ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಾಯಕರು ನಮಗೆಲ್ಲ ಸ್ಪೂರ್ತಿಯಾಗಬೇಕು ಎಂದು ವಿಜಯಪುರ ಎಸಿ ವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗತ್ತಿ ಹೇಳಿದರು.
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಎಸ್ ಆವರಣದ ಶಿಕ್ಷಣ ಸಂಸ್ಥೆಗಳ ಸಮೂಹದ ವತಿಯಿಂದ ಆಯೋಜಿಸಲಾಗಿದ್ದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಚ್ರಧ್ವಜವನ್ನು ಹಾರಿಸಿ ಮತ್ತು ರಾಷ್ಚ್ರಕ್ಕೆ ಮತ್ತು ರಾಷ್ಟ್ರಧ್ವಜಕ್ಕೆ ಗೌರವಿಸೋಣ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಅವರು ಧ್ವಜಾರೋಹಣ ನೆರವೇಹಿಸಿ ಮಾತನಾಡಿದರು.
ದೇಶಕ್ಜೆ ಸ್ವಾತಂತ್ರ್ಯ ತಂದುಕೊಟ್ಡ ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರು, ಸುಭಾಷ ಚಂದ್ರ ಬೋಸ್, ಡಾ. ಬಿ. ಆರ್. ಅಂಬೇಡ್ಕರ್, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ಚೆನ್ನಮ್ಮ ಸೇರಿದಂತೆ ದೇಶ, ರಾಜ್ಯ ಮತ್ತು ವಿಜಯಪುರ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಇಂದು ಸ್ಮರಿಸಬೇಕಾಗಿದೆ. ಮಹಾತ್ಮಾ ಗಾಂಧಿ ಅವರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮೂರ್ನಾಲ್ಕು ಬಾರಿ ವಿಜಯಪುರ ಜಿಲ್ಲೆಯ ನಾನಾ ಭಾಗಗಳಿಗೆ ಭೇಟಿ ನೀಡಿದ್ದಾರೆ. ಈ ಮಹನೀಯರು ಅಂದು ಹೋರಾಟ ನಡೆಸಿದ ಫಲವಾಗಿ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.
ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಮತ್ತು ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಮಾತನಾಡಿ, ನಾವೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವಕ ಆಚರಣೆಯಲ್ಲಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ನಮ್ಮಲ್ಲಿ ಇನ್ನೂ ಭ್ರಷ್ಟಾಚಾರ, ನಿರುದ್ಯೋಗ, ಬಡತನ, ಮೂಲಭೂತ ಸಮಸ್ಯೆಗಳು ಮತ್ತು ಮೂಲಭೂತವಾದಗಳಂಥ ಸಮಸ್ಯೆಗಳು ಜ್ವಲಂತವಾಗಿವೆ. ಈ ಸಮಸ್ಯೆಗಳಿಗೆ ಬೇರೆಯವರನ್ನು ದೂರುವುದಕ್ಕಿಂತ ಇಂಥ ಸಮಸ್ಯೆಗಳ ಪರಿಹಾರಕ್ಕೆ ನಾವು ಏನು ಮಾಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜ್ವಲಂತ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಪ್ರತಿಯೊಬ್ಬರ ಮನೆಯಿಂದಲೇ ದೇಶ ಕಟ್ಟುವ ಕೆಲಸ ಆರಂಭವಾಗಬೇಕು. ವಿದ್ಯಾರ್ಥಿಗಳನ್ನು ಆದರ್ಶ ನಾಗರಿಕರನ್ನಾಗಿ ಮಾಡುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ನಮ್ಮ ದೇಶದ ಸಂವಿಧಾನ ಅದ್ಬುತವಾಗಿದೆ. ಈ ಸಂವಿಧಾನ ಆಶಯಕ್ಕನುಗುಣವಾಗಿಯೇ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬೇರೆಯವರ ಕಡೆ ಬೊಟ್ಟು ಮಾಡುವುದು ಬೇಡ, ಕಾಲೆಳೆಯುವುದೂ ಬೇಡ, ಇನ್ನೊಬ್ಬರನ್ನು ಹೊಗಳಿ ಅವರ ಉತ್ತಮ ಕಾರ್ಯವನ್ನು ಶ್ಲಾಘಿಸುವ ಮೂಲಕ ಉತ್ತಮ ಸಮಾಜ ನಿರ್ಮಿಸಲು ಎಲ್ಲರೂ ಶ್ರಮಿಸಬೇಕು ಎಂದು ಡಾ. ಆರ್. ವಿ. ಕುಲಕರ್ಣಿ ಹೇಳಿದರು.
