Alamatti Karjol: ಆಲಮಟ್ಟಿ ಪ್ರವಾಹ ನಿಯಂತ್ರಣ- ಸಚಿವ ಕಾರಜೋಳಗೆ ಉಮೇಶ ಕೋಳಕೂರ, ರವೀಂದ್ರ ಲೋಣಿ ಅಭಿನಂದನೆ

ವಿಜಯಪುರ: ಈ ಬಾರಿ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಜಲ ನಿರ್ವಹಣೆ ಉತ್ತಮವಾಗಿದ್ದು, ಕರ್ನಾಟಕವಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿಯೂ ಪ್ರವಾಹ ನಿಯಂತ್ರಣ ಸಾಧ್ಯವಾಗಿದೆ. ಇದಕ್ಕೆಲ್ಲ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಮುಂದಾಲೋಚನೆಯೇ ಕಾರಣ ಎಂದು ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಉಮೇಶ ಕೋಳಕೂರ ಮತ್ತು ಮಾಜಿ ಕಾರ್ಪೋರೇಟರ್ ರವೀಂದ್ರ ಲೋಣಿ ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಮುಖಂಡರು ಮಾತನಾಡಿದರು.

ಮೊದಲಿಗೆ ಮಾತನಾಡಿದ ಉಮೇಶ ಕೋಳಕೂರ,
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಈ ಭಾರಿ ಆಲಮಟ್ಟಿಯಲ್ಲಿ ನೀರು ನಿರ್ವಹಣೆಯನ್ನು ಚೆನ್ನಾಗಿ ಮಾಡಲಾಗಿದೆ. ಅವರಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿದರು.

ಪ್ರತಿವರ್ಷ ಕರ್ನಾಟಕ ನೀರು ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲವೆಂದು ಮಹಾರಾಷ್ಟ್ರ ಆರೋಪ ಮಾಡುತ್ತಿತ್ತು. ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗಲು ಆಲಮಟ್ಟಿಯಲ್ಲಿ ನೀರು ನಿರ್ವಹಣೆ ವೈಫಲ್ಯವೇ ಕಾರಣ ಎಂದು ಮಹಾರಾಷ್ಟ್ರ ಸರಕಾರ ಮತ್ತು ಅಧಿಕಾರಿಗಳು ಕರ್ನಾಟಕದ ಕಡೆ ಬೊಟ್ಟು ಮಾಡುತ್ತಿದ್ದರು. ‌ ಆದರೆ, ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ನಂದಕುಮಾರ ನಲವಡೆ ಅವರೂ ಕೂಡ ಆಲಮಟ್ಟಿ ಹಿನ್ನೀರು ಮಹಾರಾಷ್ಟ್ರದ ಪ್ರವಾಹಕ್ಕೆ ಕಾರಣವಲ್ಲ ಎಂದು ಈ ಹಿಂದೆ ವರದಿ ನೀಡಿದ್ದಾರೆ.
ಈಗ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರು ಈ ಬಾರಿ ಪ್ರವಾಹ ನಿರ್ವಹಣೆಯಲ್ಲಿ ಕರ್ನಾಟಕ ಸರಕಾರ, ಜಲಸಂಪನ್ಮೂಲ ಸಚಿವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಜನತೆಯ ಪರವಾಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಜಿಲ್ಲೆ ಮತ್ತು ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.

ಅಷ್ಟೇ ಅಲ್ಲ, ಸಚಿವರು ಇಡೀ ರಾಜ್ಯದ ಎಲ್ಲ ಜಲಾಶಯಗಳ ಜಲ ನಿರ್ವಹಣೆಯನ್ನು ಹಗಲುರಾತ್ರಿ ಎನ್ನದೇ ಖುದ್ದಾಗಿ ಉಸ್ತುವಾರಿ ವಹಿಸಿ ವಹಿಸಿ ಸಿಬ್ಬಂದಿಗೆ ಮಾರ್ಗದರ್ಶನ ಮಾಡಿ ಎಲ್ಲಿಯೂ ಯಾವುದೇ ರೀತಿ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿದ್ದಾರೆ ಎಂದು ಉಮೇಶ ಕೋಳಕೂರ ಹೇಳಿದರು.

