ವಿಜಯಪುರ: ವಿಚ್ಛೇದನ ಕೋರಿದ ದಂಪತಿ ಲೋಕ ಅದಾಲತ್ ನಲ್ಲಿ ಮತ್ತೆ ಒಂದಾದ ಅಪರೂಪದ ಪ್ರಸಂಗ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯಾದ್ಯಂತ ನಾನಾ ನ್ಯಾಯಾಲಯಗಳಲ್ಲಿ ಶನಿವಾರ ಲೋಕ್ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಂದಗಿ ತಾಲೂಕು ನ್ಯಾಯಾಲಯದಲ್ಲಿ ಕಳೆದ 23 ವರುಷಗಳಿಂದ ಬಾಕಿ ಇದ್ದ ಪಾಲುವಾಟನಿ ದಾವೆ ಜನತಾ ನ್ಯಾಯಾಲಯದಲ್ಲಿ ರಾಜೀ ಸಂಧಾನದ ಮೂಲಕ ಇತ್ಯರ್ಥವಾಯಿತು. ಅದೇ ರೀತಿ ಬಸವನ ಬಾಗೇವಾಡಿ ನ್ಯಾಯಾಲಯದಲ್ಲಿ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದ ಎರಡೂ ಜೋಡಿಗಳನ್ನು ಜನತಾ ನ್ಯಾಯಾಲಯವು ರಾಜಿ ಸಂಧಾನದ ಮೂಲಕ ಒಂದು ಮಾಡಿದ್ದು ಗಮನ ಸೆಳೆಯಿತು.
ಕಕ್ಷಿದಾರರು ಮತ್ತು ವಕೀಲರ ಸಹಕಾರದಿಂದ ಆಸ್ತಿಯ ವಿಭಾಗ ಕೋರಿದ 114 ದಾವೆಗಳು, 94 ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಕೋರಿದ 54 ಪ್ರಕರಣಗಳು ಸೇರಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದ್ದ ಒಟ್ಟು 6259 ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥವಾದವು. ಇದರಿಂದ ಸರಕಾರಕ್ಕೆ ಹಾಗೂ ಕಕ್ಷಿದಾರರಿಗೆ ಸೇರಿ ಒಟ್ಟು 14 ಕೋ. 30 ಲಕ್ಷ 24 ಸಾವಿರದ 166 ಪರಿಹಾರ ಧನ ಒದಗಿಸಲಾಗಿದೆ. ಅಲ್ಲದೇ, 40302 ವ್ಯಾಜ್ಯ ಪೂರ್ವ ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥವಾಗಿವೆ.
ನ್ಯಾಯಾಧೀಶರಿಂದ ಅಭಿನಂದನೆ
ಜನತಾ ನ್ಯಾಯಾಲಯದ ಯಶಸ್ವಿಗೆ ಸಹಕರಿಸಿದ ಎಲ್ಲ ನ್ಯಾಯವಾದಿಗಳು ಕಕ್ಷಿದಾರರಿಗೆ, ಪೊಲೀಸ್ ಅಧಿಕಾರಿಗಳು, ಜನತಾ ನ್ಯಾಯಾಲಯದ ಬಗ್ಗೆ ಪ್ರಚಾರದಲ್ಲಿ ಸಹಭಾಗಿಯಾದ ಕಾನೂನು ಪದವಿ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೆನಲ್ ವಕೀಲರುಗಳಿಗೆ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೆಂಕಣ್ಣ ಹೊಸಮನಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.