Nursery CEO: ನರ್ಸರಿ ಅಭಿವೃದ್ಧಿಗೆ ವಿಜಯಪುರ ಜಿ. ಪಂ. ಸಿಇಓ ರಾಹುಲ್ ಶಿಂಧೆ ಚಾಲನೆ

ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ಆಹೇರಿ, ಶಿವಣಗಿ ಮತ್ತು ಮದಭಾವಿ ಗ್ರಾ. ಪಂ. ಗಳಿಗೆ ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಹೇರಿ ಗ್ರಾ. ಪಂ. ವ್ಯಾಪ್ತಿಯ ಅಂಕಲಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಗಳ ಸಹಭಾಗಿತ್ವದಲ್ಲಿ ಕೈಗೊಂಡ ನರ್ಸರಿ ಅಭಿವೃದ್ಧಿ ಕಾಮಗಾರಿಗೆ ಸಹ ಚಾಲನೆ ನೀಡಿದರು. ನಂತರ ನರ್ಸರಿ ಅಭಿವೃದ್ಧಿ ಘಟಕದಲ್ಲಿ ದ್ರಾಕ್ಷಿ ಸಸಿಗಳನ್ನು ಸಹ ಬೆಳೆಸಲು ಮಹಿಳಾ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಲಹೆ ಮಾಡಿದರು.

ನರ್ಸರಿ ವೀಕ್ಷಿದ ವಿಜಯಪುರ ಜಿ. ಪಂ. ಸಿಇಓ ರಾಹುಲ ಶಿಂಧೆ

ಈ ಘಟಕವನ್ನು ಮಾದರಿ ಘಟಕವನ್ನಾಗಿ ಮಾಡಿ ಸಸಿಗಳನ್ನು ರೈತರಿಗೆ ನಿಗದಿತ ದರದಲ್ಲಿ ವಿತರಿಸಲು ಹಾಗೂ ಸಸಿಗಳಿಗೆ ನಿಗದಿಪಡಿಸಿದ ದರಗಳ ಮಾಹಿತಿ ಫಲಕವನ್ನು ಅಳವಡಿಸಲು ಸೂಚಿಸಿದರು. ಇದೆ ವೇಳೆ ಸಿಇಓ ಅವರು ನರ್ಸರಿಯಲ್ಲಿರುವ ಸಸಿಗಳಿಗೆ ಸ್ವತಃ ತಾವೇ ನೀರುಣಿಸುವ ಮೂಲಕ ಸಂಭ್ರಮ ಪಟ್ಟು ಅಲ್ಲಿ ನೆರೆದಿರುವ ಎಲ್ಲರಿಗೂ ಮಾದರಿಯಾದರು.

ಸಂಜೀವಿನಿ-ನರ್ಸರಿ ಫಾರ್ಮ್ ಪ್ರಾರಂಭಿಸುವ ಪೂರ್ವದಲ್ಲಿ ಗ್ರಾ.‌ ಪಂ. ಮಟ್ಟದ ಒಕ್ಕೂಟದಿಂದ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಸಮುದಾಯ ಬಂಡವಾಳ ನಿಧಿಯನ್ನು ಸಾಲದ ರೂಪದಲ್ಲಿ ವಿತರಣೆ ಮಾಡಿದ್ದನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮಹಿಳೆಯರಿಗೆ ಪ್ರೇರೇಪಿಸಿದರು.

ಮಧಬಾವಿ ಗ್ರಾ.‌ ಪಂ. ವ್ಯಾಪ್ತಿಯ ಕವಲಗಿ ಗ್ರಾಮದಲ್ಲಿ ಎನ್ ಆರ್ ಎಲ್ ಎಂ ಯೋಜನೆಯಡಿ ಸಮುದಾಯ ಬಂಡವಾಳ ನಿಧಿಯ ಅನುದಾನದೊಂದಿಗೆ ಆರಂಭವಾಗಿರುವ ಭಾಗ್ಯವಂತಿ ಸ್ವ-ಸಹಾಯ ಸಂಘದ ಅಗರಬತ್ತಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಮಹಿಳೆಯರ ಕಾರ್ಯವನ್ನು ಕಂಡು ಸಂತಸ ವ್ಯಕ್ತಪಡಿಸಿದರು. ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಸರಕಾರದ ಇಂತಹ ಯೋಜನೆಗಳು ಸಹಕಾರಿಯಾಗಿವೆ. ಇಂಥ ಕ್ರೀಯಾಶೀಲ ಸ್ವ-ಸಹಾಯ ಸಂಘಗಳಿಗೆ ಪ್ರಥಮಾಧ್ಯತೆಯಲ್ಲಿ ನರ್ಸರಿ ಕಾಮಗಾರಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿ.‌ ಪಂ. ಯೋಜನಾ ನಿರ್ದೇಶಕ ಸಿ. ಬಿ. ದೇವರಮನಿ, ತಾ. ಪಂ. ಸಹಾಯಕ ನಿರ್ದೇಶಕ ಕಾಶೀಮಸಾಬ ಮಸಳಿ, ಆಹೇರಿ ಗ್ರಾ.‌ ಪಂ. ಅಧ್ಯಕ್ಷ ಬಸವರಾಜ ತಳವಾರ, ಆಹೇರಿ ಪಿಡಿಓ ಎಸ್. ಎಸ್.‌ ಮಾದರ, ಎನ್‌ಆರ್‌ಎಲ್‌ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ ಶಹಾಪುರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