ವಿಜಯಪುರ: ಬಿಜೆಪಿ ನಾಯಕರು ಸಾವರ್ಕರ್ ರಥಯಾತ್ರೆ ಬಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡ ಹೋರಾಟಗಾರರ ರಥಯಾತ್ರೆ ನಡೆಸಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರಾದ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಇತರ ನಾಯಕರಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರ ನಾಯಕರು ಮತ್ತು ಹಲಗಲಿಯ ಬೇಡರು ಕಾಣಿಸುತ್ತಿಲ್ಲವೆ ಎಂದು ವಾಗ್ದಾಳಿ ನಡೆಸಿದರು.
ಬೇಕಿದ್ದರೆ ಬಿಜೆಪಿಯವರು ಕನ್ನಡ ಹೋರಾಟಗಾರರ ರಥಯಾತ್ರೆ ಮಾಡಿದರೆ ನಾವು ಕೂಡ ಬೆಂಬಲ ನೀಡುತ್ತೇವೆ. ಅಣ್ಣ ಬಸವಣ್ಣ, ಮೈಸೂರು ಅರಸರ ಫೋಟೊ ಇಟ್ಟುಕೊಂಡು ರಥಯಾತ್ರೆ ಮಾಡಲಿ ಎಂದು ಸವಾಲು ಹಾಕಿದ ಅವರು, ಕನ್ನಡ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮ ರೂಪಿಸುವ ಕುರಿತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷನಾಗಿ ಕಾಂಗ್ರೆಸ್ ರಾಜ್ಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಕಿತ್ತೂರು ಚೆನ್ನಮ್ಮ ಬ್ರಿಟಿಷರ ಕ್ಷಮೆ ಕೇಳಲಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ಕ್ಷಮೆ ಕೇಳಲಿಲ್ಲ. ಹಲಗಲಿ ಬೇಡರೂ ಬ್ರಿಟಿಷರ ಕ್ಷಮೆ ಯಾಚಿಸಲಿಲ್ಲ. ಆದರೆ ಬಿಜೆಪಿಯವರು ಇವರ ಫೋಟೊಗಳನ್ನಿಟ್ಟು ವಿವಾದಾತ್ಮಕ ಮತ್ತು ಬೇರೆ ರಾಜ್ಯದ ವ್ಯಕ್ತಿಯ ಫೋಟೊ ಇಟ್ಟುಕೊಂಡು ರಥಯಾತ್ರೆ ಮಾಡುವ ಮೂಲಕ ತಮ್ಮ ಘನತೆಗೆ ಕುಂದು ತಂದುಕೊಳ್ಳುತ್ತಿದ್ದಾರೆ. ಈ ಯಾತ್ರೆಗೆ ಚಾಲನೆ ನೀಡಿದ ಬಿ. ಎಸ್. ಯಡಿಯೂರಪ್ಪ ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಎಂ. ಬಿ. ಪಾಟೀಲ ಹೇಳಿದರು.
ಸಾವರ್ಕರ ಅವರು ಐದು ತಪ್ಪೊಪ್ಪಿಗೆ ಪತ್ರಗಳನ್ನು ಬ್ರಿಟಿಷರಿಗೆ ಬರೆದಿದ್ದರು. ಆ ದಾಖಲೆಗಳು ಲಭ್ಯ ಇವೆ. ಆದರೆ ಕಿತ್ತೂರ ರಾಣಿ ಚೆನ್ನಮ್ಮ ತಪ್ಪೊಪ್ಪಿಗೆ ಕೊಟ್ಟಿಲ್ಲ. ಸಂಗೊಳ್ಳಿ ರಾಯಣ್ಣ ತಪ್ಪೊಪ್ಪಿಗೆ ನೀಡಿಲ್ಲ. ಹಲಗಲಿ ಬೇಡರು ತಪ್ಪೊಪ್ಪಿಕೊಂಡಿಲ್ಲ. ಸುರಪುರ ನಾಯಕರೂ ತಪ್ಪೊಪ್ಪಿಲ್ಲ ಎಂದು ಅವರು ಹೇಳಿದರು. ಇವರೆಲ್ಲರು ಯಾವುದೇ ವಿವಾದ ಹೊಂದಿರದ ಮತ್ತು ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ. ಇವರ ಹೋರಾಟದ ಬಗ್ಗೆ ದಾಖಲಾತಿಗಳಿವೆ ಎಂದು ಅವರು ತಿಳಿಸಿದರು.
