DC Office Flag: ಸಾರ್ವಜನಿಕ ಸೇವಾ ಮನೋಭಾವ ಹೊಂದಲು ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕರೆ

ವಿಜಯಪುರ: ಅಧಿಕಾರಿಗಳು ಮತ್ತು ಸಿಬ್ಬಂದಿಯು ಸೇವಾ ಮನೋಭಾವದೊಂದಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಕರೆ ನೀಡಿದ್ದಾರೆ. 

ಜಿಲ್ಲಾಡಳಿತ ಭವನದಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಸಹ ಈ ಜಗತ್ತು ಬದಲಾಗಬೇಕು ಎಂದು ಬಯಸುತ್ತಾರೆ. ಹಾಗೆ ಹೇಳುವ ನಾವುಗಳು ನಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನರಿಯಬೇಕು. ಧೈರ್ಯ ಸಾಹಸ ಶಕ್ತಿ ಇರುವ ಕಡೆಗೆ ದೌರ್ಬಲ್ಯ ಸುಳಿಯುವುದಿಲ್ಲ. ಆತ್ಮವಿಶ್ವಾಸವೊಂದಿದ್ದರೆ ಬೆಟ್ಟದಂತಹ ಕಷ್ಟವನ್ನೂ ಎದುರಿಸಬಹುದಾಗಿದೆ ಎಂದ ಜಿಲ್ಲಾಧಿಕಾರಿಗಳು, ಸೇವೆಯೇ ನನ್ನ ಧರ್ಮ, ನನ್ನ ಕರ್ತವ್ಯ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಡಳಿತ ಭವನದ ಬಳಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಧ್ವಜಾರೋಹಣ ನೆರವೇರಿಸಿದರು

ಅಸಹಿಷ್ಣುತೆಯು ಪ್ರಜಾಪ್ರಭುತ್ವದ ಬೆಳೆವಣಿಗೆಗೆ ಅಡ್ಡಿಯಾಗುತ್ತದೆ. ನಾವು ಸಾಮರಸ್ಯದಿಂದ ಯೋಚಿಸುವಲ್ಲಿಯೇ ನಮ್ಮ ಸಂತೋಷ ಅಡಗಿದೆ. ಮನುಷ್ಯನ ಅತ್ಯಂತ ಶಕ್ತಿಯುತ ಅಸ್ತçವೆಂದರೆ ಅದು ಶಾಂತಿಯಾಗಿದೆ. ಮಾನವೀಯತೆಯ ಮೇಲೆ ನಾವು ನಂಬಿಕೆಯನ್ನು ಕಳೆದುಕೊಳ್ಳಬಾರದು. ಆತ್ಮದ ಅರಿವು ಹೆಚ್ಚಿದಂತೆ ಮಾನವನ ಪ್ರಗತಿ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಶಿಕ್ಷಣ, ಉದ್ಯೋಗ, ಕೃಷಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ರಂಗಗಳಲ್ಲೂ ನಮ್ಮ ದೇಶವು ಈಗ ಅಗಾಧ ಸಾಧನೆ ತೋರಿದೆ. ದೇಶವು ಇನ್ನೂ ಹೆಚ್ಚಿನ ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ಕಾರ್ಯಾಂಗದ ಪಾತ್ರವೂ ಅತೀ ಮುಖ್ಯವಾಗಿದೆ. ಇದನ್ನು ಪ್ರತಿಯೊಬ್ಬ ಅಧಿಕಾರಿಗಳು ಮತ್ತು ಸಿಬ್ಬಂದಿ ಅರಿತು ಜನಪರ ಆಲೋಚನೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು. ಪ್ರತಿಯೊಂದು ಸಂದರ್ಭದಲ್ಲೂ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ವಿಜಯಪುರ ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ಜಿಲ್ಲಾ ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