ಬಿ ಎಲ್ ಡಿ ಇ ಸಂಸ್ಥೆಯ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಆರ್. ಬಿ. ಕೊಟ್ನಾಳ ಮಾತನಾಡಿ, 75 ವರ್ಷಗಳಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅಭಿವೃದ್ಧಿಶೀಲ ರಾಷ್ಟವೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. 112 ವರ್ಷಗಳ ಹಿಂದೆ ಆರಂಭವಾದ ಬಿ ಎಲ್ ಡಿ ಇ ಸಂಸ್ಥೆ ಮತ್ತು ಎಸ್ ಎಸ್ ಹೈಸ್ಕೂಲು ಈ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುವ ಮೂಲಕ ಸಾವಿರಾರು ಜನರಿಗೆ ಬದುಕು ಲಿಸಿದೆ ಎಂದು ತಿಳಿಸಿದರು. ಯುವಕರು ದೇಶ ಅಭಿವೃದ್ಧಿಗೆ ಅವರದೇ ಆದ ಕೊಡುಗೆ ನೀಡಲು ದೃಢಸಂಕಲ್ಪ ಮಾಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಆವರಣದಲ್ಲಿರುವ ನಾನಾ ಶಾಲೆಗಳ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ನಡೆಸಿದ ದೇಶಭಕ್ತಿಗೆ ಸ್ಪೂರ್ತಿ ತುಂಬುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈ ನಿವರೇಳಿಸಿದವು. ದೇಶಭಕ್ತಿ ಉಕ್ಕಿ ಹರಿಯುವಂತೆ ಮಾಡಿದವು. ಜೆಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದೇಶಭಕ್ತಿ ನಾಟ್ಯ ಮಾಡಿದರು. ಬಂಗಾರಮ್ಮ ಸಜ್ಜನ ಕಾಲೇಜಿವ ವಿದ್ಯಾರ್ಥಿನಿಯರು ಯೋಗ ಭಂಗಿಯ ನೃತ್ಯ ಮನಸೂರೆಗೊಂಡಿತು. ಎಸ್ ಎಸ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಪಿರಾಮಿಡ್ ನೃತ್ಯ ಮೈ ನವಿರೇಳಿಸಿತು. ಎಸ್ ಎಸ್ ಎ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರಾದ ಭಗತಸಿಂಗ್, ಸುಖದೇವ ಮತ್ತು ರಾಜಗುರು ಅವರನ್ನು ಬ್ರಿಟೀಷರು ಗಲ್ಲಿಗೇರಿಸಿದ ಪ್ರಸಂಗವನ್ನು ಪ್ರದರ್ಶಿಸಿದರು. ಎಸ್ ಎಸ್ ಬ ಸಮನ್ವಯ ಸಾದನ ವಿಕಲಚೇತನ ಮಕ್ಕಳ ನೃತ್ಯವೂ ದೇಶಭಕ್ತಿಗೆ ಸಾಕ್ಷಿಯಾಯಿತು. ಎಸ್. ಎಸ್. ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ಧ್ವಜಾರೋಹಣ ನೃತ್ಯ, ಎಸ್ ಎಸ್ ಎ ಸ್ಕೂಲ್ ವಿದ್ಯಾರ್ಥಿಗಳ ಸುಗ್ಗಿ ಹಾಡು ನೃತ್ಯ, ಬಂಜಾರಾ ಡ್ಯಾನ್ಸ್ ಗಮನ ಸೆಳೆದವು.
