ವಿಜಯಪುರ: ಬಹುದಿನಗಳಿಂದ ನೀರಾವರಿಯಿಂಚ ವಂಚಿತವಾಗಿರುವ ಇಂಡಿ ತಾಲೂಕಿನ 55 ಹಳ್ಳಿಗಳ ರೈತರು ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ರೈತರು ವಿಜಯಪುರದಲ್ಲಿ ಸಂಭ್ರಮಾಚರಣೆ ನಡೆಸಿದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ರೈತರು ಅನೇಕ ಧರಿಣಿ ಸತ್ಯಾಗ್ರಹ ಮತ್ತು ಹೋರಾಟ ಮಾಡುತ್ತಲೇ ಬಂದಿದ್ದರು. ಆದರೆ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ರೂ. 2368 ಕೋ ವೆಚ್ಚದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ.
ಈ ಹಿನ್ನೆಯಲಿ ವಿಜಯಪುರ ನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ನೇತೃತ್ವದಲ್ಲಿ ರೈತ ಮುಖಂಡರು, ಹೋರಾಟಗಾರು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ ಸಂಘದ ಪ್ರದೇಶ ಕಾರ್ಯದರ್ಶಿ ಗುರುನಾಥ ಬಗಲಿ ಮಾತನಾಡಿ, ಇಂಡಿ ಮತ್ತು ಚಡಚಣ ತಾಲೂಕುಗಳು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಬರಪೀಡಿತ ತಾಲೂಕುಗಳಾಗಿವೆ. ಸಾವಿರಾರು ಅಡಿ ಕೊರೆದರೂ ಬೋರವೆಲ್ ಗಳಲ್ಲಿ ಕುಡಿಯಲು ನೀರು ದೊರಕುತ್ತಿರಲಿಲ್ಲ. ಬೇಸಿಗೆಯಲ್ಲಿ ಮನುಷ್ಯರು ಹಾಗೂ ಜಾನುವಾರಗಳು ಕುಡಿಯುವ ನೀರಿಗಾಗಿ ಪರದಾಡುವ ಪರಸ್ಥಿತಿ ಇತ್ತು. ಹಾಗಾಗಿಯೇ ನಾವು ರೇವಣಸಿದ್ದೇಶ್ವರ ಏತ ನೀರಾವರಿ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿದ್ದೇವು. ಇಂದು ಜಲಸಂಪನ್ಮೂಲ ಸಚಿವರ ಕಾಳಜಿಯಿಂದಾಗಿ 55 ಗ್ರಾಮಗಳ ರೈತರು ಸಂತೋಷದಲ್ಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಝಳಕಿಯಲ್ಲಿ ನಾವು ನೀರಾವರಿ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಪ್ರತಿ ಪಕ್ಷದಲ್ಲಿದ್ದ ಗೋವಿಂದ ಕಾರಜೋಳ ಅವರು ಬೇಟಿ ನೀಡಿ ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ನಾನು ಯೋಜನೆ ಅನುಷ್ಠಾನ ಮಾಡಿಯೇ ವಿಶ್ರಮಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಈಗ ಕಾರಜೋಳ ಅವರು ಕೊಟ್ಟ ಮಾತಿನಂತೆ ರು. 2639 ಕೋ. ರೂ. ಬೃಹತ್ ಮೊತ್ತದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟದಿಂದ ಅನುಮೋದನೆ ಪಡೆದುಕೊಂಡಿದ್ದಾರೆ. ನಮ್ಮ ಭಾಗದ ರೈತರು ಇಂದು ಹಬ್ಬವನ್ನೇ ಮಾಡಿದ್ದಾರೆ. ಕಾರಜೋಳ ಅವರ ರೈತಪರ ಕಾಳಜಿಗೆ ಅವರನ್ನು ಹೊಗಳಲು ಪದಗಳಿಲ್ಲ. ಇಂಡಿ ಹಾಗೂ ಚಡಚಣ ಭಾಗದ ಸಮಸ್ತ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಅಕ್ತರ ಅಹ್ಮದ ಪಾಟೀಲ, ವಿಠ್ಠಲ ಏಣಗಿ, ಎಸ್. ಎಂ. ಬಿರಾದಾರ, ಮಲ್ಲಿಕಾರ್ಜುನ ಮೆಂಡೆಗಾರ, ಕಾಮಣ್ಣ ಬಗಲಿ ಉಪಸ್ಥಿತರಿದ್ದರು.