ಡೋಣಿ ನದಿ ಪ್ರವಾಹ ವಿಚಾರ

ಡೋಣಿ ನದಿ ಪ್ರವಾಹ ಕುರಿತು ಮಾತನಾಡಿದ ಅವರು, ಈ ಹಿಂದೆ ಸಚಿವರಾಗಿದ್ದವರು ಏನೂ ಮಾಡಿಲ್ಲ. ಈಗ ಡೋಣಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಆ ಮಾಡಲ್ ಈ ಮಾಡಲ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ತಾವು ಸಚಿವರಾಗಿದ್ದಾಗ ಅವರ ಕೈಯಲ್ಲಿ ಅಧಿಕಾರವಿತ್ತು. ಆವಾಗ ಯಾಕೆ ಮಾಡಲಿಲ್ಲ? ಎಂದು ಉಮೇಶ ಕೋಳಕುರ ಪ್ರಶ್ನಿಸಿದರು‌.

ವಿಜಯಪುರದಲ್ಲಿ ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ಉಮೇಶ ಕೋಳಕೂರ, ರವೀಂದ್ರ ಲೋಣಿ ಮಾತನಾಡಿದರು.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಜೊತೆ ಡೋಣಿ ನದಿ ಪ್ರವಾಹದ ಕುರಿತು ನಾವು ಮಾತನಾಡಿದ್ದೇವೆ. ಅವರು ರೈತರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ನಾವು ಕರ್ನಾಟಕ ಮಾಡೆಲ್ ಮೂಲಕ ಡೋಣಿ ನದಿ ಪ್ರವಾಹ ನಿರ್ವಹಣೆ ಮಾಡೋಣ. ಬೇರೆ ಮಾಡಲ್‍ಗಳು ಬೇಡ ಎಂದು ಸಚಿವರು ಹೇಳಿದ್ದಾರೆ. ಅಷ್ಟೇ ಅಲ್ಲ, ರೈತರು ನೀರಾವರಿ ತಜ್ಞರೂ ಆಗಿರುವುದರಿಂದ ಅನ್ನದಾತರ ಸಲಹೆಗಳನ್ನು ಆಲಿಸಬೇಕು. ಈಗಾಗಲೇ ಈನಿಟ್ಟಿನಲ್ಲಿ 2-3 ಬಾರಿ ಸಭೆ ಮಾಡಿದ್ದಾರೆ. ರೈತರು ತಂತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದು ಅವರು ಹೇಳಿದರು.

 

ಕೆಲವು ರೈತರು ಡೋಣಿ ನದಿಯ ಅಗಲೀಕರಣ ಮಾಡಿ ನದಿಯ ಮಧ್ಯಭಾಗದಲ್ಲಿ 50-60 ಅಡಿ ಆಳ ಅಗೆದು ಮರಳು ಸಿಗುವವರೆಗೂ ಹೂಳೆತ್ತಿ ಎಂದು ಸಲಹೆ ನೀಡಿದ್ದಾರೆ. ಇನ್ನೂ ಕೆಲವು ರೈತರು ಡೋಣಿ ನದಿಯ ದಂಡೆಯಲ್ಲಿ ಎರಡೂ ಕಡೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಆ ಪ್ರದೇಶದಲ್ಲಿ ಮರಗಳನ್ನು ನೆಟ್ಟು ಅರಣ್ಯ ಬೆಳೆಸಲು ಸಲಹೆ ನೀಡಿದ್ದಾರೆ. ನಾವು ಈಗ ಇಷ್ಟೇಲ್ಲ ಮಾಡುತ್ತಿದ್ದೇವೆ. ಈಗ ಡೋಣಿ ನದಿ ಪಾತ್ರ ರೈತರ ಹೊಲಗಳಿಗಿಂತಲೂ ಮೇಲೆ ಬಂದಿದೆ. ನನಗೆ ಸೇರೊದ ಕೂಡ 16 ಎಕರೆ ಜಮೀಸಿಗೂ ಡೋಣಿ ನದಿ ಪ್ರವಾಹದ ಸಮಸ್ಯೆ ಎದುರಿಸುತ್ತಿದ್ದೇನೆ ಎಂದು ಉಮೇಶ ಕೋಳಕೂರ ಹೇಳಿದರು.

