ವಿಜಯಪುರ: ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರಸ್ತೆ ಮೇಲೆ ಹೋಗುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಜಯಪುರ ಎಸ್ಪಿ ಡಾ.ಎಚ್.ಡಿ.ಆನಂದಕುಮಾರ, ನಗರದ ಹೊರವಲಯದಲ್ಲಿರುವ ಇಟ್ಟಂಗಿಹಾಳ ರಸ್ತೆ ಎಕ್ಸಲೆಂಟ್ ಶಾಲೆಯ ಹತ್ತಿರ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಏಳು ಜನರನ್ನು ವಿಜಯಪುರ ಗ್ರಾಮಿಣ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಈ ಆರೋಪಿತರು ದರೋಡೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಇಟ್ಟಂಗಿಹಾಳ ದೊಡ್ಡಿಯ ವಿಜು ಉರ್ಫ ವಿಜಯ ಭೀರಪ್ಪ ಕರಾಡೆ(23), ಆನಂದ ಮಾಯಪ್ಪಾ ಡೇರೆ, ಹಣಮಂತ ಜಯಪ್ಪ ಖರಾತ, ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ, ಜತ್ತ ತಾಲೂಕಿನ ಬಬಲಾದಿ ಕರೆವಾಡಿಯ ಸಚೀನ ಮಧು ಗೋಪಣೆ (20), ತಿಕ್ಕುಂಡಿ ಕರೆವಾಡಿಯ ನವನಾಥ ಅಮಗೊಂಡ ಕರಾಡೆ(20), ಸಚಿನ ವಿಲಾಸ ಕಾಳೆ (21), ವಿಕಾಸ ಲಕ್ಷ್ಮಣ ರಾಣೆ (20) ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಇನ್ನು ಮೂರು ಜನ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಅಗಷ್ಟ 12 ರಂದು ಹಂಚಿನಾಳ ತಾಂಡಾ ಬಳಿ ರಾತ್ರಿ 10.20 ಗಂಟೆಗೆ ಬೈಕ್ ಮೇಲೆ ತೆರಳುತ್ತಿದ್ದ ತಮ್ಮನ್ನು ಸುತ್ತುವರೆದು ಬೆದರಿಸಿ, ಬಡಿಗೆ ಮತ್ತು ಕೈಯಿಂದ ಹಲ್ಲೆ ಮಾಡಿ, ತಮ್ಮ ಬಳಿ ಇದ್ದ ಹಣ ಮತ್ತು ಮೊಬೈಲ್ ಹಾಗೂ ಇನ್ನಿತರ ವಸ್ತುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ವಿಜಯಪುರ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಈ ತಂಡ ಏಳು ಜನ ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ ಒಟ್ಟು ರೂ. 5.13 ಲಕ್ಷ ಮೌಲ್ಯದ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ ಎರಡು ಮೊಬೈಲ್, ಕೈಗಡಿಯಾರ, ರೂ. 8200 ನಗದು, ದರೋಡೆಗೆ ಬಳಸಿದ ಐದು ಬೈಕ್‍ಗಳು, ಮಚ್ಚು, ಬಡಿಗೆ, ದೊಡ್ದ ಕುಡಗೋಲು, ವಾಯರ್ ಪೈಪ್ ಹಾಗೂ ಖಾರದ ಪುಡಿ ಸೇರಿವೆ.
ಈ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಡಿವೈಎಸ್ಪಿ ಸಿದ್ದೇಶ್ವರ ಮತ್ತು ವಿಜಯಪುರ ಗ್ರಾಮೀಣ ಸಿಪಿಐ ಸಂಗಮೇಶ ಪಾಲಬಾವಿ ಉಪಸ್ಥಿತರಿದ್ದರು.
ಈ ಪ್ರಕರಣವನ್ನು ಬೇಧಿಸಿದ ಎಲ್ಲ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವನ್ನು ಎಸ್ಪಿ ಎಚ್.ಡಿ.ಆನಂದಕುಮಾರ ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.