ವಿಜಯಪುರ: 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿ ಮತ್ತು ರಾಷ್ಟ್ರಧ್ವಜ ವಿತರಣೆ ಕಾರ್ಯಕ್ರಮಕ್ಕೆ ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ ಚಾಲನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಸಿಬ್ಬಂದಿಯು ಆ. 13 ರಿಂದ 15ರ ವರೆಗೆ ತಂತಮ್ಮ ಮನೆಗಳ ಮೇಲೆ ಸರಿಯಾದ ರೀತಿಯಲ್ಲಿ ರಾಷ್ಟ್ರಧ್ವಜ ಹಾರಿಸಬೇಕು. ಅಮೃತ ಮಹೋತ್ಸವದ ಸಂಭ್ರಮಾಚರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ, ಭಾಷಣ ಸ್ಪರ್ಧೆ ಹಾಗೂ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ದೇಶಭಕ್ತರ ವೇಷಭೂಷಣಗಳನ್ನು ಮಕ್ಕಳಿಗೆ ಹಾಕಿಸುವುದರೊಂದಿಗೆ ಸ್ವಾತಂತ್ರ‍್ಯ ದಿನಾಚರಣೆಯ ಸಂಭ್ರಮ ಆಚರಿಸಬೇಕು ಎಂದು ಹೇಳಿದರು.
ಮನೆಗಳಲ್ಲಿ ಆ. 15ರಂದು ಸಂ. ರಾಷ್ಟ್ರಧ್ವಜವನ್ನು ಇಳಿಸುವಾಗ ಗೌರವಯುತವಾಗಿ ಮತ್ತು ರಾಷ್ಟ್ರಧ್ವಜ ಮಡಚುವಾಗ ಸರಿಯಾದ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಮನವಿ ಮಾಡಿದ ಅವರು, ಈ ಬಗ್ಗೆ ಗ್ರಾ. ಪಂ., ತಾ. ಪಂ. ಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಆ. 13 ರಿಂದ 15ರ ವರೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸೋಣ. ಪ್ರತಿ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಿಸೋಣ ಎಂದು ಜಿ. ಪಂ. ಸಿಇಓ ರಾಹುಲ ಶಿಂಧೆ ಈ ಸಂದರ್ಭದಲ್ಲಿ ಮನವಿ ಮಾಡಿದರು.