ವಿಜಯಪುರ: ಬಸವ ನಾಡು ವಿಜಯಪುರ ನಗರದ ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಕಳೆದ 29 ವಾರಗಳಿಂದ ಪ್ರತಿ ಸೋಮವಾರ ಸದ್ದಿಲ್ಲದೇ ಭಕ್ತರ ತಂಡವೊಂದು ಪ್ರಸಾದ ವಿತರಿಸುವ ಮೂಲಕ ದೇವರ ಸೇವೆ ಮಾಡುತ್ತಿದೆ. ಉದ್ಯಮಿ ಉಮಾಕಾಂತ ಲೋಣಿ ಅವರು 7ನೇ ಮಾರ್ಚ್ 2002 ರಿಂದ ಈ ಸೇವೆ ಆರಂಭಿಸಿದ್ದಾರೆ.
ಪ್ರತಿ ಸೋಮವಾರಕ್ಕೊಮ್ಮೆ ಉಮಾಕಾಂತ ಲೋಣಿ ಅವರ ಅಧ್ಯಕ್ಷತೆಯಲ್ಲಿ ಅವರ ಸ್ನೇಹಿತರು ಕೂಡಿಕೊಂಡು ಶ್ರೀ ಅಡವಿಶಂಕರಲಿಂಗ ಅನ್ನದಾಸೋಹ ಸಮಿತಿ ಹೆಸರಿನಲ್ಲಿ ಈ ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಪ್ರತಿ ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನ್ನಪ್ರಸಾದ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಈಗ ಶ್ರಾವಣ ತಿಂಗಳು ನಡೆಯುತ್ತಿರುವುದರಿಂದ ಪ್ರತಿ ಸೋಮವಾರ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಈಗ ಇವರು ಅನ್ನಪ್ರಸಾದ ಸೇವೆ ಮಾಡುತ್ತಿರುವುದು 29ನೇ ವಾರ ಪೂರೈಸಿದ್ದು, ಪ್ರತಿ ಸೋಮವಾರ ಸುಮಾರು 300 ರಿಂದ 400 ಜನ ಭಕ್ತಾದಿಗಳಿಗೆ ಪ್ರತಿ ಸೋಮವಾರ ಬೆ. 9.30ರಿಂದ ಮ. 2.30ರ ವರೆಗೆ ಶಿರಾ ಅಥವಾ ಸಜ್ಜಕ, ಬದನೆಕಾಯಿ ಪಲ್ಯ, ಪ್ರತಿ ವಾರ ಬೇರೆ ಬೆರೆ ತರಹದ ಅನ್ನವನ್ನು ತಯಾರಿಸಿ ವಿತರಿಸುತ್ತಿದ್ದಾರೆ.
ಈ ಸ್ನೇಹಿತರ ಬಳಗದಲ್ಲಿ ರವಿ ಮಿರ್ಜಿ, ರವಿ ಹೇರಲಗಿ, ಸಾಗರ ಶಿರಸ್ಯಾಡ, ಅರವಿಂದ ಬಣಗಾರ, ವಿಕಾಸ ಹೇರಲಗಿ, ಲಕ್ಷ್ಮಿ ಕೊಕಟನೂರ, ಉಮಾ ಯರನಾಳ ಸೇರಿಕೊಂಡು ಈ ಅನ್ನ ದಾಸೋಹಕ್ಕೆ ಸುಮಾರು ಐದರಿಂದ ಆರು ಸಾವಿರ ರೂಪಾಯಿ ಖರ್ಚು ಮಾಡುತ್ತಿರುವುದು ಗಮನಾರ್ಹವಾಗಿದೆ.