ರವೀಂದ್ರ ಲೋಣಿ ಹೇಳಿಕೆ

ಆಲಮಟ್ಟಿ ರಾಜ್ಯದ ಮತ್ತು ದೇಶದ ಪ್ರಮುಖ ಜಲಾಶಯ. ಇಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಹಿಂದೆ ಬಾಗಲಕೋಟಿ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಕೆ ಬಿ ಜೆ ಎನ್ ಎಲ್ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿ ಎರಡು ವರ್ಷ ಬೇಸಿಗೆ ಕಾಲದಲ್ಲಿಯೂ ರೈತರಿಗೆ ತೊಂದರೆಯಾಗದಂತೆ ಕೆಲಸ ಮಾಡಿದ್ದಾರೆ. ನಾನಾ ಕಾಲುವೆಗಳ ಮೂಲಕ ಭೀಮಾ ನದಿಯ ದಂಡೆಯವರೆಗೆ ಮೇ ಎರಡನೇ ವಾರದವರೆಗೂ ನೀರು ಹರಿಸಿದ್ದಾರೆ. ಇದಕ್ಕೂ ಮುಂಚೆ ಕೇವಲ ಫೆಬ್ರವರಿವರೆಗೆ ಮಾತ್ರ ನೀರು ಬಿಡಲಾಗುತ್ತಿತ್ತು. ಆದರೆ ಮೇ ಎರಡನೇ ವಾರದವರೆಗೂ ಕಾಲುವೆಗಳಿಗೆ ನೀರು ಹರಿಸಿರುವುದಕ್ಕೆ ಇಂಡಿ ಭಾಗದ ರೈತರು ನನ್ನ ಬಳಿ ಸಂತಸ ಹಂಚಿಕೊಂಡಿದ್ದಾರೆ. ಇದಕ್ಕೆ ಸಚಿವ ಗೋವಿಂದ ಕಾರಜೋಳ ಅವರ ಮುಂಜಾಗ್ರತೆಯೇ ಕಾರಣ. ಪ್ರತಿ 15 ದಿನಗಳಿಗೊಮ್ಮೆ ನೀರಿನ ಲಭ್ಯತೆ ಪರಿಶೀಲಿಸಿ ಸಚಿವರ ಸೂಚನೆಯಂತೆ ಅಧಿಕಾರಿಗಳು ಕಾಲುವೆಗಳಿಗೆ ನೀರು ಹರಿಸಿದ್ದಾರೆ. ಸಚಿವರ ಈ ಕಾರ್ಯವನ್ನು ಬಬಲೇಶ್ವರ ಮತಕ್ಷೇತ್ರದ ಜನರೂ ಕೂಡ ಕೊಂಡಾಡಿದ್ದಾರೆ. ಈ ವರ್ಷ ಈ ಭಾಗದ ಎಲ್ಲ ಕಡೆ ನೀರು ಬಂದಿದೆ ಎಂದು ಬೋಳಚಿಕ್ಕಲಕಿ ಗ್ರಾಮಸ್ಥರು ನನ್ನ ಬಳಿ ಹೇಳಿದ್ದಾರೆ. ಇಂಡಿ ತಾಲೂಕಿನ ಕೊನೆಯ ಗ್ರಾಮ ಮಿರಗಿವರೆಗೂ ಬೇಸಿಗೆಯಲ್ಲಿ ಕಾಲುವೆಗಳ ಮೂಲಕ ನೀರು ಹರಿಸಿದ್ದಾರೆ. ಒಳಹರಿವು ಮತ್ತು ಹೊರಹರಿವನ್ನು ಸರಿಯಾಗಿ ನಿರ್ವಹಿಸಿದ ಪರಿಣಾಮ ಈ ಭಾರಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ವಿಜಯಪುರ, ಬಾಗಲಕೋಟೆ ಮತ್ತು ಮಹಾರಾಷ್ಟ್ರದಲ್ಲಿ ಪ್ರವಾಹವನ್ನು ತಡೆಯಲಾಗಿದೆ ಎಂದು ಹೇಳಿದರು.