ಗಣೇಶೋತ್ಸವಗಳಲ್ಲಿ ಕನ್ನಡ ಹೋರಾಟಗಾರರ ಫೋಟೊ ಇಡಲು ಕಿವಿಮಾತು
ಇದೇ ವೇಳೆ ಗಣೇಶೋತ್ಸವಗಳಲ್ಲಿ ಸಾವರ್ಕರ ಫೋಟೊ ಇಡುವುದಾಗಿ ಹೇಳಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮತ್ತು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರ ನಿಲುವನ್ನು ಆಕ್ಷೇಪಿಸಿದ ಎಂ. ಬಿ. ಪಾಟೀಲ ಅವರು, ಸಾರ್ವಜನಿಕ ಗಣೇಶ ಉತ್ಸವಗಳಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನಿಟ್ಟು ಗೌರವಿಸಲಿ ಎಂದು ಸಲಹೆ ನೀಡಿದರು.
ತಾಜಬಾವಡಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ವಿಚಾರ
ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಕೇವಲ ಸರಕಾರವಷ್ಟೇ ಅಲ್ಲ ಖಾಸಗಿಯಾಗಿಯೂ ರೂ. 4.50 ಕೋ. ಸಂಗ್ರಹಿಸಿ ಒಟ್ಟು ರೂ. 9 ಕೋ. ಖರ್ಚುಮಾಡಿ ಐತಿಹಾಸಿಕ ಬಾವಡಿಗಳನ್ನು ಸ್ವಚ್ಚಗೊಳಿಸಿ ಆ ನೀರನ್ನು ಕುಡಿಯಲು ಹೊರತುಪಡಿಸಿ ದಿನಬಳಕೆಗೆ ಉಪಯೋಗಿಸಲು ಕ್ರಮಕೈಗೊಂಡಿದ್ದೇವೆ. ಇದರಿಂದ ಕೃಷ್ಣಾ ನದಿಯಿಂದ ಸರಬರಾಜಾಗುವ ನೀರಿನ ಅಗತ್ಯತೆ ಕಡಿಮೆಯಾಗಲಿದೆ. ಇದಕ್ಕಾಗಿ ಪಂಪ್ ಅಳವಡಿಸಿ ನಳಗಳನ್ನು ಕೂಡಿಸಿದ್ದೆ ಎಂದು ಮಾಜಿ ಸಚಿವರು ತಿಳಿಸಿದರು.
ತಾಜಬಾವಡಿಯನ್ನು ಕಲುಷಿತ ಮಾಡುವ ಬದಲು ಬೆಂಗಳೂರಿನಲ್ಲಿ ಸಾಂಕಿ ಟ್ಯಾಂಕ್ ಬಳಿ ಸೇರಿದಂತೆ ನಾನಾ ಕೆರೆಗಳ ಪಕ್ಕದಲ್ಲಿ ಹೊಂಡ ನಿರ್ಮಿಸಿದ ಮಾದರಿಯಲ್ಲಿ ಇಲ್ಲಿಯೂ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.
ಆದರೆ, ಗಣೇಶ ವಿಸರ್ಜನೆ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸುವುದು ಬೇಡ. ಈ ನಿಟ್ಟಿನಲ್ಲಿ ನಾನೂ ಕೂಡ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಜೊತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ತಾಜಬಾವಡಿಯನ್ನು ಸ್ವಚ್ಚಗೊಳಿಸಿದರೂ ಆ ನೀರನ್ನು ಸದ್ಬಳಕೆ ಮಾಡದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ನೀಡಲು ಅಪ್ಪು ಪಟ್ಟಣಶೆಟ್ಟಿ ಮನವಿ ಮಾಡಿದ್ದಾರೆ ಎಂಬ ವಿಷಯದ ಕುರಿತು ಗಮನ ಸೆಳೆದಾಗ ಪ್ರತಿಕ್ರಿಯೆ ನೀಡಿದ ಎಂ. ಬಿ. ಪಾಟೀಲ ಅವರು, ಈ ನೀರನ್ನು ಸದ್ಬಳಕೆ ಮಾಡುವ ಕುರಿತು ವಿಜಯಪುರ ಮಹಾನಗರ ಪಾಲಿಕೆ ಕ್ರಮಕೈಗೊಳ್ಳಬೇಕು. ಈ ಕುರಿತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಮಹಾನಗರ ಪಾಲಿಕೆಗೆ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಬೇಕು. ನಾವು ಐತಿಹಾಸಿಕ ಬಾವಡಿಗಳನ್ನು ಸ್ವಚ್ಚಗೊಳಿಸಿದ್ದೇವೆ. ಕೆರೆಗಳಿಗೆ ನೀರು ತುಂಬಿದ್ದೇವೆ. ಈ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿ ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೇರಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಉಪಸ್ಥಿತರಿದ್ದರು