Savarkar Study Center: ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವೀರ ಸಾವರ್ಕರ ಅಧ್ಯಯನ ಪೀಠ ಸ್ಥಾಪನೆಗೆ ಆಗ್ರಹಿಸಿ ಉಮೇಳ ಕಾರಜೋಳ ನೇತೃತ್ವದಲ್ಲಿ ಮನವಿ ಸಲ್ಲಿಕೆ

ವಿಜಯಪುರ: ವಿಜಯಪುರ ಜಿಲ್ಲೆಯ ತೊರವಿ ಬಳಿ ಇರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವೀರ ಸಾವರ್ಕರ ಅಧ್ಯಯನ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಯುವ ಭಾರತ ಪದಾಧಿಕಾರಿಗಳು ವಿವಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮತ್ತು ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ, ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಸ್ಥಾಪನೆಯಾಗಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಸಬಲೀಕರಣ ಹಾಗೂ ಶಿಕ್ಷಣ ಪ್ರಸಾರದ ಉನ್ನತ ಧ್ಯೇಯವನ್ನು ಸಾಕಾರಗೊಳಿಸುವಲ್ಲಿ ನಿರತವಾಗಿದೆ.  ಉತ್ತರ ಕರ್ನಾಟಕ ಭಾಗದ ಅನೇಕ ಮಹಿಳೆಯರಿಗೆ ಜ್ಞಾನಪ್ರಸಾದ ಉಣಬಡಿಸುತ್ತಿದೆ.  ಈ ಭಾಗದಲ್ಲಿ ಅನೇಕ ಮಹಿಳೆಯರು, ವೀರ ಸಾವರ್ಕರ ಅವರ ಬಗ್ಗೆ ಉನ್ನತ ಸಂಶೋಧನೆ ಮಾಡಲು ಆಸಕ್ತಿ ಹೊಂದಿದ್ದಾರೆ.  ಹೀಗಾಗಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು.  ಇದರಿಂದ ಸಾವರ್ಕರ ಅವರು ದೇಶಕ್ಕಾಗಿ ನೀಡಿದ ಕೊಡುಗೆಗಳನ್ನು ಜನತೆಗೆ ತಿಳಿಸಬಹುದಾಗಿದೆ ಎಂದು ಹೇಳಿದರು.

ವೀರ ಸಾವರ್ಕರ ಅಧ್ಯಯನ ಪೀಠ ಸ್ಥಾಪಿಸುವಂತೆ ಆಗ್ರಹಿಸಿ ಉಮೇಶ ಕಾರಜೋಳ ನೇತೃತ್ವದಲ್ಲಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು

ಸಾವರ್ಕರ್ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಅನನ್ಯ.  ಕಾಲಾಫಾನಿ ಶಿಕ್ಷೆ ಅನುಭವಿಸಿದ ಮಹಾನ್ ಹೋರಾಟಗಾರ.  ತಮ್ಮ ಜೀವನದ ಮೂರನೇಯ ಒಂದು ಭಾಗವನ್ನು ಜೈಲಿನಲ್ಲಿಯೇ ಕಳೆದ ಸ್ವಾತಂತ್ರ್ಯ ಯೋಧ.  . ಜೈಲಿನಲ್ಲಿಯೂ ದೇಶಾಭಿಮಾನದ ಜಾಗೃತಿ ಸಂದೇಶದ ಸಾಹಿತ್ಯವನ್ನು ಗೋಡೆಗಳ ಮೇಲೆ ಬರೆದ ಮಹಾನ್ ಮೇಧಾವಿ.  ಸ್ವಾತಂತ್ರ್ಯ ಹೋರಾಟದ ಜೊತೆಗೆ ದಲಿತರ ಶ್ರೇಯೋಭಿವೃದ್ಧಿಗಾಗಿಯೂ ಶ್ರಮಿಸಿದ ಮಹಾನ್ ಚೇತನರಾಗಿದ್ದಾರೆ ಎಂದು ಅವರು ಹೇಳಿದರು.

ಅಸ್ಪೃಶ್ಯತೆ ನಿರ್ಮೂಲನೆಗೆ ಅವಿರತ ಪ್ರಯತ್ನ, ರತ್ನಗಿರಿಯಲ್ಲಿ ದಲಿತರ ಪಾದಪೂಜೆ, ಅಸ್ಪೃಶ್ಯರಿಗೆ ಪುಸ್ತಕ ಜ್ಞಾನ ವಿತರಿಸಿ ಯಜ್ಞೋಪವೀತ ಧಾರಣೆ ಮಾಡಿ ಜ್ಞಾನ ಹಂಚಿದ ಲೋಕನಾಯಕ ವೀರ ಸಾವರಕರ.  ಹೀಗಾಗಿ ಈ ಮಹಾನ್ ನಾಯಕನ ಕುರಿತು ಸುದೀರ್ಘವಾದ ಅಧ್ಯಯನ ನಡೆಸಬೇಕಾದ ಅವಶ್ಯಕತೆ ಇದೆ,  ಅಲ್ಲದೇ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ವೀರ ಸಾವರಕರ ಅವರ ಅಧ್ಯಯನ ಪೀಠ ಸ್ಥಾಪನೆಯಾದರೆ ಅತ್ಯಂತ ಅನುಕೂಲವಾಗಲಿದೆ. ಈ ಮನವಿಯನ್ನು ಪುರಸ್ಕರಿಸಿ ಅಧ್ಯಯನಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.  ಪೀಠ ಸ್ಥಾಪನೆಗೆ ಅವಶ್ಯವಿರುವ ಹಣವನ್ನು ಸಮಾಜದಲ್ಲಿ ಸಂಗ್ರಹಿಸಿ ಸಹ ನೀಡುವ ಮಹತ್ವದ ಕಾರ್ಯ ಮಾಡಲಾಗುವುದು.  ಕೂಡಲೆ ವಿಶೆಷ ಸಿಂಡಿಕೆಟ ಸಭೆಯನ್ನು‌ಕರೆದು ಪೀಠ ಸ್ಥಾಪನೆಯ ಪ್ರಸ್ಥಾವನೆಯನ್ನು ಸರಕಾರಕ್ಕೆ ಕಳುಹಿಸಬೇಕು ಎೞದು ಉಮೇಶ ಕಾರಜೋಳ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ಬಸವರಾಜ ಯಾದವಾಡ, ವೀರೇಶ ಗೊಬ್ಬೂರ,  ಗಿರೀಶ ಕುಲಕರ್ಣಿ, ಸಂಗಮೇಶ ಸಗರ, ಸತೀಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