆರ್ ಎಸ್ ಎಸ್ ಮೊದಲ ಸರಸಂಘಚಾಲಕ ಡಾ. ಕೇಶವ ಬಲರಾಮ ಹೆಗಡೆವಾರ ವ್ಯಕ್ತಿ ಪೂಜೆಯನ್ನು ವಿರೋಧಿಸಿದ್ದರು ಎಂದು ಆರ್ ಎಸ್ ಎಸ್ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಸು. ರಾಮಣ್ಣ ಹೇಳಿದ್ದಾರೆ.
ವಿಜಯಪುರದಲ್ಲಿ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ನಡೆದ ಮರಾಠಿ ಪುಸ್ತಕ ರಂಗಾ ಹರಿ ಚಂದ್ರಶೇಖರ ಭಂಡಾರಿ ಅವರು ಕನ್ನಡಕ್ಕೆ ಅನುವಾದಸಿರುವ ಕೃತಿಯನ್ನು ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಗಡೆವಾರ ಅವರು ರಾಷ್ಟ್ರಪೂಜೆ, ಧ್ಯೇಯ, ತತ್ವ, ಸಿದ್ದಾಂತಗಳ ಆಧಾರದ ಮೇಲೆ ಸ್ವಯಂ ಸೇವಕ ಸಂಘಕ್ಕೆ ಬನಾದಿ ಹಾಕಿದರು. ಅವರ ವಾರಸಿಕರಾದ ಎರಡನೆಯ ಸರಸಂಘಚಾಲಕ ಗುರೂಜಿ ಗೋಲ್ವಾಳ್ಕರ ಅದನ್ನೇ ಅನುಸರಿಸಿ ಮುವತ್ತತ್ಮೂರು ವರ್ಷಗಳಕಾಲ ಸಂಘದ ಸಂಘಟನೆ ಮಾಡಿದರು. ವ್ಯಕ್ತಿ ಪೂಜೆಗೆ ಅವಕಾಶ ನೀಡದ ಆರ್ ಎಸ್ ಎಸ್ ಈಗ ಶತಮಾನದ ಸಂಘಟನೆಯಾಗಿ ಬೆಳೆಯಲು ಕಾರಣರಾದರು. ತತ್ವ, ಸಿದ್ದಾಂತ , ಧ್ಯೇಯ ಆಧರಿಸಿಯೇ ಸಂಘಟನೆ ಇನ್ನೂ ಬೆಳೆಯುತ್ತಿದೆ ಎಂದು ಅವರು ಹೇಳಿದರು.
ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತಾಡಿದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಹನುಮಂತಯ್ಯ ಪೂಜಾರ, ಸಾಮರಸ್ಯ ಪ್ರತಿಯೊಬ್ಬನಲ್ಲಿ ಮೂಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಮನೆಯಿಂದ ಹೊರಬಂದ ಮೇಲೇ ಎಲ್ಲರೂ ಭಾರತೀಯರು ಎಂಬ ಭಾವನೆ ಮೂಡಬೇಕು ಎಂದು ಹೇಳಿದರು.
ಆರ್ ಎಸ್ ಎಸ್ ಜಿಲ್ಲಾ ಸಂಘಚಾಲಕ ಡಾ. ಸತೀಶ ಜಿಗಜಿಣಗಿ, ಕಲ್ಯಾಣರಾವ ಮರಳಿ, ಡಾ. ಶೈಲೇಶ ದೇಶಪಾಂಡೆ, ರಾಮಸಿಂಗ ಹಜೇರಿ, ಶರಣು ಹೀರಾಪುರ, ಬಸವರಾಜ ಬೈಚಬಾಳ, ಶ್ರೀರಂಗ ಪುರಾಣಿಕ, ರವಿ ಹಕ್ಕಿ, ರಾಹುಲ ಮರಳಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗೀತಾ ವೈದ್ಯ ಪ್ರಾರ್ಥಿಸಿದರು. ಶ್ರೀಶೈಲ ಹುಟಗಿ ನಿರೂಪಿಸಿದರು. ರಘೋತ್ತಮ ಅರ್ಜುಣಗಿ ಸ್ವಾಗತಿಸಿ ಪರಿಚಯಿಸಿದರು. ನಾರಾಯಣ ಬಾಬಾನಗರ ವಂದಿಸಿದರು.