ವಿಜಯಪುರ: ಗುಮ್ಮಟ ನಗರಿಯಲ್ಲಿ ಉಂಟಾಗುತ್ತಿರುವ ಭೂಕಂಪಕ್ಕೆ ಕೊಳವೆ ಭಾವಿಗಳ ಹೆಚ್ಚಳವೇ ಕಾರಣ ಎಂಬ ಶಂಕೆ ಬಲವಾಗಿದ್ದು, ಈ ಕುರಿತು ವಿಜಯಪುರ ಜಿಲ್ಲಾಡಳಿತ ಸ್ಪಷ್ಟ ಕಾರಣ ಪತ್ತೆ ಮಾಡಿ ಜನರಲ್ಲಿ ಉಂಟಾಗಿರುವ ಆಂತಕವನ್ನು ನಿವಾರಣೆ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ಮತ್ತು ಸಮಾಜ ಸೇವಕ ಉಮೇಶ ಕಾರಜೋಳ ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ನಾಡು ವಿಜಯಪುರ ಜಿಲ್ಲೆಯ ಕೊಲ್ಹಾರದಿಂದ ಮಹಾರಾಷ್ಟ್ರದ ಸೋಲಾಪುರದವರೆಗೆ ಭೂಮಿಯಡಿ ಏಕಶಿಲೆಯಿದೆ. ಆದರೆ, ಬೋರವೆಲ್ ಗಳ ಹೆಚ್ಚಳದಿಂದಾಗಿ ಈ ಏಕಶಿಲೆಗೆ ಧಕ್ಕೆಯಾಗುತ್ತಿದೆ, ಈ ಹಿನ್ನೆಲೆಯಲ್ಲಿ ಭೂಕಂಪನ ಸಂಭವಿಸುತ್ತಿದೆ ಎನ್ನುವ ಅನುಮಾನ ಕಾಡುತ್ತಿದೆ, ಈ ಅನುಮಾನಗಳಿಗೆ ಜಿಲ್ಲಾಡಳಿತ ತೆರೆ ಎಳೆದು, ಸ್ಪಷ್ಟವಾದ ಕಾರಣ ಹಾಗೂ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಭೂಕಂಪನ ಸಂಭವಿಸಿದಾಗ ಆಲಮಟ್ಟಿ ಜಲಾಶಯ, ಎನ್ ಟಿ ಪಿ ಸಿ ಗಳಿಂದಾಗಿ ಭೂಕಂಪನ ಉಂಟಾಗುತ್ತಿಲ್ಲ ಎಂಬ ವರದಿ ಜಿಲ್ಲಾಡಳಿತ ಬಳಿಯಿದೆ. ಇದನ್ನು ಅವಲೋಕಿಸಿದಾಗ ಕೊಲ್ಹಾರದಿಂದ ಸೋಲಾಪುರ ವರೆಗೆ ಏಕಶಿಲೆಯ ಅಡಿಯಲ್ಲಿ ವಿಜಯಪುರ ನಗರ ನೆಲೆಸಿದೆ. ಆದರೆ, ಬೋರವೆಲ್ ಗಳ ಸಂಖ್ಯೆ ಹೆಚ್ಚಳದಿಂದಾಗಿ ಏಕಶಿಲೆಗೆ ಧಕ್ಕೆಯಾಗುತ್ತಿದೆ, ಈ ಕಾರಣಕ್ಕಾಗಿ ಭೂಕಂಪನ ಸಂಭವಿಸುತ್ತಿದೆ, ಬೋರವೆಲ್ ಕೊರೆಯುವಾಗ ಏಕಶಿಲೆಗೆ ಧಕ್ಕೆ ಉಂಟಾಗುತ್ತಿರುವ ಅನುಮಾನವಿದೆ. ಸ್ಪಷ್ಟವಾದ ಅದ್ಯಯನ ನಡೆಸಿದರೆ ಇದಕ್ಕೆ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು.
ಭೂಗರ್ಭ ಇಲಾಖೆಯ ಸೇವೆಯಿಂದ ನಿವೃತ್ತರಾಗಿರುವ ಖ್ಯಾತ ಭೂಗರ್ಭ ಶಾಸ್ತ್ರಜ್ಞ ಡಾ. ಪ್ರಕಾಶ ಎಸ್. ಎಚ್. ಅವರು, ವಿಜಯಪುರ ಭೂಕಂಪನ ಕುರಿತು ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಹೀಗಾಗಿ ಅವರನ್ನು ವಿಜಯಪುರಕ್ಕೆ ಆಹ್ವಾನಿಸಲಾಗುವುದು ಎಂದು ಉಮೇಶ ಕಾರಜೋಳ ಇದೇ ವೇಳೆ ತಿಳಿಸಿದರು.
ಜಲ ಸಂರಕ್ಷಣೆ ಹೋರಾಟಗಾರ ಪೀಟರ್ ಅಲೆಕ್ಸಾಂಡರ್ ಮಾತನಾಡಿ, ದೊಡ್ಡ ದೊಡ್ಡ ಜಲಾಶಯಗಳ ನಿರ್ಮಾಣವೇ ಈ ರೀತಿಯ ಅಪಾಯಗಳಿಗೆ ಕಾರಣ, ದೊಡ್ಡ ಜಲಾಶಯಗಳ ನಿರ್ಮಾಣದ ಬದಲು ಕೆರೆಗಳನ್ನು ಸಂರಕ್ಷಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುವುದು ನನ್ನ ಅನಿಸಿಕೆ ಎಂದು ಹೇಳಿದರು.
ಈ ವಿದ್ಯಮಾನಗಳಿಗೆ ಮಾನವನ ನಿಸರ್ಗ ವಿರೋಧಿ ಧೋರಣೆ ಕಾರಣ, ನಿಸರ್ಗದ ವಿರುದ್ಧ ಧಕ್ಕೆ ತರುವ ಕೆಲಸದಿಂದಾಗಿ ಈ ಅಪಾಯವನ್ನು ನಾವೇ ಆಹ್ವಾನಿಸಿದ್ದೇವೆ ಎಂದು ಹೇಳಿದರು.
ಸಮಾಜ ಸೇವಕ ಮುನ್ನಾ ಭಕ್ಷಿ ಮಾತನಾಡಿ, ಭೂಕಂಪನದ ಭಯ ನಿವಾರಣೆ ಮಾಡಿ ಮುಂಜಾಗ್ರತೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ ಎಂದು ಇದೇ ವೇಳೆ ಆಗ್ರಹಿಸಿದರು.