ಸಚಿವರು ಹಿರಿಯ ನೀರಾವರಿ ತಜ್ಞರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ನೀರು ನಿರ್ವಹಣೆ ಮಾಡಿದ್ದರಿಂದ ಪ್ರತಿಯೊಂದು ಊರಿನ ಹಳ್ಳಕೊಳ್ಳಗಳಿಗೆ ನೀರು ಹರಿಸಲಾಗಿದೆ. ಇದರಿಂದ ತಾಂಬಾ, ನಾದ, ಕಡಣಿವರೆಗೂ ನೀರು ಹರಿಯುತ್ತಿದೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿದೆ. ಇಂಡಿ, ಸಿಂದಗಿ, ಆಲಮೇಲ ತಾಲೂಕುಗಳಲ್ಲಿ ರೈತರು ಈ ಭಾರಿ ಕನಿಷ್ಠ 10 ಟನ್ ಹೆಚ್ಚುವರಿಯಾಗಿ ಕಬ್ಬು ಬೆಳೆಯುತ್ತಾರೆ. ಈ ರೈತರಿಗೆ ಸರಿಯಾದ ಸಮಯಕ್ಕೆ ನೀರು ಬಿಡುಗಡೆ ಮಾಡಿದ್ದು ಇದಕ್ಕೆ ಕಾರಣ. ಅಷ್ಟೇ ಅಲ್ಲ ಈ ಬಾರಿ ಹಳ್ಳಕೊಳ್ಳಗಳಿಗೆ ನೀರು ಹರಿಸಿದ ಪರಿಣಾಮ ಬಿಸಿಲಿನ ತಾಪಮಾನವು ಕಡಿಮೆಯಾಗಿದೆ. ಇದು ರೈತರಲ್ಲಿ ಅಷ್ಟೇ ಅಲ್ಲ ಜನಸಾಮಾನ್ಯರಿಗೂ ಸಂತಸ ತಂದಿದೆ ಎಂದು ಮಾಜಿ ಕಾರ್ಪೊರೇಟರ್ ತಿಳಿಸಿದರು.

ಕಳೆದ 10-15 ವರ್ಷಗಳಿಂದ ಮಹಾರಾಷ್ಟ್ರದವರು ಕರ್ನಾಟಕದ ನೀರು ನಿರ್ವಹಣೆ ವಿರುದ್ಧ ಮಾಡುತ್ತಿದ್ದ ಆರೋಪಗಳಿಗೆ ಈ ಬಾರಿ ಅವಕಾಶವಿಲ್ಲದಂತಾಗಿದೆ. ಇಂದಿನ ದಿನಗಳಲ್ಲಿ ನೆಲ ಮತ್ತು ಜಲ ನಿರ್ವಹಣೆ ಬಹಳ ಮಹತ್ವದ್ದಾಗಿದೆ. ಇದನ್ನು ಅರಿತ ಸಚಿವ ಕಾರಜೋಳ ಅವರು ಉತ್ತಮವಾಗಿ ಇಲಾಖೆಯನ್ನು ನಿಭಾಯಿಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾರಜೋಳ ಅವರ ಕಾರ್ಯ ನಿರ್ವಹಣೆ ಬಗ್ಗೆ ಮಹಾರಾಷ್ಟ್ರದ ಸಿಎಂ ಕೂಡ ಮೆಚ್ಚುಗೆ ವ್ಯಕ್ತಪಡಿಸಿರುವುದು ಎಲ್ಲರಿಗೂ ಹೆಮ್ಮೆಯ ವಿಷಯ. ಜಿಲ್ಲೆಯ ಎಲ್ಲ ರೈತರ ಪರವಾಗಿ ಪಕ್ಷಾತೀತವಾಗಿ ಕಾರಜೋಳ ಅವರಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.

