ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭೂಕಂಪ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ.ದಾನಮ್ಮನವರ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭೂಕಂಪನಕ್ಕೆ ಸಂಬಂಧಿಸಿದಂತೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಭೂಗರ್ಭದಲ್ಲಿ ಚಿಕ್ಕ ಪ್ರಮಾಣದಲ್ಲಿ ಆಗುವ ಭೂಕಂಪನಗಳು ಕೆಲವೊಮ್ಮೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಭೂಕಂಪನದ ಬಗ್ಗೆ ಅನುಭವಕ್ಕೆ ಬಂದರೂ ಅದರಿಂದ ಜನತೆಗೆ ತೊಂದರೆಯೂ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಭೂಕಂಪನದ ಬಗ್ಗೆ ನಾನಾ
ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿ ಜನರು ಅನವಶ್ಯಕ ಭಯಪಡುವಂತಾಗಿದೆ. ಆದರೂ ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಆಗಾಗ ಅನುಭವಕ್ಕೆ ಬರುತ್ತಿರುವ ಭೂಕಂಪನದ ಬಗ್ಗೆ ಅಧ್ಯಯನ ನಡೆಸಬೇಕು. ಜಿಲ್ಲಾಡಳಿತಕ್ಕೆ ಅಗತ್ಯ ಮಾರ್ಗದರ್ಶನ ಮಾಡಬೇಕು ಎಂದು ಕೋರಿ ಈಗಾಗಲೇ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಧ್ಯಯನ ವರದಿ ಬರುವವರೆಗೆ ಮತ್ತು ತಜ್ಞರ ತಂಡ ಜಿಲ್ಲೆಗೆ ಆಗಮಿಸಿ ತರಬೇತಿ ಮತ್ತು ಮಾರ್ಗದರ್ಶನ ಮಾಡುವವರೆಗೆ ಸದಾಕಾಲ ಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರಿಗೆ ಡಿಸಿ ಮನವಿ
ಭೂಗರ್ಭದಲ್ಲಿ ಸಣ್ಣ ಮಟ್ಟದಲ್ಲಿ ಭೂಕಂಪನವು ಆಗುವುದು ಸ್ವಾಭಾವಿಕವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಭೂಕಂಪನಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಿಜಯಪುರಕ್ಕೆ ಭೇಟಿ ನೀಡಿದ ತಜ್ಞರನ್ನೊಳಗೊಂಡ ತಂಡದ ವರದಿಯ ಬಗ್ಗೆ ಅಧ್ಯಯನ ಮಾಡುತ್ತೇವೆ. ಭೂಕಂಪನದ ಬಗ್ಗೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಹೀಗಾಗಿ ಸಾರ್ವಜನಿಕರು ಭಯಪಡಬಾರದು ಎಂದು ಸಭೆಯಲ್ಲೊ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಭಯ ಹೋಗಲಾಡಿಸಿ
ಎಸ್ಪಿ ಎಚ್. ಡಿ. ಆನಂದಕುಮಾರ ಮಾತನಾಡಿ, ಕೆಲ ಸಂದರ್ಭದಲ್ಲಿ ಸಾಮಾನ್ಯವಾಗಿ ಘಟಿಸುವ ಸಾಧಾರಣ ಪ್ರಮಾಣದ ಭೂಕಂಪನದಿಂದ
ಯಾವುದೇ ರೀತಿಯ ತೊಂದರೆಯಾಗದು ಎಂಬುದರ ಬಗ್ಗೆ ಅಧಿಕಾರಿಗಳು ಜನತೆಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಈ ಸಭೆಯಲ್ಲಿ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ, ವಿಜಯಪುರ ತಹಸೀಲ್ದಾರ ಸಿದ್ಧರಾಯ ಬೋಸಗಿ, ಜಿಲ್ಲಾ ಮಟ್ಟದ ಅಧಿಕಾರಿಗಳಾದ ಡಾ. ರಾಜಕುಮಾರ ಯರಗಲ, ಈರಪ್ಪ ಆಶಾಪುರ, ಯಲ್ಲಮ್ಮ, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಕೇಶ ಜೈನಾಪುರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ಸರು.