MP Jigajinagi: ವಿಜಯಪುರ ಜಿಲ್ಲೆಗೆ ಕೇಂದ್ರ ಸರಕಾರದಿಂದ ಕೋ. 1020 ಕೋ. ಅನುದಾನ- ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ರಸ್ತೆ, ಮೇಲ್ಸೇತುವೆ ಸೇರಿ ಕೇಂದ್ರ ಸರ್ಕಾರದಿಂದ 1020 ಕೋಟಿ ರೂ.ಅನುದಾನವನ್ನು ವಿಜಯಪುರ ಜಿಲ್ಲೆಗೆ ತಮ್ಮ ಆಡಳಿತಾವಧಿಯಲ್ಲಿ ಕೇಂದ್ರ ಸರ್ಕಾರದಿಂದ ಪಡೆದುಕೊಂಡಿದ್ದು, ಇದಕ್ಕಾಗಿ ತಾವು ಮಾನ್ಯ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳುವುದಾಗಿ ಸಂಸದರಾದ ರಮೇಶ ಜಿಗಜಿಣಗಿ ಅವರು ತಿಳಿಸಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿಯ ಉಪ ವಿಭಾಗದಿಂದ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಂ.548ಬಿ ವಿಜಯಪುರ ಪ್ರವಾಸಿ ಮಂದಿರ ವೃತ್ತದಿಂದ ತೆಲಸಂಗ ಕ್ರಾಸ್‌ವರೆಗೆ ಅಂದಾಜು ರೂ. 250 ಕೋ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಲಾಗುವುದು.  ಇದು ಎರಡು ವರ್ಷದೊಳಗೆ ಪೂರ್ಣವಾಗಲಿದೆ ಎಂದು ತಿಳಿಸಿದರು.

ಅದೇ ರೀತಿ ರೂ. 69.53 ಕೋ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ.561ಎ ಮಹಾರಾಷ್ಟ್ರ ಗಡಿ ಸಿದ್ಧಾಪೂರ-ಅರಕೇರಿಯಿಂದ ವಿಜಯಪುರ ವರೆಗಿನ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು, ಒಂದೂವರೆ ವರ್ಷದೊಳಗೆ ಪೂರ್ಣವಾಗಲಿದೆ.  ಅಲ್ಲದೇ, ರಾಷ್ಟ್ರೀಯ ಹೆದ್ದಾರಿ ನಂ. 548ಬಿ ಮಹಾರಾಷ್ಟ್ರ ಗಡಿಯಿಂದ ಮಣ್ಣೂರ, ಹಿರೇಬೇವನೂರ, ಇಂಡಿ (ಬೈಪಾಸ್ ರಸ್ತೆ) ರೂಗಿ, ಅಥರ್ಗಾ (ಬೈವಾಸ್ ರಸ್ತೆ) ನಾಗಠಾಣ, ಅಲಿಯಾಬಾದ ರೇಲ್ವೆ ಮೇಲ್‌ಸೇತುವೆ ವಿಜಯಪುರ ಪಟ್ಟಣದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರವರೆಗೆ ಅಂದಾಜು ರೂ. 650 ಕೋ. ವೆಚ್ಚದಲ್ಲಿನ ಕಾಮಗಾರಿಯ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದು ಸಂಸದರು ತಿಳಿಸಿದರು.

ಅಲ್ಲದೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.  ಅಂದಾಜು ರೂ. 5000 ಕೋ. ವೆಚ್ಚದಲ್ಲಿ ವಿಜಯಪುರ ನಗರದ ಗಣೇಶ ನಗರ ಜಂಕ್ಷನ್‌ಗೆ ಮೇಲ್ ಸೇತುವೆ ನಿರ್ಮಾಣ ಕಾಮಗಾರಿಯು ಮಂಜೂರಾತಿ ಹಂತದಲ್ಲಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ಅವರು ತಿಳಿಸಿದರು.


ಈ ಹಿಂದೆಯೂ ಸಹ ತಮ್ಮ ಆಡಳಿತಾವಧಿಯಲ್ಲಿ ವಿಜಯಪುರ ಜಿಲ್ಲೆಗೆ ಎನ್‌ಟಿಪಿಸಿಗಾಗಿ ರೂ. 42000 ಕೋ. ತಂದಿರುವೆ.  ಇಂಡಿ ತಾಲೂಕಿನ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ರೂ. 110 ಕೋ. ಮಂಜೂರಾತಿ ಮಾಡಿಸಿರುವೆ.  ರೂ. 1850 ಕೋ. ವೆಚ್ಚದಲ್ಲಿ ಸೊಲ್ಲಾಪುರ-ಗದಗ ಮಾರ್ಗಕ್ಕೆ ಮಂಜೂರಾತಿ ಆಗಿದೆ. ರೂ. 1800 ಕೋ. ವೆಚ್ಚದಲ್ಲಿ ಸೋಲಾರು- ವಿಜಯಪುರ ಮಾರ್ಗಕ್ಕೆ ಸಹ ಮಂಜೂರಾತಿ ನೀಡಲಾದಿದೆ ಎಂದು ಅವರು ತಿಳಿಸಿದರು.