2017ರ ಮಾರ್ಚನಲ್ಲಿ ನಾನು ಕಾರ್ಪೋರೇಟರ್ ಆಗಿದ್ದಾಗ ವಿಜಯಪುರ ನಗರದಲ್ಲಿ ಕುಡಿಯುವ ನೀರಿಗೂ ಜನ ಪರದಾಡುವಂತಾಗಿತ್ತು. ಅಂದು ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯವರೆ ಉಸ್ತುವಾರಿ ಸಚಿವರಾಗಿದ್ದರು. ಆದರೂ ವಿಜಯಪುರ ನಗರಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದರಿಂದ ಅಂದು ನಾನು ಜಲಮಂಡಳಿ ಅಧಿಕಾರಿಗಳ ಜೊತೆ ಕೊಲ್ಹಾರಕ್ಕೆ ಹೋಗಿದ್ದೆ ಅಲ್ಲಿ ಕೃಷ್ಣಾ ನದಿ ನೀರೆಲ್ಲ ಖಾಲಿಯಾಗಿತ್ತು. ಅಷ್ಟೊಂದು ಕಳಪೆ ನಿರ್ವಹಣೆ ಮಾಡಲಾಗಿತ್ತು. ‌ಆಲಮಟ್ಟಿ ಜಲಾಷಯದ ಡೆಡ್ ಸ್ಟೋರೇಜ್ ನೀರನ್ನು ಕೊಲ್ಹಾರ ಜಾಕವೆಲ್‍ ಹಿಂದಕ್ಕೆ ಎತ್ತಿ ಹಾಕಿ ವಿಜಯಪುರ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಆದರೆ ಈಗ ನಮ್ಮ ಸರಕಾರ ಅಧಿಕಾರದಲ್ಲಿದ್ದು ಬಿಜೆಪಿಯವರೇ ಉಸ್ತುವಾರಿ ಸಚಿವರಾಗಿ ಉತ್ತಮ ನಿರ್ವಹಣೆ ಮಾಡಿದ್ದಾರೆ. 2017ರ ಪರಿಸ್ಥಿತಿಗೆ ಹೋಲಿಸಿದರೆ ಈಗ ಅಷ್ಟೊಂದು ಸಮಸ್ಯೆ ಇಲ್ಲ. ನಮ್ಮ ಸರಕಾರ ಉತ್ತಮವಾಗಿ ಕೆಲಸ ಮಾಡಿದೆ. ಸಚಿವ ಕಾರಜೋಳ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಅವರು ಹೇಳಿದರು.

ಸಚಿವ ಕಾರಜೋಳ ಅವರಿಗಿಂತಲೂ ಮುಂಚೆ ರಮೇಶ ಜಾರಕಿಹೊಳಿ ಮತ್ತು ಬಿ. ಎಸ್.‌ ಯಡಿಯೂರಪ್ಪ ಅವರೇ ಜಲಸಂಪನ್ಮೂಲ ಸಚಿವರಾಗಿದ್ದರು.‌ ಹಾಗಾದರೆ ಕಾರಜೋಳ ಅವರಿಗಿಂತ ಮುಂಚೆ ಇವರಿಬ್ಬರೂ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉಭಯ ನಾಯಕರು ಹಾರಿಕೆಯ ಉತ್ತರ ನೀಡಿ ಜಾರಿಕೊಂಡರು.

ಈ ಸಂದರ್ಭದಲ್ಲಿ ಜಿ. ಪ. ಮಾಜಿ ಸದಸ್ಯರಾದ ನವೀನ ಅರಕೇರಿ, ಭೀಮಾಶಂಕರ ಪಾಟೀಲ, ಮಲ್ಲಿಕಾರ್ಜುನ ಕನ್ನೂರ, ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