ವಿಜಯಪುರ: ಅರಣ್ಯ, ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಗುತ್ತಿ ಬಸವಣ್ಣ ಏತ ನೀರಾವರಿಯ ಯೋಜನೆಯ ಕೇಂದ್ರ ಸ್ಥಳದಲ್ಲಿ ಮೂರು ನೀರಿನ ಮೋಟರಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವರು ನಗರದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಪಂಪ್‌ಗಳ ರಿಪೇರಿ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ ಈ ಕಾಲುವೆ ನೀರಿನ ಮೇಲೆ ಅವಲಂಬಿತರಾದ ರೈತರಿಗೆ ಸಮರ್ಪಕ ನೀರು ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಗ್ರಾಮೀಣ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ರೂ. 20 ಕೋ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 50 ಕಿ. ಮೀ. ವರೆಗೆ ಈ ಕಾಲುವೆಯ ನೀರು ಹರಿಯಲಿದೆ. ಸಿಂದಗಿ ಶಾಸಕ ರಮೇಶ ಭೂಸನೂರ ಅವರು ಮತಕ್ಷೇತ್ರದ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಶಾಸಕ ರಮೇಶ ಭೂಸನೂರ ಮಾತನಾಡಿ, ಸಿಂದಗಿ ಪಟ್ಟಣದಲ್ಲಿನ ರಸ್ತೆಗಳು ಸರಿಪಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ. ನಗರ ಸೌಂದರ್ಯೀಕರಣಕ್ಕಾಗಿ ಸಿಂದಗಿ ನಗರಕ್ಕೆ ರೂ. 40 ಕೋ. ಅನುದಾನ ಮೀಸಲಿಡಲಾಗಿದೆ. ಅಂದಾಜು ರೂ. 6.50 ಕೋ. ವೆಚ್ಚದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಕೆಇಬಿವರೆಗೆ ರಸ್ತೆ ಕಾಮಗಾರಿ ಮಂಜೂರಾಗಿದೆ. ಅಂಬೇಡ್ಕರ್ ವೃತ್ತದಿಂದ ಮೊರಟಗಿ ನಾಕಾವರೆಗೆ ರೂ. 5 ಕೋ. ಗಳ ಸಿಸಿ ರಸ್ತೆಯ ಕಾಮಗಾರಿ, ಬಸವೇಶ್ವರ ವಿವೇಕಾನಂದ ವೃತ್ತದಿಂದ ಬೈಪಾಸವರೆಗೆ ರೂ. 5 ಕೋ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಬಿ. ಪಾಟೀಲ ಸಾಸನೂರ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ, ಎಸ್ಪಿ ಎಚ್. ಡಿ. ಆನಂದಕುಮಾರ, ಜಿ. ಪಂ. ಸಿಇಓ ರಾಹುಲ್ ಶಿಂಧೆ, ತಹಸೀಲ್ದಾರ ನಿಂಗಣ್ಣ ಬಿರಾದಾರ, ಪುರಸಭೆ ಮುಖ್ಯಾಧಿಕಾರಿ ರಾಜೇಶ್ವರಿ ತುಂಗಳ, ಮುಖಂಡರಾದ ಅಶೋಕ ಅಲ್ಲಾಪೂರ, ರವಿಕಾಂತ ನಾಯ್ಕೋಡಿ, ಈರಣ್ಣ ರಾವೂರ, ಪುರಸಭೆ ಸದಸ್ಯರಾದ ಹಣಮಂತ ಸುಣಗಾರ, ಭಾಷಾಸಾಬ ತಾಂಬೂಳಿ, ರಾಜಣ್ಣಿ ನಾರಾಯಣಕರ, ಗೊಲ್ಲಾಳ ಬಂಕಲಗಿ, ಸೈಪನ್ ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.