ವಿಜಯಪುರ: ಹುಬ್ಬಳ್ಳಿಯ ತಹಸೀಲ್ದಾರ ಶಶಿಧರ ಮಾಡ್ಯಾಳ ವಿನೂತನ ಯೋಜನೆಯಡಿ 100 ದಿನಗಳ ಬೈಕ್ ಯಾತ್ರೆ ಕೈಗೊಂಡಿದ್ದಾರೆ.
ಬಸವಣ್ಣನವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಿಂದ ಆರಂಭವಾದ ಈ ಯಾತ್ರೆಗೆ ವಿಜಯಪುರದಲ್ಲಿ ಉದ್ಯಮಿ ಬಾಬುಗೌಡ ಬಿರಾದಾರ ಸೇರಿದಂತೆ ನಾನಾ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮ ಆಯೋಜಿಸಿ ಸ್ವಾಗತ ಕೋರಿ ಶುಭ ಹಾರೈಸಿದರು.
ವಿಜಯಪುರ ನಗರದ ಹೊಟೇಲ್ ಮಧುವನ ಇಂಟರ ನ್ಯಾಶನಲ್ ಗೆ ಆಗಮಿಸಿದ ಶಶಿಧರ ಮಾಡ್ಯಾಳ ಮತ್ತು ಅವರ ಸ್ನೇಹಿತ ವಿಶ್ವ ಧಢೇಸೂರ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಾಬುಗೌಡ ಪಾಟೀಲ, ಶಿಕ್ಷಣ ಮತ್ತು ಸಬಲೀಕರ ಕುರಿತು ಜಾಗೃತಿಗೆ ಮುಂದಾಗಿರುವ ಶಶಿಧರ ಮಾಡ್ಯಾಳ ಈ ಯಾತ್ರೆ ಆರಂಭಿಸಿರುವುದು ಸಂತೋಷ ತಂದಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಡಿವೈಎಸ್ಪಿ ಮತ್ತು ಉದ್ಯಮಿ ಬಿ. ಆರ್. ಚೌಕಿಮಠ, ಡಾ. ಬಾಬುರಾಜೇಂದ್ರ ನಾಯಕ, ರಾಚುಗೌಡ ಪಾಟೀಲ, ಬಿಸನಾಳ, ರಾಜು ಮುತ್ತಿನಪೆಂಡಿಮಠ, ಅಮೀನ ಚೌಧರಿ ಮುಂತಾದವರು ಉಪಸ್ಥಿತರಿದ್ದರು.
ಬೈಕ್ ಮೇಲೆ ದೇಶ ಸಂಚಾರ
ಶಶಿಧರ ಮಾಡ್ಯಾಳ ಬಸವ ನಾಡು ವಿಜಯಪುರ ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳಿಂದ ಹುಬ್ಬಳ್ಳಿಯಲ್ಲಿ ತಹಸೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಶಿಕ್ಷಣವಂತರಾಗಿರಿ ನೀವೇ ಸಬಲರಾಗಿರಿ ಎಂಬ ಘೋಷವಾಕ್ಯ ಅಡಿಯಲ್ಲಿ ಈ ಯಾತ್ರೆ ಕೈಗೊಂಡಿದ್ದಾರೆ.
100 ದಿನಗಳ ಯಾತ್ರೆ
ಈ ಕುರಿತು ಬಸವ ನಾಡು ವೆಬ್ ಜೊತೆ ಮಾತನಾಡಿದ ಶಶಿಧರ ಮಾಡ್ಯಾಳ, 21ನೇ 2022ರಂದು ಆರಂಭವಾಗಿರುವ ಈ ಬೈಕ್ ಸಂಚಾರ ಡಿ. 5ರ ವರೆಗೆ 100 ದಿನ ನಡೆಯಲಿದೆ. ಪ್ರತಿದಿನ 400 ಕಿ. ಮೀ. ಪ್ರಯಾಣ ಮಾಡುತ್ತಿದ್ದೇವೆ. ಅವಧಿಯಲ್ಲಿ ನಾನಾ 24 ರಾಜ್ಯಗಳಿಗೆ ಭೇಟಿ ನೀಡುತ್ತಿದ್ದೇವೆ. ಅಲ್ಲದೇ, ದೇಶದ ನಾಲ್ಕು ಮಹಾನ್ ಸ್ತಂಭಗಳಾದ ಅಣ್ಣ ಬಸವಣ್ಣ, ಮಹಾತ್ಮಾ ಗಾಂಧಿ, ಡಾ. ಬಿ. ಆರ್. ಅಂಬೇಡ್ಕರ ಹಾಗೂ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಭೂಮಿಗೆ ಭೇಟಿ ನೀಡಿ ದೇಶದ 24 ಜನ ಪದ್ಮಶ್ರೀ ಪುರಸ್ಕೃತರನ್ನು ಭೇಟಿ ಮಾಡುತ್ತಿದ್ದೇವೆ ಎಂದು ತಮ್ಮ ಯಾತ್ರೆಯ ಉದ್ದೇಶದ ಕುರಿತು ಮಾಹಿತಿ ನೀಡಿದ್ದಾರೆ.
ಡುಕಾಟಿ ಕಂಪನಿಯ ಅತ್ಯಾಧುನಿಕ ಬೈಕ್‍ನಲ್ಲಿ ಸಂಚಾರ
ಶಶಿಧರ ಮಾಡ್ಯಾಳ ಡುಕಾಟಿ ಕಂಪನಿಯ ಅತ್ಯಾಶುನಿಕ ರಾಯಲ್ ಎನಫಿಲ್ಡ್ ಹಿಮಾಲಯನ್ ಬೈಕ್ ಮೇಲೆ ಯಾತ್ರೆಯಲ್ಲಿ ಕೈಗೊಂಡಿದ್ದಾರೆ.
ಹುಬ್ಬಳ್ಳಿಯ ತಹಸೀಲ್ದಾರ ಶಶಿಧರ ಮಾಡ್ಯಾಳ ಕೈಗೊಂಡಿರುವ ದೇಶ ಸಂಚಾರ ಮತ್ತು ಅವರ ಉದ್ದೇಶ ಯಶಸ್ವಿಯಾಗಲಿ ಎಂದು ಬಸವ ನಾಡು ಕೂಡ ಶುಭ ಹಾರೈಸುತ್ತದೆ.