Savarkar Ganihar:ಸಾವರ್ಕರ್ ಜೈಲಿಗೆ ಹೋಗಿದ್ದು ಸ್ವಾತಂತ್ರ್ಯ ಹೋರಾಟಕ್ಕಲ್ಲ- ಬಿಜೆಪಿ ಬಹಿರಂಗ ಚರ್ಚೆಗೆ ಬರಲಿ- ಎಸ್. ಎಂ. ಪಾಟೀಲ‌ ಗಣಿಹಾರ ಸವಾಲು

ವಿಜಯಪುರ : ವೀರ ಸಾವರ್ಕರ್ ಸ್ಚಾತಂತ್ರ್ಯ ಹೋರಾಟಕ್ಕಾಗಿ ಜೈಲಿಗೆ ಹೋಗಿಲ್ಲ. ಅವರು ಜೈಲಿಗೆ ಯಾವ ಕಾರಣಕ್ಕಾಗಿ ಹೋಗಿದ್ದಾರೆ ಎಂಬುದರ ಬಗ್ಗೆ ದಾಖಲೆಗಳಿವೆ ಎಂದು ಕಾಂಗ್ರೆಸ್ ವಕ್ತಾರ ಎಸ್.‌ ಎಂ. ಪಾಟೀಲ ಗಣಿಹಾರ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೊರಾಟಗಾರ ಎಂಬುದನ್ನು ಸಾಬೀತು ಪಡಿಸಲು ಬಿಜೆಪಿಯವರು ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.

ವೀರ ಸಾವರಕರ ಸ್ವಾತಂತ್ರ್ಯ ಹೋರಾಟಗಾರರು‌ ಎಂಬುದನ್ನು ಬಿಜೆಪಿ ಮುಖಂಡರು ಸಾಬೀತುಪಡಿಬೇಕು. ಅವರೇ ಬೇಕಾದರೆ ವೇದಿಕೆ ಸಿದ್ಧಪಡಿಸಿದರೆ ಚರ್ಚೆಯಲ್ಲಿ ಭಾಗವಹಿಸಲು ಸಿದ್ಧ ಎಂದು ಹೇಳಿದರು.

ಕಾಂಗ್ರೆಸ್ ಕಚೇರಿ ಮೇಲೆ ಕೇವಲ ಸಾವರ್ಕರ್ ಫೋಟೋ ಅಂಟಿಸಿದರೆ ಯಾವ ಪ್ರಯೋಜನವೂ ಆಗುವುದಿಲ್ಲ. ಸಾವರಕರ್ ಅವರು ಸ್ವಾತಂತ್ರ್ಯ ಹೋರಾಟಗಾರರೇ ಅಲ್ಲ,. ಬ್ರಿಟೀಷ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಹಕರಿಸಿದ ಹಿನ್ನೆಲೆ ಇವರಿಗೆ ಶಿಕ್ಷೆಯಾಗಿತ್ತು. ಬ್ರಿಟನ್ ನಿಂದ ಇವರನ್ನು ವಿಚಾರಣೆಗೆ ಕರೆ ತರುವಾಗ ವಿದೇಶದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಅದರಲ್ಲಿ ವಿಫಲರಾದ ಕಾರಣ ಪೊಲೀಸರು ಇವರನ್ನು ಬಂಧಿಸಿ ಶಿಕ್ಷೆ ನೀಡಿ ಜೈಲಿಗೆ ಹಾಕಿದ್ದರು. ಅವರು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿದ್ದರೆ ಹೊರತು ಸ್ವಾತಂತ್ರ್ಯ ಹೋರಾಟಕ್ಕಾಗಿ ಅಲ್ಲವೇ ಅಲ್ಲ ಎಂದು ಅವರು ತಿಳಿಸಿದರು.

ಬಿಜೆಪಿಗರಿಗೆ ಮಾಡಲು ಬೇರೆ ಕೆಲಸವಿಲ್ಲ. ವರ್ಷಕ್ಕೊಮ್ಮೆ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸುತ್ತಾರೆ. ಅಭಿವೃದ್ಧಿಯ ಯಾವ ವಿಷಯವೂ ಇವರ ಬಳಿಯಿಲ್ಲ ಎಂದು ಗಣಿಹಾರ ವಾಗ್ದಾಳಿ ನಡೆಸಿದರು.

ಜಿನ್ನಾ ಅವರೊಂದಿಗೆ ಒಡನಾಟ ಹೊಂದಿದ್ದ ಸಾವರ್ಕರ್, ಮೂರು ರಾಜ್ಯಗಳಲ್ಲಿ ಮುಸ್ಲಿಂ ಲೀಗ್ ಜೊತೆ ಸೇರಿ ಸರಕಾರ ರಚಿಸಿದ್ದರು. ಆದರೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಯಾವ ಹೋರಾಟದಲ್ಲೂ ಭಾಗಿಯಾಗಿರಲಿಲ್ಲ. ಹಿಂದೂ ಮಹಾಸಭಾ ಮತ್ತು ಅಭಿನವ ಭಾರತ ಸಂಘಟನೆ ಮೂಲಕ ಬ್ರಿಟೀಷರಿಗೆ ಬೆಂಬಲ ನೀಡಿದರು. ಸುಭಾಷಚಂದ್ರ ಭೋಸ್ ಅವರ ಸೈನ್ಯವನ್ನು ಸೇರಬೇಡಿ ಎಂದು ಹೇಳಿದರು. ಬ್ರಿಟೀಷರ ಸರಕಾರಕ್ಕೆ ಬೆಂಬಲ ನೀಡಿ ಎಂದು ಜನರಿಗೆ ಹೇಳುತ್ತಿದ್ದರು. ಭಾರತ- ಪಾಕಿಸ್ತಾನ ವಿಭಜನೆ ಸಂದರ್ಭದಲ್ಲಿ ಜಿನ್ನಾ ಜೊತೆ ಸೇರಿ‌ ಬ್ರಿಟೀಷರ ಪರ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಬಳಕೆ ಬೇಡ

ಇದೇ ವೇಳೆ ಗಣೇಶೋತ್ಸವ ಸಂದರ್ಭದಲ್ಲಿ ಸಾವರ್ಕರ ಫೋಟೋ ಇಡುವುದು ಬೇಡ. ಗಣೇಶ ದೇವರು. ‌ಸಾವರ್ಕರ್ ದೇವರಲ್ಲ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಬೇಕಿದ್ದರೆ ವಿಶ್ವಗುರು ಬಸವಣ್ಣನವರ ಭಾವಚಿತ್ರ ಇಡಲಿ. ಯಡಿಯೂರಪ್ಪ ಅವರು ಸಾವರ್ಕರ್ ಫೋಟೋ ಹೊತ್ತುಕೊಂಡು ತಿರುಗಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರು ಬೇಕಿದ್ದರೆ ಬಸವಣ್ಣನವರ ಬದಲು ಅವರ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡಲಿ ಎಂದು ಎಸ್. ಎಂ. ಪಾಟೀಲ ಗಣಿಹಾರ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಾಹೇಬಗೌಡ ಬಿರಾದಾರ, ಡಾ. ರವಿ ಬಿರಾದಾರ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