ಬೆಂಗಳೂರು: ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪ್ರತ್ಯೇಕವಾಗಿ 3.245 ಟಿಎಂಸಿ ನೀರನ್ನು ಲಿಫ್ಟ್ ಮಾಡಿ (ಆರ್.ಎಲ್.504.75 ಮೀ.ನಿಂದ ಆರ್.ಎಲ್.660.00 ಮೀ.ವರೆಗೆ) ಪೈಪ್ ಲೈನ್ ಅಳವಡಿಕೆಯೊಂದಿಗೆ ಇಂಡಿ ಮತ್ತು ವಿಜಯಪುರ ತಾಲೂಕುಗಳ (ನಾಗಠಾಣ ಮತಕ್ಷೇತ್ರ ಒಳಗೊಂಡಂತೆ) 28000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಇದಾಗಿದ್ದು, ಮೂರು ಹಂತಗಳ ರೂ. 2638 ಕೋ. ಅಂದಾಜು ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಇಂದು ತನ್ನಅನುಮೋದನೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಇಂಡಿ ಮತ್ತು ವಿಜಯಪುರ ತಾಲ್ಲೂಕುಗಳಡಿ ನೀರಾವರಿ ವಂಚಿತ ಸುಮಾರು 64000 ಹೆಕ್ಟೇರ್ ಪ್ರದೇಶವು ಕೃಷ್ಣಾ ಮೇಲ್ದಂಡೆ ಯೋಜನೆಯ ಯಾವುದೇ ಸ್ಕೀಂನಿಂದ ನೀರಾವರಿ ಸೌಲಭ್ಯಕ್ಕೆ ಒಳಪಟ್ಟಿರಲಿಲ್ಲ. ಆ ಕೊರತೆಯನ್ನು ನೀಗಿಸಲು ಈ ಯೋಜನೆಯನ್ನು ಮೂರು ಹಂತಗಳಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಸರಕಾರವು 2019-20ನೇ ವರ್ಷದ ಆಯವ್ಯಯ ಭಾಷಣದಲ್ಲಿ ರೂ. 250 ಕೋ. ವೆಚ್ಚದಲ್ಲಿ ಇಂಡಿ ಹಾಗೂ ನಾಗಠಾಣ ಮತಕ್ಷೇತ್ರ ವ್ಯಾಪ್ತಿಯ 28000 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಯೋಜನೆಯನ್ನು ಮೂರು ಹಂತಗಳಲ್ಲಿ ಅಂದರೆ, ಮೊದಲನೇ ಹಂತದಲ್ಲಿ ರೂ.760 ಕೋ. 2ನೇ ಹಂತದಲ್ಲಿ ರೂ. 939 ಕೋ ಮತ್ತು 3ನೇ ಹಂತದಲ್ಲಿ ರೂ. 939 ಕೋ. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಯೋಜನೆಯ ಮೊದಲನೇ ಹಂತದಲ್ಲಿ ರೂ.760 ಕೋ. ಅಂದಾಜು ಮೊತ್ತದಲ್ಲಿ Head Work including Electro-Mechanical Work, Jackwel cum pump house, Intake through & forebay and Raising Main upto Kupagaddi Tank for length of 15 KM length ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಇಂಡಿ ತಾಲೂಕಿನ ಬಹುಹಳ್ಳಿ ಕುಡಿಯುವ ನೀರು ಯೋಜನೆ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ಹಾಗೂ ಇತರೆ 41 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಂದಾಜು ಪಟ್ಟಿಗೆ ರಾಜ್ಯ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ ಎಂದು ಕಾರಜೋಳ ತಿಳಿಸಿದ್ದಾರೆ.
ಈ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅನುಷ್ಠಾನವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ (KTPP) ಅಡಿಯಲ್ಲಿ ಟೆಂಡರ್ ಆಧಾರದ ಮೇಲೆ ಗುತ್ತಿಗೆದಾರರಿಗೆ ವಹಿಸಲಾಗಿರುತ್ತದೆ. ಕಾಮಗಾರಿಗಳನ್ನು ಅನುಷ್ಠಾನ ಮಾಡುವಾಗ ಸ್ಥಳೀಯ ನಿರ್ಬಂಧನೆಗಳು, ಕಾಮಗಾರಿ ಅನುಷ್ಠಾನ, ಸ್ಥಳದಲ್ಲಿನ ಬದಲಾವಣೆ ಹಾಗೂ ಇತರೆ ನ್ಯಾಯಯುತವಾದ ಕಾರಣಗಳಿಂದ ಯೋಜನೆಯ ಅಂದಾಜು ಮೊತ್ತವು ಪರಿಷ್ಕೃತವಾಗಿರುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.