ಸೊಲ್ಲಾಪುರ-ವಿಜಯಪುರ ರಸ್ತೆ ಮಾರ್ಗವನ್ನು ಆರು ಲೈನ್‌ಗೆ ವಿಸ್ತರಿಸಬೇಕು ಎನ್ನುವ ಬೇಡಿಕೆಯನ್ನು ಸಹ ತಾವು ಮತ್ತು ಸೋಲಾಪುರ ಕ್ಷೇತ್ರದ ಸಂಸದರು ಕೇಂದ್ರ ಸರಕಾರದ ಮುಂದೆ ಇಟ್ಟಿರುವುದಾಗಿ ಹೇಳಿದ ಅವರು ತಮ್ಮ ಅಧಿಕಾರಾವಧಿಯಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ಗಮನಾರ್ಹ ಕೆಲಸಗಳಾಗಿದ್ದು ತಮಗೆ ಸಂತಸದ ಸಂಗತಿಯಾಗಿದೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.

ತಮ್ಮ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ನಾಲ್ಕು ದೊಡ್ಡ ಸೇತುವೆಗಳ ನಿರ್ಮಾಣಕ್ಕೆ ಸಹ ಮಂಜೂರಾತಿ ಕೂಡ ಸಿಕ್ಕಿತ್ತು. ಹೀಗಾಗಿ ತಾವು ಕೇಂದ್ರ ಸರ್ಕಾರಕ್ಕೆ ವಂದನೆಗಳನ್ನು ತಿಳಿಸುವೆ ಎಂದರು. ಯಾವುದೇ ಪ್ರಚಾರ ಬಯಸದೇ ಜಿಲ್ಲೆಯಲ್ಲಿ ಸಾರ್ವಜನಿಕ ಕೆಲಸಗಳನ್ನು ಗಮನಾರ್ಹ ರೀತಿಯಲ್ಲಿ ಮಾಡಿದ್ದಾಗಿ ಹೇಳಿದರು. ಅನೇಕ ಹಿರಿಯರು ತಮಗೆ ಉತ್ತಮವಾಗಿ ಮಾರ್ಗದರ್ಶನ ಮಾಡಿದಂತೆ, ತಾವು ಅಧಿಕಾರ ಮತ್ತು ಹಣದ ಹಿಂದೆ ಎಂದಿಗೂ ಬೆನ್ನು ಹತ್ತಿಲ್ಲ ಎಂದು ಅವರು ತಿಳಿಸಿದರು.

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ನಂತರ ದೇಶದಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳಾಗಿವೆ.  ವಿಜಯಪುರ ಜಿಲ್ಲೆಗೆ ಕೇಂದ್ರ ಸರಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಪಡೆದುಕೊಳ್ಳಲಾಗಿದೆ.  ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತಂತೆ ತಾವು ಏನೇ ಪತ್ರ ಬರೆದರೂ ಅದಕ್ಕೆ ಪ್ರಧಾನ ಮಂತ್ರಿಗಳು ಮತ್ತು ಇನ್ನಿತರ ಕೇಂದ್ರ ಸಚಿವರು ತಕ್ಷಣ ಸ್ಪಂದಿಸುತ್ತಾರೆ.  ಯಾವುದಕ್ಕೂ ಇಲ್ಲ ಎನ್ನುವುದಿಲ್ಲ ಎಂದು ಅವರು ತಿಳಿಸಿದರು.

ತಾಂತ್ರಿಕ ಕಾರಣದಿಂದಾಗಿ ಇಂಡಿ ತಾಲೂಕಿನ ಶಿರಾಳ-ಲಿಂಗಸಗೂರು 180 ಕಿ. ಮೀ. ರಸ್ತೆಗೆ ಮಂಜೂರಾತಿ ಸಿಕ್ಕಿರುವುದಿಲ್ಲ.  ಇದಕ್ಕಾಗಿ ತಾವು ಕೇಂದ್ರ ಸರಕಾರಕ್ಕೆ ಮೇಲಿಂದ ಮೇಲೆ ಪತ್ರಗಳನ್ನು ಬರೆದು ನಿರಂತರ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ ಅವರು, ಸದ್ಯದಲ್ಲೇ ಈ ರಸ್ತೆಗೆ ಸಹ ಮಂಜೂರಾತಿ ಪಡೆದುಕೊಳ್ಳಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಯೋಜನೆ ವಿಳಂಬವಾಗಿದ್ದರಿಂದ ರಾಜ್ಯ ಸರಕಾರದಿಂದ ಈ ರಸ್ತೆಗೆ ರೂ. 50 ಕೋ. ಗೆ ಮಂಜೂರಾತಿ ಮಾಡಿಸಲಾಗಿದ್ದು, ಇನ್ನೂ ಕೆಲವೆ ದಿನಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಆರಂಭವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