ಪ್ರಾಸ್ತಾವಿಕವಾಗಿ ಮಾತನಾಡಿದ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ, ಕೇವಲ ಒಂದು ದಿನದಲ್ಲಿ ಈ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಸ್. ಎಸ್. ಹೈಸ್ಕೂಲ್ ಆವರಣದಲ್ಲಿರುವ ಏಳು ನಾನಾ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಇಡೀ ಆವರಣದಲ್ಲಿ ದೇಶಭಕ್ತಿಯನ್ನು ಪಸರಿಸಿದ್ದಾರೆ. ಇಂಥ್ ಕಾರ್ಯಕ್ರಮಗಳಿಗೆ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಸದಾ ಬೆಂಬಲವಾಗಿ ನಿಲ್ಲುವ ಮೂಲಕ ಎಲ್ಲರಿಗೂ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೋಂಡ ಅತಿಥಿಗಳಿಗೆ ಸಸಿ ವಿತರಿಸಲಾಯಿತು.
ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್ ಎಸ್ ಆವರಣದ ಆಡಳಿತಾಧಿಕಾರಿ ಐ. ಎಸ್. ಕಾಳಪ್ಪನವರ ಸ್ವಾಗತಿಸಿದರು. ಬಿ ಎಲ್ ಡಿ ಸಂಸ್ಥೆಯ ಆಡಳಿತಾಧಿಕಾರಿ ಬಿ. ಆರ್. ಪಾಟೀಲ, ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಅಧೀಕ್ಷಕರ ಎಸ್. ಎ. ಬಿರಾದಾರ, ವಚನ ಪಿತಾಮಹ ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದ ಕಾರ್ಯದರ್ಶಿ ಎಂ. ಎಸ್. ಮದಭಾವಿ, ಬಂಗಾರೆಮ್ಮ ಸಜ್ಜನ ಕಾಲೇಜಿನ ಪ್ರಾಚಾರ್ಯೆ ಡಾ. ಆರ್. ಎಂ. ಮಿರ್ದೇ,ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಡಾ. ಭಾರತಿ ಖಾಸನೀಸ, ಎಸ್. ಎಸ್. ಬಿ. ಹೈಸ್ಕೂಲಿನ ಮುಖ್ಯೋಪಾಧ್ಯಾಪಕ ಪಿ. ಎಸ್. ನಾಯಕ, ಡಿ. ಪಿ. ಎಡ್. ಕಾಲೇಜಿನ ಪ್ರಾಚಾರ್ಯ ಎಂ. ಪಿ. ಕುಪ್ಪಿ, ಬಿ ಎಲ್ ಡಿ ಇ ಬಾಲಕಿಯರ ಶಾಲೆಯ ಮುಖ್ಯೋಪಾಧ್ಯಾಪಕಿ ವಿದ್ಯಾ ನಿಡೋಣಿ, ಎಸ್. ಎಸ್. ಮಾಧ್ಯಮಿಕ ಶಾಲೆ ಉಪಪ್ರಾಚಾರ್ಯರ ಕೆ. ಬಿ. ಪಾಟೀಲ, ಉಪಸ್ಥಿತರಿದ್ದರು. ಉಪನ್ಯಾಸಕರು ಎಸ್. ಪಿ. ಶೇಗುಣಸಿ ನಿರೂಪಿಸಿದರು. ಎಸ್. ಎಸ್. ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ ಡಿ. ಅಕಮಂಚಿ ವಂದಿಸಿದರು.
ಈ ಕಾರ್ಯಕ್ರಮದ ಬಳಿಕ 1000 ಮೀಟರ್ ಉದ್ದದ ರಾಷ್ಟ್ರಧ್ವಜದ ಭವ್ಯ ಮೆರವಣಿಗೆ ನಡೆಯಿತು. ನಾನಾ ವೇಷಧಾರಿಗಳು ತೆರೆದ ವಾಹನದಲ್ಲಿ ನಿಂತು ಭಾರತದ ಅನೇಕತೆಯಲ್ಲಿ ಏಕತೆಯ ಸಂಸ್ಕೃತಿಗೆ ಸಾಕ್ಷಿಯಾಗದರು. ಈ ಕಾರ್ಯಕ್ರಮವನ್ನು ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಚಾಲನೆ ನೀಡಿದರು.
ವಿಜಯಪುರ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೇಶಭಕ್ತಿ ಗೋಷಣೆಗಳನ್ನು ಹಾಕುವ ಮೂಲಕ ಗಮನ ಸೆಳೆದರು.