ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಇತ್ತ ಇದೇ ಸಮಯದಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಅಣ್ಣ ಬಸವಣ್ಣನ ಜಾತ್ರೆಯೂ ಕೂಡ ಆರಂಭವಾಗಿದೆ.
ಈ ಜಾತ್ರೆಗೆ ಬಸವನ ಬಾಗೇವಾಡಿ ಪಟ್ಟಣದ ಯುವತಿಯರು ಮತ್ತು ಮಹಿಳೆಯರು ಜಾತ್ರೆಯ ದಾಸೋಹಕ್ಕೆ ನೆರವಾಗಲು ತಂತಮ್ಮ ಮನೆಗಳಲ್ಲಿ ರೊಟ್ಟಿಯನ್ನು ಮಾಡಿ ಜಾತ್ರಾ ಸಮಿತಿಯವರಿಗೆ ನೀಡುತ್ತಿದ್ದಾರೆ. ಈ ಸಮಯದಲ್ಲಿಯೂ ದೇಶಪ್ರೇಮ ಮೆರೆದ ಮಹಿಳೆಯರು ಬಸವನ ಬಾಗೇವಾಡಿ ಪಟ್ಟಣಾದ್ಯಂತ ತಲೆಯ ಮೇಲೆ ರೊಟ್ಟಿಯ ಬುತ್ತಿ ಹೊತ್ತುಕೊಂಡು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಹರ್ ಘರ್ ತಿರಂಗಾ ಅಭಿಯಾನಕ್ಕೆ ಮೆರಗು ನೀಡಿದರು.
ಬಸವನ ಬಾಗೇವಾಡಿ ಪಟ್ಟಣಾದ್ಯಂತ ಸಾವಿರಾರು ಮಹಿಳೆಯರು ದಾಸೋಹಕ್ಕೆ ನೀಡಲಾಗುವ ರೊಟ್ಟಿಯನ್ನು ಬಿಳಿಯ ಬಟ್ಟೆಯಲ್ಲಿ ಕಟ್ಟಿ ತಲೆಯ ಮೇಲೆ ಬುಟ್ಟಿಯಲ್ಲಿ ಇಟ್ಟುಕೊಂಡು ಸಂಚರಿಸಿದರು. ಈ ಸಂದರ್ಭದಲ್ಲಿ ಇವರು ಕೈಯಲ್ಲಿ ಹಿಡಿದಿದ್ದ ರಾಷ್ಟ್ರಧ್ವಜ ಸ್ವಾಮಿ ಕಾರ್ಯದ ಜೊತೆಗೆ ದೇಶಭಕ್ತಿಗೂ ಪಾತ್ರರಾಗಿದ್ದು ಗಮನಾರ್ಹವಾಗಿತ್ತು.
ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬಸವ ಜನ್ಮ ಸ್ಮಾರಕದಿಂದ ಬಸವೇಶ್ವರ ದೇಸ್ಥಾನದವರೆಗೆ ಈ ಮೆರವಣಿಗೆ ನಡೆಯಿತು.