ವಿಜಯಪುರ: ಶಿವದಾಸ ಘೋಷ ಅವರ ಚಿಂತನೆಗಳಿಲ್ಲದೆ ಇಂದು ದೇಶದಲ್ಲಿ ಸಮಾಜವಾದ ಸ್ಥಾಪನೆಮಾಡಲು ಸಾಧ್ಯವಿಲ್ಲ. ಎಂದು ಎಸ್ ಯು ಸಿ ಐ ಕಮ್ಯೂನಿಷ್ಟ ಪಕ್ಷದ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಡಾ. ಟಿ. ಎಸ್. ಸುನೀತಕುಮಾರ ಹೇಳಿದರು.
ವಿಜಯಪುರ ನಗರದಲ್ಲಿ ಎಸ್ ಯು ಸಿ ಐ ಜಿಲ್ಲಾ ಘಟಕ ಆಯೋಜಿಸಿದ್ದ ಮಹಾನ್ ಮಾರ್ಕ್ಸವಾದಿ ಚಿಂತಕ ಶಿವದಾಸ ಘೋಷ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾರ್ಕ್ಸವಾದ ಕೇವಲ ರಾಜಕೀಯ ಸಿದ್ದಾಂತವಲ್ಲ. ಅದೊಂದು ಜೀವನ ವಿಧಾನವಾಗಿದೆ. ಇಂಥ ಮಾರ್ಕ್ಸವಾದವನ್ನು ಇಂದು ದೇಶದ ಜನತೆ ಅಳವಡಿಕೊಳ್ಳಬೇಕು. ಜೊತೆಗೆ ಕಾರ್ಮಿಕ ವರ್ಗ ಸಾಂಸ್ಕೃತಿ ಬೆಳೆಸಿಕೊಂಡು ಶೋಷಿತರ ವಿಮುಕ್ತಿಗೆ ಕೆಲಸ ಮಾಡಲು ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.
ಲೆನಿನ್ ಸ್ಟಾಲಿನ್ ಮತ್ತು ಮಾವೋ ಜೆಡಾಂಗ್ ಅವರ ನಂತರ ಅಂತಾರಾಷ್ಟ್ರೀಯ ಮಟ್ಟದ ಕಮ್ಯೂನಿಸ್ಟ್ ಸಿದ್ದಾಂತಕ್ಕೆ ಶಿವದಾಸ ಘೋಷ ನೀಡಿದ ಕೊಡುಗೆ ಅನನ್ಯವಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಮ್ಯೂನಿಸ್ಟ ಚಳವಳಿಗಳು ಶಿವದಾಸ ಘೋಷ ಅವರ ಚಿಂತನೆಗಳಿಲ್ಲದೆ ಇಂದು ತಮ್ಮ ಗಮ್ಯವನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಅವರು ಜಗತ್ತಿನಾದ್ಯಂತ ಬಂಡವಾಳಶಾಹಿಗಳ ಕುತಂತ್ರದಿಂದಾಗಿ ಕಮ್ಯೂನಿಷ್ಟ್ ಚಿಂತನೆಗೆ ಹಿನ್ನಡೆಯಾದಾಗ ಶಿವದಾಸ್ ಘೋಷ್ ರವರು ಹೊಸ ಚಿಂತನೆಗಳನ್ನು ತುಂಬಿ ಮಾರ್ಕ್ಸವಾದವನ್ನು ಮತ್ತೇ ಬಲಿಷ್ಟಗೊಳಿಸಿದ್ದಾರೆ ಎಂದು ಡಾ. ಟಿ. ಎಸ್. ಸುನೀತಕುಮಾರ ಹೇಳಿದರು.
ಎಸ್ ಯು ಸಿ ಐ ಕಮ್ಯೂನಿಷ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗ ಬಿ. ಭಗವಾನರೆಡ್ಡಿ ಮಾತನಾಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥೆಯು ತನ್ನ ಪಾತ್ರವನ್ನು ಮುಗಿಸಿದೆ. ದೇಶದಲ್ಲಿ ಕೇಂದ್ರ ಬಿಜೆಪಿ ಸೇರಿದಂತೆ ಜಗತ್ತಿನೆಲ್ಲೆಡೆ ಎಲ್ಲಾ ಆಳುವ ಸರಕಾರಗಳು ಇಂದು ಜನ ಹೋರಾಟಗಳಿಂದ ಹೆದರಿವೆ. ಹೀಗಾಗಿ ಹೋರಾಟಗಳನ್ನು ಹತ್ತಿಕ್ಕಲು ಫ್ಯಾಸಿವಾದಿ ಕ್ರಮವನ್ನು ಕ್ರಮಗೊಳ್ಳುತ್ತಿವೆ. ಆದರೂ ಇವರ ದುರಾಡಳಿತದ ವಿರುದ್ದ ಜನತೆ ನಿರಂತರವಾಗಿ ಬೀದಿಗಿಳಿಯುತ್ತಿದ್ದಾರೆ. ಆದರೆ ಈ ಹೋರಾಟಗಳಿಗೆ ಸಂಘಟಿತ ಸ್ವರೂಪ ಮತ್ತು ಕ್ರಾಂತಿಕಾರಿ ಪಕ್ಷದ ನೇತೃತ್ವದ ಸಿಗದ ಹೊರತು ಹೋರಾಟಗಳು ಗುರಿಮುಟ್ಟಲು ಸಾಧ್ಯವಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಯುವಜನರು ಬೀದಿಗಿಳಿದು ಹೋರಾಡಬೇಕು ಮತ್ತು ಈ ದೇಶವನ್ನು ಬಂಡವಾಳಶಾಹಿಗಳ ಕಪಿಮುಷ್ಠಿಯಿಂದ ಬಿಡುಗಡೆ ಮಾಡಿ ಸಮಾಜವಾದಿ ಸಮಾಜ ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್ ಯೂ ಸಿ ಐ ಕಮ್ಯೂನಿಷ್ಟ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಎಚ್. ಟಿ., ಸಿದ್ದಲಿಂಗ ಬಾಗೇವಾಡಿ, ಎಚ್. ಟಿ. ಭರತಕುಮಾರ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಕ್ರಾಂತಿಕಾರಿ ಗೀತೆಗಳನ್ನು ಹಾಡಲಾಯಿತು.
ಇದೇ ಸಂದರ್ಭದಲ್ಲಿ ಶಿವದಾಸ ಘೋಷ ಅವರ ಮೂರು ಕೃತಿಗಳಾದ ಆಗಸ್ಟ್ 15 ಸ್ವಾತಂತ್ರ್ಯ ಮತ್ತು ಜನತೆಯ ವಿಮುಕ್ತಿ, ಭಾರತದಲ್ಲಿ ಸಾಂಸ್ಕೃತಿಕ ಚಳವಳಿಗಳು ಮತ್ತು ನಮ್ಮ ಕರ್ತವ್ಯಗಳು ಮತ್ತು ಚೀನಾದ ಸಾಂಸ್ಕೃತಿಕ ಕ್ರಾಂತಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.